ತಿಪಟೂರಿನ ಉಪಕಾರಾಗೃಹದಲ್ಲಿ ಎಣ್ಣೆ ಹೊಡೆದು ದಾಂದಲೆ ಮಾಡಿದ ಕೈದಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Jail--02

ತುಮಕೂರು, ಫೆ.15- ಮದ್ಯಪಾನ ಮಾಡಿದ ಅಮಲಿನಲ್ಲಿ ಸುಮಾರು ಇಪ್ಪತ್ತೇಳು ಜನ ಕೈದಿಗಳು ಜೈಲಿನ ಬಾಗಿಲುಗಳು,ಟಿ.ವಿ, ಟೇಬಲ್, ಕಾಗದಪತ್ರಗಳಿಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿ ಸ್ಥಳಕ್ಕೆ ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ತಿಪಟೂರಿನ ಉಪಕಾರಾಗೃಹದಲ್ಲಿ ಮುಂಜಾನೆ 2.30ರಲ್ಲಿ ನಡೆದಿದೆ.  ಜೈಲಿನ ಮುಖ್ಯದ್ವಾರವನ್ನು ಬಂದ್ ಮಾಡಿ ಕೈದಿಗಳು ಮನಬಂದಂತೆ ವರ್ತಿಸಿ ಪ್ರಧಾನ ನ್ಯಾಯಾಧೀಶರನ್ನು ಇಲ್ಲಿಗೆ ಕರೆಸಬೇಕೆಂದು ಪಟ್ಟು ಹಿಡಿದು ದಾಂಧಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಜಿಲ್ಲೆಯ ಹೊರಭಾಗದಲ್ಲಿರುವ ಬಂಧೀಖಾನೆಯಲ್ಲಿ ಒಟ್ಟು ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ 27 ಜನ ಕೈದಿಗಳಿದ್ದು,   ಜೈಲಿನಲ್ಲಿ ರಾತ್ರಿ ಮೂವರು ಸಿಬ್ಬಂದಿ ಮಾತ್ರ ಕರ್ತವ್ಯದಲ್ಲಿದ್ದರು.

ಪೆರೋಲ್ ಮೇಲೆ ಆಚೆ ಹೋಗಿದ್ದ ಹರೀಶ್ ಎಂಬುವನು ರಾತ್ರಿ ಜೈಲಿಗೆ ಬಂದಿದ್ದ. ಈತ ಬರುವಾಗ ಜೈಲಿನ ಸಿಬ್ಬಂದಿ ಸೇರಿದಂತೆ ದುಬಾರಿ ವೆಚ್ಚದ ಮದ್ಯದ ಬಾಟಲಿಗಳನ್ನು ತಂದಿದ್ದರು ಎನ್ನಲಾಗಿದೆ. ಇದೇ ಈಗ ಸಿಬ್ಬಂದಿಗಳಿಗೆ ಮುಳುವಾಗಿದೆ. ರಾತ್ರಿ 11.30ರ ನಂತರ ಜೈಲಿನಲ್ಲಿದ್ದ ಎಲ್ಲಾ ಕೈದಿಗಳು ಸೇರಿ ಮದ್ಯಪಾನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕೆಲವು ಕೈದಿಗಳು ಪರಸ್ಪರ ಜಗಳವಾಡಿದ್ದಾರೆ. ನಂತರ ಎಲ್ಲರೂ ಕೂಗಾಡಿ ಕೇಕೆ ಹಾಕಿಕೊಂಡು ರಾದ್ಧಾಂತ ಮಾಡಿದ್ದಾರೆ.
ಪ್ರಮುಖವಾಗಿ ಹರೀಶ್, ಹೆಜಾಲ್, ಸತೀಶ್, ನಾಗೇಂದ್ರ, ರಂಗಸ್ವಾಮಿ ಸೇರಿದಂತೆ ಇತರರು ಜೈಲಿನಲ್ಲಿದ್ದ ಎಲ್ಲಾ ಕೈದಿಗಳನ್ನು ಒಟ್ಟುಗೂಡಿಸಿಕೊಂಡು ದಾಂಧಲೆ ನಡೆಸಿದ್ದಾರೆ.

ಮೂರ್ನಾಲ್ಕು ಗಂಟೆ ಜೈಲಿನ ಒಳಗಡೆ ರಣಾಂಗಣ ಏರ್ಪಟ್ಟಿತ್ತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಕೂಡಲೇ ತಿಪಟೂರು ನಗರ ಠಾಣೆ ಪೊಲೀಸರಿಗೆ ಜೈಲಿನ ಸಿಬ್ಬಂದಿ ವಿಷಯ ತಿಳಿಸಿದ್ದಾರೆ. ಕೂಡಲೇ ಡಿವೈಎಸ್ಪಿ ವೇಣುಗೋಪಾಲ್, ತಿಪಟೂರು ಗ್ರಾಮಾಂತರ ಠಾಣೆ ಇನ್ಸ್‍ಪೆಕ್ಟರ್ ದೀಪಕ್ ಸೇರಿದಂತೆ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಜೈಲಿನ ಮುಖ್ಯದ್ವಾರ ತೆರೆಯುವಂತೆ ಎಷ್ಟೇ ಹೇಳಿದರೂ ಬಾಗಿಲು ತೆರೆಯದ ಕೈದಿಗಳು ಸ್ಥಳಕ್ಕೆ ನ್ಯಾಯಾಧೀಶರನ್ನು ಕರೆಸುವಂತೆ ಪಟ್ಟು ಹಿಡಿದಿದ್ದಾರೆ. ಅಷ್ಟರಲ್ಲೇ ವಿಷಯ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಗೋಪಿನಾಥ್ ಅಧಿಕಾರಿಗಳ ಜೊತೆ ಸ್ಥಳಕ್ಕೆ ದೌಡಾಯಿಸಿ ವಿವಾದ ಬಗೆಹರಿಸಲು ಯತ್ನಿಸಿದರು.

ಈ ಸಂದರ್ಭದಲ್ಲಿ ಹಲವು ಕೈದಿಗಳು ಬೆಂಕಿಯಿಂದ ಉರಿಯುತ್ತಿದ್ದ ಕೆಲವು ವಸ್ತುಗಳನ್ನು ಪೊಲೀಸರ ಮೇಲೆ ಎಸೆದಿರುವುದಲ್ಲದೆ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಮನವೊಲಿಕೆಗೆ ಎಸ್‍ಪಿಯವರು ಎಷ್ಟೇ ಪ್ರಯತ್ನಿಸಿದರೂ ಫಲ ನೀಡದ ಹಿನ್ನೆಲೆಯಲ್ಲಿ ಅಂತಿಮವಾಗಿ ಡಾ.ದಿವ್ಯಾಗೋಪಿನಾಥ್ ಅವರು ನ್ಯಾಯಾಧೀಶರ ಗಮನಕ್ಕೆ ತಂದು ಘಟನೆಯ ವಿವರಣೆ ನೀಡಿದ್ದಾರೆ.  ನಂತರ ಸ್ಥಳಕ್ಕಾಗಮಿಸಿದ ನ್ಯಾಯಾಧೀಶರು ಕೈದಿಗಳ ಜೊತೆ ಮಾತುಕತೆ ನಡೆಸಿ ಬಾಗಿಲು ತೆರೆಯುವಂತೆ ಸೂಚಿಸಿದ್ದಾರೆ. ಆದರೆ ನ್ಯಾಯಾಧೀಶರ ಮಾತಿಗೆ ಕಿವಿಗೊಡದೆ ಮತ್ತೆ ತಮ್ಮ ದಾಂಧಲೆ ನಡೆಸಿದ್ದಾರೆ.  ಕಡೆಗೆ ಅಗ್ನಿಶಾಮಕದಳ ಸಿಬ್ಬಂದಿ ಜೈಲಿನ ಗೋಡೆ ಹತ್ತಿ ಒಳಗೆ ಉರಿಯುತ್ತಿದ್ದ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಇವರ ಮೇಲೂ ಕೈದಿಗಳು ಉರಿಯುತ್ತಿದ್ದ ಬೆಂಕಿಯ ವಸ್ತುಗಳನ್ನು ಎಸೆದಿದ್ದಾರೆ.
ನ್ಯಾಯಾಧೀಶರು, ಎಸ್‍ಪಿಯವರು, ಎಷ್ಟೇ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕಡೆಗೆ ತಿಪಟೂರು, ಚಿಕ್ಕನಾಯಕನಹಳ್ಳಿ, ಕುಣಿಗಲ್, ಗುಬ್ಬಿ, ಶಿರಾ ತಾಲೂಕಿನ ಪೊಲೀಸರನ್ನು ಬಂದೋಬಸ್ತ್‍ಗೆ ನಿಯೋಜನೆ ಮಾಡಿದರು.

ಕುಣಿಗಲ್ ವೃತ್ತ ನಿರೀಕ್ಷಕ ಬಾಳೇಗೌಡ ಮಾತುಕತೆ ಯಶಸ್ವಿ:
ಅಷ್ಟರಲ್ಲಿ ಸ್ಥಳಕ್ಕೆ ಬಂದ ವೃತ್ತ ನಿರೀಕ್ಷಕರಾದ ಬಾಳೇಗೌಡರು ನ್ಯಾಯಾಧೀಶರು ಎಸ್‍ಪಿ ಅವರ ಜೊತೆ ಮಾತುಕತೆ ನಡೆಸಿ, ಕೈದಿಗಳ ಜೊತೆಯೂ ಮಾತುಕತೆ ನಡೆಸಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿ ಜೈಲಿನ ಮುಖ್ಯ ಬಾಗಿಲು ತೆಗೆಸುವಲ್ಲಿ ಯಶಸ್ವಿಯಾಗಿದ್ದಾರೆ.  ಕೊಲೆ ಪ್ರಕರಣಗಳಲ್ಲಿರುವ ಹರೀಶ್, ನರಸಿಂಹಮೂರ್ತಿ, ಏಜೆಲ್, ಚೇತನ್, ಯೋಗೇಶ್ ಸೇರಿದಂತೆ ಇತರರನ್ನು ಬಾಳೇಗೌಡರು ತಮ್ಮ ವಶಕ್ಕೆ ಪಡೆದು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.

ಜೈಲಿನಲ್ಲಿದ್ದವರೇ ಮೂವರು ಸಿಬ್ಬಂದಿ:  ಮುಂಜಾನೆ 2.30ಕ್ಕೆ ಆರಂಭವಾದ ದಾಂಧಲೆ ಬೆಳಗ್ಗೆ 6ಗಂಟೆಯವರೆಗೆ ನಡೆದಿದೆ. ಜೈಲಿನ ಕೊಠಡಿಗಳ ಬಾಗಿಲು, ಕಚೇರಿ ಪೀಠೋಪಕರಣ, ಟಿ.ವಿ., ಛೇರ್, ಟೇಬಲ್, ಎಲ್ಲವನ್ನೂ ಧ್ವಂಸಗೊಳಿಸಿದ್ದಾರೆ. ಸಿನಿಮೀಯ ರೀತಿಯಲ್ಲಿ ಈ ಘಟನೆ ನಡೆದಿದೆ.

ತಪ್ಪಿದ ಭಾರೀ ಅನಾಹುತ:   ಪೊಲೀಸರ ಸಮಯ ಪ್ರಜ್ಞೆಯಿಂದ 27 ಜನ ಕೈದಿಗಳು ಪರಾರಿಯಾಗುವುದನ್ನು ತಪ್ಪಿಸಿದ್ದಾರೆ. ಅಲ್ಲದೆ, ಜೈಲಿನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಮುಂದಾದಾಗ ಅದನ್ನೂ ಕೂಡ ನಿಯಂತ್ರಿಸಲಾಗಿದೆ.  ವೃತ್ತ ನಿರೀಕ್ಷಕರಾದ ಬಾಳೇಗೌಡರು ಜೈಲಿನ ಎಲ್ಲಾ ಕೊಠಡಿಗಳ ಪರಿಶೀಲನೆ ನಡೆಸಿದ್ದಾರೆ.

ಸ್ಥಳದಲ್ಲೇ ಬೀಡುಬಿಟ್ಟು ಜಿಲ್ಲಾ ಎಸ್ಪಿ: ಜೈಲಿನಲ್ಲಿ ನಡೆದ ಈ ಘಟನೆ ಈಗ ರಾಜ್ಯದ ಗಮನ ಸೆಳೆದಿದೆ. ರಾಜ್ಯದ ಬಂಧೀಖಾನೆಗಳಲ್ಲಿರುವ ಕೈದಿಗಳಿಗೆ ಐಷಾರಾಮಿ ಊಟದ ವ್ಯವಸ್ಥೆ, ಗಾಂಜಾ, ಅಫೀಮು, ಚರಸ್, ಮದ್ಯಪಾನ ಸೇರಿದಂತೆ ಇತರೆ ಎಲ್ಲಾ ವಸ್ತುಗಳು ಜೈಲಿಗೆ ಸರಬರಾಜಾಗುತ್ತಿವೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಘಟನೆಯಿಂದ ಇದು ಸಾಬೀತಾದಂತಾಗಿದೆ. ಎಸ್‍ಪಿಯವರಾದ ಡಾ.ದಿವ್ಯಾಗೋಪಿನಾಥ್, ಡಿವೈಎಸ್ಪಿ ವೇಣುಗೋಪಾಲ್ ಸೇರಿದಂತೆ ಇತರರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದು, ಬೆಂಗಳೂರಿನಿಂದ ಹಲವು ಅಧಿಕಾರಿಗಳು ಸ್ಥಳಕ್ಕೆ ಭೇಟಿ  ನೀಡಿ ಪರಿಶೀಲನೆ ನಡೆಸಲಿದ್ದಾರೆ.   ಕೈದಿಗಳ ಮನವೊಲಿಸಿ ಮುಂದೆ ನಡೆಯಬಹುದಾದ ಭಾರೀ ಅನಾಹುತವನ್ನು ತಪ್ಪಿಸಿದ ಕುಣಿಗಲ್ ವೃತ್ತನಿರೀಕ್ಷಕರಾದ ಬಾಳೇಗೌಡರ ದಕ್ಷತೆಯನ್ನು ಎಸ್‍ಪಿ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಶ್ಲಾಘಿಸಿದ್ದಾರೆ. ಸ್ಥಳದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕೈದಿಗಳ ಜೊತೆ ಕುಳಿತು ಮದ್ಯಪಾನ ಮಾಡಿದ ಜೈಲಿನ ಸೂಪರಿಂಟೆಂಡೆಂಟ್ ಹಾಗೂ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Facebook Comments

Sri Raghav

Admin