ಗೋವಿಂದರಾಜನಗರದಲ್ಲಿ ಹ್ಯಾಟ್ರಿಕ್‍ ಬಾರಿಸುವರೇ ಪ್ರಿಯಕೃಷ್ಣ..?

ಈ ಸುದ್ದಿಯನ್ನು ಶೇರ್ ಮಾಡಿ

Govindaraj-Nagar

– ಶಿವಣ್ಣ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರವು ಒಂದು. ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪ್ರತಿ ಚುನಾವಣೆಯಲ್ಲೂ ತೀವ್ರ ಪೈಪೋಟಿ ನಡೆದಿರುವುದು ಕಂಡುಬಂದಿದೆ. ರಾಜಕೀಯ ಪಕ್ಷಗಳು ಚುನಾವಣೆ ತಯಾರಿಯಲ್ಲಿ ತೊಡಗಿದ್ದು, ಪ್ರಚಾರ ಕಾರ್ಯ ಆರಂಭಿಸಿದ್ದರೂ ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿಲ್ಲ. ಆದರೆ ಸ್ಪರ್ಧಾಕಾಂಕ್ಷಿಗಳು ಚುನಾವಣೆಗೆ ಸಜ್ಜಾಗುತ್ತಿದ್ದಾರೆ ಮತದಾರರ ಓಲೈಕೆಯ ಕಸರತ್ತನ್ನು ನಾನಾ ರೀತಿಯಲ್ಲಿ ನಿರಂತರವಾಗಿ ಮಾಡಿತೊಡಗಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಎರಡು ಬಾರಿ ಚುನಾಯಿತರಾಗಿರುವ ಶಾಸಕ ಪ್ರಿಯಕೃಷ್ಣ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. 2013ರ ವಿಧಾನಸಭೆ ಚುನಾವಣೆಯಲ್ಲಿ 40 ಸಾವಿರಕ್ಕೂ ಹೆಚ್ಚು ಅಂತರದಿಂದ ಗೆಲುವು ಸಾಧಿಸಿದ್ದರು.
ಈಗಾಗಲೇ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಕ್ಷೇತ್ರದಲ್ಲಿ ಮಾಡಿದ್ದು , ನಿರಂತರ ಜನಸಂಪರ್ಕದಲ್ಲಿದ್ದಾರೆ. ಜೊತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಕೆಎಚ್‍ಬಿ ಕಾಲೋನಿ ವೃತ್ತದಲ್ಲಿ ಕೆಳಸೇತುವೆ ನಿರ್ಮಾಣ ಮಾಡುವುದು ಸೇರಿದಂತೆ ಹಲವು ಅಭಿವೃದ್ದಿ ಕಾರ್ಯಗಳನ್ನು ಕ್ಷೇತ್ರದಲ್ಲಿ ಮಾಡಿದ್ದಾರೆ.
ಹೀಗಾಗಿ ನಗರದ ಪ್ರಮುಖ ಜನಪ್ರಿಯ ಶಾಸಕರಲ್ಲಿ ಪ್ರಿಯಕೃಷ್ಣ ಕೂಡ ಒಬ್ಬರೆನಿಸಿಕೊಂಡಿದ್ದಾರೆ. ಶಾಸಕರಾಗಿರುವುದರಿಂದ ಸಹಜವಾಗಿಯೇ ಕಾಂಗ್ರೆಸ್ ಪಕ್ಷದ ಟಿಕೆಟ್ ದೊರೆಯಲಿದೆ.

ಮಾಜಿ ಸಚಿವ ವಿ.ಸೋಮಣ್ಣ ಅವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದಾಗ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಪ್ರಿಯಕೃಷ್ಣ ವಿರುದ್ದ ಸೋತಿದ್ದರು. 2013ರ ಚುನಾವಣೆಯಲ್ಲಿ ಕ್ಷೇತ್ರವನ್ನು ಬದಲಿಸಿದ್ದರು. ಮತ್ತೆ ಈ ಕ್ಷೇತ್ರದಿಂದ ಸ್ಪರ್ಧೆ ಮಾಡಲಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ಚಾಮರಾಜನಗರ ಅಥವಾ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಅಪೇಕ್ಷೆಯನ್ನು ಹೊಂದಿದ್ದಾರೆ. ಆದರೆ ಬಿಜೆಪಿ ವರಿಷ್ಠರು ಯಾವ ಕ್ಷೇತ್ರದಿಂದ ಕಣಕ್ಕಿಳಿಸುವರು ಎಂಬುದನ್ನು ಕಾದು ನೋಡಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿಬಿಎಂಪಿ ಮಾಜಿ ಸದಸ್ಯ ಎಚ್.ರವೀಂದ್ರ ಅವರು ಪ್ರಿಯಕೃಷ್ಣ ವಿರುದ್ದ ಸೋತಿದ್ದರು.

ಬಿಬಿಎಂಪಿ ಸದಸ್ಯ ಉಮೇಶ್ ಶೆಟ್ಟಿ , ಮಾಜಿ ಮೇಯರ್ ಶಾಂತಕುಮಾರಿ ಅವರು ಕೂಡ ಮುಂಬರುವ ವಿಧಾನಸಭಾ ಚುನಾವಣೆಯ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಜೊತೆಗೆ ಸೋಮಣ್ಣ ಅವರ ಪುತ್ರಡಾ.ಅರುಣ್ ಸೋಮಣ್ಣ ಕೂಡ ಸ್ಪರ್ಧಾ ಆಕಾಂಕ್ಷಿಯಾಗಿದ್ದಾರೆ. ಕೊನೆ ಗಳಿಗೆಯಲ್ಲಿ ಬಿಜೆಪಿ ಯಾರನ್ನು ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಿದೆ ಎಂಬುದು ಕುತೂಹಲ ಕೆರಳಿಸಿದೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಈಗಾಗಲೇ ಪರಿವರ್ತನಾ  ಯಾತ್ರೆಯನ್ನು ನಡೆಸಿತ್ತು. ಆ ಸಮಾವೇಶಕ್ಕೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನೇ ಕರೆಸಿ ರಣ ಕಹಳೆ ಮೊಳಗಿಸಿದ್ದಾರೆ.

ಜೆಡಿಎಸ್‍ನಿಂದ ಟಿ.ಎಂ.ರಂಗೇಗೌಡ ಹಾಗೂ ಯೋಗೇಶ್ ಎಂಬುವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ರಂಗೇಗೌಡರು ಪರಾಭವಗೊಂಡಿದ್ದರು. ಈ ಕ್ಷೇತ್ರದಿಂದಲೇ ಮತ್ತೊಮ್ಮೆ  ಮತ್ತೊಮ್ಮೆ ಅವರಿಗೆ ಜೆಡಿಎಸ್ ಟಿಕೆಟ್ ದೊರೆಯುವುದು ಬಹುತೇಕ ಖಚಿತವಾಗಿದೆ.
ಹೀಗೆ ಮೂರು ಪಕ್ಷಗಳ ಸ್ಪರ್ಧಾ ಆಕಾಂಕ್ಷಿಗಳು ಚುನಾವಣೆ ಸಿದ್ದತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ತಮ್ಮ ಪಕ್ಷಗಳು ಆಡಳಿತಾವಧಿಯಲ್ಲಿ ಮಾಡಿರುವ ಸಾಧನೆಗಳನ್ನು ಮುಂದಿಟ್ಟು ಮತದಾರರನ್ನು ಓಲೈಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಈ ಕ್ಷೇತ್ರದಲ್ಲಿ ಒಕ್ಕಲಿಗ, ಲಿಂಗಾಯಿತ ಹಾಗೂ ಕುರುಬ ಸಮುದಾಯದ ಮತದಾರ ಸಂಖ್ಯೆ ಹೆಚ್ಚಾಗಿದೆ. ಈ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರಕ್ಕಿಂತ ಅಭಿವೃದ್ದಿಗೆ ಮನ್ನಣೆ ನೀಡುವ ಸಾಧ್ಯತೆಗಳೇ ಹೆಚ್ಚಾಗಿವೆ.

ಈ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಡಿಎ ಬಡಾವಣೆ(ನಾಗರಬಾವಿ) ಖಾಸಗಿ ಲೇಔಟ್‍ಗಳು ಹೆಚ್ಚಾಗಿವೆ. ಕ್ಷೇತ್ರ ಪುನರ್ವಿಂಗಡಣೆ ಸಂದರ್ಭದಲ್ಲಿ ಕೆಲ ಹಳೆಪ್ರದೇಶಗಳು (ಡಾ.ರಾಜಕುಮಾರ್ ವಾರ್ಡ್) ಸೇರಿಕೊಂಡಿದೆ. ಶ್ರೀಮಂತ ಹಾಗೂ ಮಧ್ಯಮ ವರ್ಗದ ಜನರು ಹಿರಿಯ ನಾಗರೀಕರು ನೆಲೆಸಿದ್ದಾರೆ. ಇಲ್ಲಿನ ರಾಜಕೀಯ ಮೇಲಾಟದಲ್ಲಿ ಕಾಂಗ್ರೆಸ್ ಮುಂದಿದ್ದರೂ ಕ್ಷೇತ್ರ ವ್ಯಾಪ್ತಿಯ ಎಂಟು ವಾರ್ಡ್‍ಗಳಲ್ಲಿ ಬಿಜೆಪಿ 7 ವಾರ್ಡ್‍ಗಳು ಮುಂದಿದೆ. ಹಲವು ಗಾಳಿ ಮಾತುಗಳೂ ಕೇಳಿಬರುತ್ತಿದ್ದು ಪಕ್ಷಾಂತರ ಪರ್ವ ನಡೆದರೂ ಅಚ್ಚರಿ ಪಡೆಬೇಕಾಗಿಲ್ಲ.  ಒಟ್ಟಾರೆ ಈ ಕ್ಷೇತ್ರದ ಮತದಾರರು ಪ್ರಿಯಕೃಷ್ಣ ಅವರಿಗೆ ಸತತ ಮೂರನೇ ಬಾರಿಗೆ ಹ್ಯಾಟ್ರಿಕ್ ಗೆಲುವು ತಂದುಕೊಡುತ್ತಾರೆಯೋ ಅಥವಾ ಹೊಸಬರಿಗೆ ಮಣೆ ಹಾಕಲಿದ್ದಾರೆಯೋ ಎಂಬುದನ್ನು ಕಾದು ನೋಡಬೇಕು.

Facebook Comments

Sri Raghav

Admin