‘ಮಿಸ್ಟರ್ ಎಲ್‍ಎಲ್‍ಬಿ’ ಬೆಳ್ಳಿ ಪರದೆ ಬಂದ್ರು..

ಈ ಸುದ್ದಿಯನ್ನು ಶೇರ್ ಮಾಡಿ

mister-LLb

ಬೆಳ್ಳಿ ಪರದೆ ಮೇಲೆ ಕಳೆದ ಕೆಲವು ವಾರಗಳಿಂದ ವಾರಕ್ಕೆ ಆರರಿಂದ ಎಂಟು ಚಿತ್ರಗಳು ಅಬ್ಬರಿಸುತ್ತಲೇ ಇವೆ. ಅದರಲ್ಲೂ ಕೆಲವು ಚಿತ್ರಗಳು ತಮ್ಮ ಶೀರ್ಷಿಕೆ ಹಾಗೂ ಕಥಾಹಂದರದ ಮೂಲಕ ಗಮನ ಸೆಳೆದು ಯಶಸ್ವಿಗೊಂಡರೆ ಇನ್ನೂ ಕೆಲವು ಚಿತ್ರಗಳು ಹೇಗೆ ಬಂದವೊ ಹಾಗೆಯೇ ಹೊರಟು ಹೋಗುತ್ತಿದೆ. ಇದರ ನಡುವೆಯೇ ಈ ವಾರವು ಕೂಡ ಸರಿಸುಮಾರು ಆರು ಚಿತ್ರಗಳು ಬಿಡುಗಡೆಯಾಗುತ್ತಿವೆ. ಅದರಲ್ಲಿ ಬಹಳಷ್ಟು ನಿರೀಕ್ಷೆಯೊಂದಿಗೆ ಮಿಸ್ಟರ್ ಎಲ್‍ಎಲ್‍ಬಿ ಎಂಬ ಚಿತ್ರ ಈ ವಾರ ರಾಜ್ಯಾದ್ಯಂತ ಸುಮಾರು 80ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಆರ್‍ವಿ ಕ್ರಿಯೇಷನ್ಸ್ ಮೂಲಕ ಬಿಡುಗಡೆಗೊಳ್ಳುತ್ತಿದೆ.ಇದೊಂದು ಹಳ್ಳಿ ಸೊಗಡಿನಲ್ಲಿ ನಡೆಯುವ ಪ್ರೀತಿ-ಪ್ರೇಮದೊಂದಿಗೆ ಹಾಸ್ಯಾನಕ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು, ಈ ಚಿತ್ರಕ್ಕೆ ರಘುವರ್ಧನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹಾಗೆಯೇ ಇಡೀ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಕೂಡ ಅವರೇ ಹೊತ್ತುಕೊಂಡಿದ್ದಾರೆ. ಇದು ಎರಡು ಜನರೇಷನ್‍ನಲ್ಲಿ ನಡೆಯುವಂತಹ ಕಥೆಯಾಗಿದ್ದು, ನಾಯಕನಾಗಿ ಶಿಶಿರ್ ಬೆಳ್ಳಿ ಪರದೆ ಮೇಲೆ ಪ್ರವೇಶ ಮಾಡುತ್ತಿದ್ದಾರೆ.

ಕುಲವಧು ಧಾರಾವಾಹಿಯಲ್ಲಿ ಬಹಳಷ್ಟು ಗಮನ ಸೆಳೆದಿರುವ ಈ ಪ್ರತಿಭೆ ಪ್ರಥಮ ಬಾರಿಗೆ ಬೆಳ್ಳಿ ಪರದೆ ಮೇಲೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇನ್ನು ಈ ಚಿತ್ರದಲ್ಲಿ ನಾಯಕಿಯಾಗಿ ಲೇಖಾಚಂದ್ರ ಅಭಿನಯಿಸಿದ್ದು, ಈಗಾಗಲೇ ಇವರು ಒಂದೆರಡು ಚಿತ್ರಗಳಲ್ಲಿ ಗಮನಾರ್ಹ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಬಹಳ ಕ್ಯೂಟ್ ಆದಂತಹ ಪಾತ್ರ ನಿರ್ವಹಿಸಿದ್ದು, ನಾಯಕನಿಗೆ ಕ್ವಾಟ್ಲೆ ಕೊಡುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾಳಂತೆ. ಈ ಚಿತ್ರದಲ್ಲಿ ಹಾಸ್ಯನಟ ಕೆಂಪೇಗೌಡ, ನಾರಾಯಣಸ್ವಾಮಿ ಸೇರಿದಂತೆ ಹಲವಾರು ಕಲಾವಿದರ ದಂಡೇ ಅಭಿನಯಿಸಿದೆ. ಸುರೇಶ್ ಬಾಬು ಛಾಯಾಗ್ರಹಣ, ಮಂಜು ಚರಣ್ ಸಂಗೀತ, ರಾಜು ಬೆಳಗೆರೆ ಸಂಭಾಷಣೆ, ಕೆ. ಗಿರೀಶ್ ಕುಮಾರ್ ಸಂಕಲನ, ಗೌಸ್ ಪೀರ್ ಮಂಜು ಚರಣ್ ಸಾಹಿತ್ಯ, ಕಲೈ ಮಾಸ್ಟರ್ ತ್ರಿಭುವನ್ ನೃತ್ಯ ನಿರ್ದೇಶನವಿದೆ.
ಈಗಾಗಲೇ ಅದ್ಧೂರಿ ಪ್ರಚಾರ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ ಈ ಮಿಸ್ಟರ್ ಎಲ್‍ಎಲ್‍ಬಿಯನ್ನು ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ನೋಡಬೇಕಿದೆ.

Facebook Comments

Sri Raghav

Admin