ಬಜೆಟ್ ಹೈಲೈಟ್ಸ್ : ನಗರ ಪ್ರದೇಶಗಳಲ್ಲಿ ಈ ವರ್ಷ 250 ಅಂಗನವಾಡಿ ಕೇಂದ್ರಗಳ ಪ್ರಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

Anganawadi--01

ಬೆಂಗಳೂರು,ಫೆ.16-ನಗರ ಪ್ರದೇಶಗಳಲ್ಲಿ ಪ್ರಸಕ್ತ ವರ್ಷ 250 ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಲು ಸರ್ಕಾರ ತೀರ್ಮಾನಿಸಿದೆ.  ಸುಮಾರು 17.5 ಕೋಟಿ ರೂ. ವೆಚ್ಚದಲ್ಲಿ 250 ಅಂಗನವಾಡಿ ಕೇಂದ್ರಗಳು ನಗರಪ್ರದೇಶದಲ್ಲಿ ಪ್ರಾರಂಭವಾಗಲಿದೆ. ಜೊತೆಗೆ ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವ ಪ್ರದೇಶಗಳಲ್ಲಿ ಅವರ ಮಕ್ಕಳ ಪಾಲನೆ ಮಾಡಲು 10 ಕೋಟಿ ರೂ. ವೆಚ್ಚದಲ್ಲಿ 100 ಸಂಚಾರಿ ಅಂಗನವಾಡಿ ಕೇಂದ್ರ ಹಾಗೂ ಶಿಶುಪಾಲನ ಕೇಂದ್ರಗಳನ್ನು ಸಹ ಪ್ರಾರಂಭ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಯವ್ಯಯದಲ್ಲಿ ಪ್ರಕಟಿಸಿದ್ದಾರೆ.

ಮಕ್ಕಳ ಸುರಕ್ಷತೆಯು ಸರ್ಕಾರದ ಆದ್ಯತೆಯಾಗಿದ್ದು, ಇಲಾಖೆಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಈ ಬಾರಿ ಪ್ರತ್ಯೇಕ ನಿರ್ದೇಶನಾಲಯ ಆರಂಭ, ಇಲಾಖೆಯಲ್ಲಿರುವ ಮೇಲ್ವಿಚಾರಕಿಯರ ಕಾರ್ಯ ದಕ್ಷತೆ ಹೆಚ್ಚಿಸಲು 2503 ಮೇಲ್ಚಿಚಾರಕಿಯರಿಗೆ ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಸ್ಕೂಟರ್ ಖರೀದಿಸಲು ಬಡ್ಡಿ ರಹಿತವಾಗಿ 50 ಸಾವಿರ ರೂ. ಸಾಲ ಸೌಲಭ್ಯ, ಇಂಧನ ವೆಚ್ಚಕ್ಕಾಗಿ ಮಾಸಿಕ ಒಂದು ಸಾವಿರ ರೂ. ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ.

ಅಂಗನವಾಡಿಯಲ್ಲಿರುವ ಮಕ್ಕಳ ಪೌಷ್ಠಿಕ ಮಟ್ಟವನ್ನು ಮಾಪನ ಮಾಡಲು ನ್ಯೂಟ್ರಿಷ್ಯನ್ ಸರ್ವೆಯನ್ನು ನಡೆಸಲಾಗುವುದು. ಎಸ್ಸಿ-ಎಸ್ಟಿ ಉಪಯೋಜನೆಯಡಿ 1000 ಅಂಗನವಾಡಿ ಕಟ್ಟಡಗಳನ್ನು ಉನ್ನತೀಕರಿಸಲು 20 ಕೋಟಿ, ಎಚ್‍ಐವಿ, ಏಡ್ಸ್‍ನಿಂದ ಬಾಧಿತರಾದ ಕುಟುಂಬಗಳು ಹಾಗೂ ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾದ ಮಹಿಳೆಯರ ಪೋಷಣೆಗಾಗಿ ವಿಭಾಗೀಯ ಮಟ್ಟದಲ್ಲಿ ಆಶ್ರಯ ಕೇಂದ್ರ ಸ್ಥಾಪಿಸಲು ಸ್ವಯಂ ಸೇವಾ ಸಂಸ್ಥೆಗಳಿಗೆ ಒಂದು ಕೋಟಿ ಅನುದಾನ ನೀಡಿದ್ದಾರೆ.

ಬಾಲಮಂದಿರಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ಸಿದ್ದತೆಗಾಗಿ ಕೌಶಲ್ಯ ತರಬೇತಿ ಪಡೆಯಲು ಒಂದು ಕೋಟಿ, ಆಯ್ದ 10 ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಕ್ಕಳ ನ್ಯಾಯಾಲಯಗಳನ್ನು ಮಕ್ಕಳ ಸ್ನೇಹಿ ನ್ಯಾಯಾಲಯಗಳನ್ನಾಗಿ ಪರಿವರ್ತಿಸಲು ಒಂದು ಕೋಟಿ ಒದಗಿಸಿದ್ದಾರೆ.   ಶೇ.75ಕ್ಕೂ ಹೆಚ್ಚಿನ ಅಂಗವೈಕಲ್ಯತೆ ಹೊಂದಿರುವ ವಿಕಲಚೇತನರಿಗೆ ನೀಡುತ್ತಿರುವ ಮಾಸಾಶನವನ್ನು 200 ರೂ. ಹೆಚ್ಚಳ ಮಾಡಲಾಗಿದೆ. ಶೇ.75ಕ್ಕೂ ಕಡಿಮೆ ಅಂಗವೈಕಲ್ಯತೆ ಹೊಂದಿರುವ ವಿಕಲಚೇತನರಿಗೆ ಮಾಸಾಶನವನ್ನು 100 ರೂ.ಗಳಷ್ಟು ಏರಿಕೆ ಮಾಡಲಾಗಿದೆ.   ಈ ಬಾರಿಯ ಬಜೆಟ್‍ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 5371 ಕೋಟಿ ಅನುದಾನ ಒದಗಿಸಿದ್ದಾರೆ.

Facebook Comments

Sri Raghav

Admin