ಯಲಹಂಕಾ ಎಲೆಕ್ಷನ್ ಆಕಾಡದಲ್ಲಿ ವಿಶ್ವನಾಥ್‍ ಗೆ ಎದುರಾಗಲಿದೆ ಕಠಿಣ ಸವಾಲು

ಈ ಸುದ್ದಿಯನ್ನು ಶೇರ್ ಮಾಡಿ

Yalahanaka--01

– ಬಿ.ಎಸ್.ರಾಮಚಂದ್ರ

ನಾಡಪ್ರಭು ಕೆಂಪೇಗೌಡರ ರಾಜಧಾನಿಯಾಗಿದ್ದ ಯಲಹಂಕ ಇಂದು ಆಧುನಿಕತೆಯ ಹಿರಿಮೆಯ ಜತೆಗೆ ಸಾಂಪ್ರದಾಯಿಕ ಸಿರಿಯನ್ನು ಹೊಂದಿರುವ ಕ್ಷೇತ್ರ. ಈ ಹಿಂದೆ 2008ರ ಹಿಂದೆ ಬೆಂಗಳೂರು ಹೊರ ವಲಯದಲ್ಲಿದ್ದ ಯಲಹಂಕ ಕ್ಷೇತ್ರ ಪುನರ್ ವಿಂಗಡಣೆಯ ನಂತರ ತನ್ನ ಭೌಗೋಳಿಕ ಪ್ರದೇಶವನ್ನು ವಿಸ್ತರಿಸಿಕೊಂಡು ಇಂದು ಪ್ರತಿಷ್ಠಿತ ಕ್ಷೇತ್ರವಾಗಿ ಮಾರ್ಪಟ್ಟಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಗೊಂಡ ನಂತರ ಇಲ್ಲಿ ಪ್ರತಿಷ್ಠಿತ ಬಹು ರಾಷ್ಟ್ರೀಯ ಕಂಪೆನಿಗಳು, ದೇಶೀಯ ಕಾರ್ಖಾನೆಗಳು ಮತ್ತು ಅತಿ ಮುಖ್ಯ ದೇಶ ರಕ್ಷಣೆಯ ಯೋಧರ ತರಬೇತಿಯ ನೆಲೆಯಾಗಿ ಮಾರ್ಪಟ್ಟಿದೆ.

ಕಳೆದ ಹಲವು ವರ್ಷಗಳಿಂದ ಯಲಹಂಕ ವಾಯು ನೆಲೆ ದಕ್ಷಿಣ ಭಾಗದ ರಕ್ಷಣೆಯ ಮತ್ತು ಬಹು ಉಪಯೋಗಿ ತಾಣವಾಗಿದೆ. ಬಿಎಸ್‍ಎಫ್, ಸಿಆರ್‍ಪಿಎಫ್ , ಕೆಎಸ್‍ಸಿಆರ್‍ಪಿಎಫ್, ಭಾರ ತೀಯ ವಾಯು ಪಡೆಯ ತರಬೇತಿ ಕೇಂದ್ರಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ರಕ್ಷಣಾ ವಲಯದ ಸಾವಿರಾರು ಸಿಬ್ಬಂದಿಗಳು ಕೂಡ ಇಲ್ಲಿ ನೆಲೆಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ಕ್ರಾಂತಿಕಾರಿ ಬದಲಾವಣೆಗಳೇ ಕಂಡು ಬಂದಿದ್ದು, ಅಪಾರ್ಟ್‍ಮೆಂಟ್‍ಗಳು ಮತ್ತು ಜನವಸತಿ ಪ್ರದೇಶಗಳು ಹೆಚ್ಚಾಗಿ ನಿರ್ಮಾಣಗೊಂಡು ಜನ ಸಂಖ್ಯೆಯಲ್ಲೂ ಕೂಡ ಭಾರೀ ಏರಿಕೆ ಕಂಡಿದೆ.
ರಾಜಕೀಯ ವಲಯದಲ್ಲಿ ಪ್ರಬಲ ಪೈಪೋಟಿ ನೀಡುವಂತಹ ಭಾರೀ ಕುಳಗಳು ಇಲ್ಲಿದ್ದು , ಪ್ರಸ್ತುತ ನಡೆಯಲಿರುವ 2018ರ ವಿಧಾನಸಭಾ ಚುನಾವಣೆ ಭಾರೀ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಕಾರ್ಮಿಕ ವಲಯದಲ್ಲಿ ಗುರುತಿಸಿಕೊಂಡು ಜನಸಾಮಾನ್ಯರಿಗೆ ಹತ್ತಿರವಾಗಿದ್ದ ಎಸ್.ಆರ್.ವಿಶ್ವನಾಥ್ ಅವರು 2008 ಮತ್ತು 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾದ ಮೇಲೆ ಇದೊಂದು ಕಮಲ ಪಾಳಯದ ಪ್ರಬಲ ಪಡೆಯನ್ನೇ ಸೃಷ್ಟಿಸಿದೆ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಇಲ್ಲಿ ಕಾಂಗ್ರೆಸ್ ಕೂಡ ಪ್ರಬಲ ಪೈಪೋಟಿ ನೀಡುವ ಮುನ್ಸೂಚನೆ ನೀಡಿರುವುದರಿಂದ ಮತ್ತು ಗ್ರಾಮೀಣ ಪ್ರದೇಶಗಳ ಹಳೆ ಸೊಗಡು ಹೊಂದಿರುವ ಹಲವು ಕಡೆಗಳಲ್ಲಿ ಜೆಡಿಎಸ್ ಕೂಡ ತನ್ನ ಓಟ್ ಬ್ಯಾಂಕ್ ಅನ್ನು ಗಟ್ಟಿಗೊಳಿಸಿದೆ.  ಬಿಬಿಎಂಪಿ ಚುನಾವಣೆ ನಂತರ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ಕಂಡು ಬಂದಿದ್ದರೂ ಆದರೆ ಈಗ ಜೆಡಿಎಸ್ ಕೂಡ ತೊಡೆ ತಟ್ಟಿ ಕಣಕ್ಕಿಳಿಯುತ್ತಿದ್ದು, ಇದಕ್ಕೆ ಹೆಚ್ಚಿನ ಬಲ ನೀಡುವ ನಿಟ್ಟಿನಲ್ಲಿ ಬಿಎಸ್‍ಪಿ ಕೈ ಜೋಡಿಸುತ್ತಿರುವುದರಿಂದ ಮೂರು ಪಕ್ಷಗಳ ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ.

ಎಸ್.ಆರ್.ವಿಶ್ವನಾಥ್ ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ನಿಶ್ಚಿತ. ಅವರು ಹ್ಯಾಟ್ರಿಕ್ ಜಯದ ಹುಮ್ಮಸ್ಸಿನಲ್ಲಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದ್ದು, ಯಲಹಂಕ ಕ್ಷೇತ್ರಕ್ಕೆ ಸೀಮಿತಗೊಂಡಂತೆ ಪ್ರಣಾಳಿಕೆಯನ್ನು ಕೂಡ ಈಗಾಗಲೇ ಬಿಡುಗಡೆ ಮಾಡಿದ್ದಾರೆ.
ಇವೆಲ್ಲದರ ನಡುವೆ ಚಲನಚಿತ್ರ ನಟ ಹಾಗೂ ಕಂಚಿನ ಕಂಠದ ರವಿಶಂಕರ್ ಕೂಡ ಈಗ ಯಲಹಂಕ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು , ಇದು ಹಲವರನ್ನು ಹುಬ್ಬೇರಿಸುವಂತೆ ಮಾಡಿದೆ. ಈಗಾಗಲೇ ಅವರ ಸಹೋದರ ಸಾಯಿ ಕುಮಾರ್ ಅವರು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದು , ಈಗ ರವಿಶಂಕರ್ ಕೂಡ ಅದೇ ಪಕ್ಷದಿಂದಲೇ ಕಣಕ್ಕಿಳಿಯಲು ತಯಾರಿ ನಡೆಸುತ್ತಿರುವುದು ಸ್ಥಳೀಯರನ್ನು ಹಾಗೂ ಬಿಜೆಪಿ ಪಾಳಯವನ್ನು ಕೂಡ ನಿಬ್ಬೆರಗು ಮಾಡಿದೆ. ಒಕ್ಕಲಿಗ ಸಮುದಾಯ ಅಧಿಕ ಸಂಖ್ಯೆಯಲ್ಲಿದ್ದ ಪರಿಶಿಷ್ಟ ಜಾತಿ, ಪಂಗಡ ಕೂಡ ಹೆಚ್ಚಿನ ಪ್ರಭಾವ ಬೀರಲಿದೆ.

ಕಾಂಗ್ರೆಸ್‍ನಿಂದ ಕಳೆದ 2013ರಲ್ಲಿ ಸ್ಪರ್ಧಿಸಿದ ಗೋಪಾಲಕೃಷ್ಣ ಮತ್ತೊಮ್ಮೆ ಕಣಕ್ಕಿಳಿಯಲು ತುದಿಗಾಲ ಮೇಲೆ ನಿಂತಿದ್ದು, ಟಿಕೆಟ್ ಸಿಗುವ ಭರವಸೆ ಹೊಂದಿದ್ದಾರೆ. ಮತ್ತು ಈಗಾಗಲೇ ಪಕ್ಷ ಕಾರ್ಯಕರ್ತರೊಂದಿಗೆ ಒಂದು ಸುತ್ತಿನ ಪ್ರಚಾರ ಕಾರ್ಯ ಕೂಡ ಮುಗಿಸಿದ್ದಾರೆ. ಇದಲ್ಲದೆ ಸ್ಥಳೀಯರಾದ ಕೇಶವ ರಾಜಣ್ಣ ಕೂಡ ಕಾಂಗ್ರೆಸ್ ಟಿಕೆಟ್‍ಗೆ ಭರ್ಜರಿ ಲಾಬಿ ನಡೆಸಿದ್ದು , ಪವರ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್ ಅವರನ್ನು ನೆಚ್ಚಿಕೊಂಡಿದ್ದಾರೆ. ಹಲವಾರು ಕಾರ್ಯಕ್ರಮಗಳನ್ನು ನಡೆಸಿ ಮತದಾರರನ್ನು ಸೆಳೆಯುವ ಕಸರತ್ತಿನಲ್ಲಿ ತೊಡಗಿದ್ದಾರೆ. ಪ್ರಾದೇಶಿಕ ಪಕ್ಷದ ಒಳಿತನ್ನು ಸಾರಿ ಹೇಳಿ ಜೆಡಿಎಸ್ ಅಭ್ಯರ್ಥಿಯಾಗಿ ನಿವೃತ್ತ ಪೊಲೀಸ್ ಅಧಿಕಾರಿ ಎ.ಕೃಷ್ಣಪ್ಪ ಕಣಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಪೊಲೀಸ್ ವಲಯದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿವೃತ್ತಿ ಹೊಂದಿದ ಕೃಷ್ಣಪ್ಪ ಈಗಾಗಲೇ ಜೆಡಿಎಸ್ ಸೇರಿದ್ದು , ಹುರುಪಿನಿಂದಲೇ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರಮುಖವಾಗಿ ಎಪಿಎಂಸಿ ನಿರ್ದೇಶಕ ಹನುಮಂತೇಗೌಡ ಪಕ್ಷೇತರ ಅಭ್ಯರ್ಥಿಯಾದರೂ ಸ್ಪರ್ಧೆಗೆ ಇಳಿಯಬೇಕೆಂಬ ನಿರ್ಧಾರ ಮಾಡಿದ್ದು, ಇದರಿಂದ ರಾಜಕೀಯ ವಲಯದಲ್ಲಿ ಹಲವಾರು ಬದಲಾವಣೆ ನಿರೀಕ್ಷಿಸಲಾಗಿದೆ.
ಹನುಮಂತೇಗೌಡ ಒಕ್ಕಲಿಗ ಸಮುದಾಯ ದವರಾಗಿದ್ದು, ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ವಾರ್ಡ್ ನಂ.4ರಿಂದ (ಯಲಹಂಕ ಉಪನಗರ) ಅಲ್ಪ ಮತದಲ್ಲಿ ಪರಾಭವಗೊಂಡಿದ್ದರು. ಆದರೂ ಇವರ ಸಾಮಥ್ರ್ಯದ ಬಗ್ಗೆ ರಾಷ್ಟ್ರೀಯ ಪಕ್ಷಗಳ ನಾಯಕರಿಗೂ ಗೊತ್ತಿದ್ದು, ತಮ್ಮತ್ತ ಸೆಳೆಯಲು ಭಾರೀ ಕಸರತ್ತು ನಡೆಸಿದರೂ ಅದು ವಿಫಲವಾಗಿತ್ತು.

ಈಗ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಇದು ಪಕ್ಷದ ವರಿಷ್ಠರ ಮುಂದೆ ಇದ್ದು ಇನ್ನು ಕೆಲವೇ ದಿನದಲ್ಲಿ ಸ್ವತಂತ್ರ ಅಭ್ಯರ್ಥಿ ಅಥವಾ ಜೆಡಿಎಸ್‍ನಿಂದ ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ಖಾತರಿಯಾಗಲಿದೆ.  ಕ್ಷೇತ್ರಕ್ಕೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕೆಲವು ಪ್ರದೇಶಗಳು ಬರಲಿದ್ದು, ಬಿಬಿಎಂಪಿ ವ್ಯಾಪ್ತಿಗೆ ಕೆಂಪೇಗೌಡ (1), ಚೌಡೇಶ್ವರಿ (2), ಅಟ್ಟೂರು (3), ಯಲಹಂಕ ಉಪನಗರ (4) ವಾರ್ಡ್ ಗಳು ಬರುತ್ತದೆ. ಕೆಲವು ಗ್ರಾಮ ಪಂಚಾಯ್ತಿಗಳು ಸೇರಿರುವುದರಿಂದ ಯಾರ ಒಲವು ಯಾರ ಕಡೆ ಎಂಬುದು ಸ್ಪಷ್ಟವಾಗಿ ಗೋಚರಿಸುವುದು ಕಷ್ಟ. ಇನ್ನು ಅಭ್ಯರ್ಥಿಗಳು ಆಯ್ಕೆಯಾದ ನಂತರ ಸ್ಪಷ್ಟ ಚಿತ್ರಣಗಳು ಗೋಚರಿಸಲಿದೆ.
ಕಳೆದ 2013ರ ಚುನಾವಣೆಯಲ್ಲಿ ಯಲಹಂಕ ವಿಧಾನಸಭಾ ಕ್ಷೇತ್ರದ ಮತದಾರರ ಸಂಖ್ಯೆ 2.70 ಲಕ್ಷ ಮೀರಿತ್ತು. ಮೀರಿತ್ತು. ಇದು ಈಗ 3.24 ಲಕ್ಷಕ್ಕೆ ಏರಿದೆ.

Facebook Comments

Sri Raghav

Admin