ಬಜೆಟ್ ಹೈಲೈಟ್ಸ್ :  ಪೊಲೀಸ್ ನೇಮಕಾತಿಗೆ ಹೊಸ ಮಂಡಳಿ ರಚನೆ

ಈ ಸುದ್ದಿಯನ್ನು ಶೇರ್ ಮಾಡಿ

Police-Karnataka--01

ಬೆಂಗಳೂರು, ಫೆ.16- ಪೊಲೀಸ್ ನೇಮಕಾತಿಗಳನ್ನು ನಡೆಸಲು ಶಾಶ್ವತವಾದ ಪೊಲೀಸ್ ಸೇವೆಗಳ ನೇಮಕಾತಿ ಮಂಡಳಿಯನ್ನು ಸ್ಥಾಪಿಸುವುದು ಹಾಗೂ ಐದು ಕೋಟಿ ರೂ. ವೆಚ್ಚದಲ್ಲಿ ಸೈಬರ್ ಫೋರೆನ್ಸಿಕ್ ಪ್ರಯೋಗಾಲಯಗಳನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್‍ನಲ್ಲಿ ಘೋಷಿಸಿದ್ದಾರೆ.
ರಾಜ್ಯದ ಎಲ್ಲಾ ಪೊಲೀಸ್ ಕಮಿಷನರೇಟ್‍ಗಳಲ್ಲಿ ನಿರ್ಭಯ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ಪೊಲೀಸ್ ಇಲಾಖೆಯಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಶೇ.25ಕ್ಕೆ ಹೆಚ್ಚಿಸುವುದಾಗಿಯೂ ಹೇಳಿರುವ ಅವರು, ರಾಜ್ಯದಲ್ಲಿರುವ ಪೊಲೀಸ್ ತರಬೇತಿ ಶಾಲೆಗಳ ಸಾಮಥ್ರ್ಯವನ್ನು 50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿ 3200 ಮಂದಿ ತರಬೇತಿ ಸಾಮಥ್ರ್ಯ ಇರುವ 5ಸಾವಿರ ಮಂದಿಗೆ ಹಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಪೊಲೀಸರ ಸಾಹಸ, ಶೌರ್ಯಗಳನ್ನು ಗೌರವಿಸಲು ಬೆಂಗಳೂರಿನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ಪೊಲೀಸ್ ಸ್ಮಾರಕವನ್ನು ನಿರ್ಮಿಸಲಾಗಿದೆ. ಸೈಬರ್ ಅಪರಾಧಗಳನ್ನು ಪರಿಣಾಮಕಾರಿಯಾಗಿ ತನಿಖೆ ಮಾಡಲು ಮತ್ತು ನಿಯಂತ್ರಿಸಲು ಐದು ಕೋಟಿ ವೆಚ್ಚದಲ್ಲಿ ಸೈಬರ್ ಫೋರೆನ್ಸಿಕ್ ಪ್ರಯೋಗಾಲಯವನ್ನು ಸ್ಥಾಪಿಸಲಾಗುವುದು. [ ಸಿದ್ದು ಲ್ಕೆಕ್ಕಾಚಾರ (Live) ]

ಪೊಲೀಸ್ ವ್ಯವಸ್ಥೆ ಇನ್ನಷ್ಟು ನಾಗರಿಕ ಸ್ನೇಹಿ ಆಗಲು ಸಾಫ್ಟ್‍ವೇರ್‍ಗಳನ್ನು ಅಳವಡಿಸಲಾಗುವುದು. ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೂ ಬ್ರಾಡ್‍ಬ್ಯಾಂಡ್ ಒದಗಿಸಲಾಗುವುದು. ಜಿಲ್ಲಾ ಮಹಿಳಾ ಪೊಲೀಸ್ ಠಾಣೆಗಳನ್ನು ಒನ್ ಸ್ಟಾಪ್ ಸರ್ವೀಸ್ ಸೆಂಟರ್‍ಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಎಲ್ಲಾ ಪೊಲೀಸ್ ಠಾಣೆ ಹಾಗೂ ಕಚೇರಿಗಳಲ್ಲಿ ಮಹಿಳೆಯರಿಗೆ ಶೌಚಾಲಯಗಳನ್ನು ನಿರ್ಮಿಸಲಾಗುವುದು. ಬಾಕಿ ಉಳಿದಿರುವ ವಿಚಾರಣೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಜಿಲ್ಲಾ ಕಾರಾಗೃಹಗಳು ಮತ್ತು ನ್ಯಾಯಾಲಯಗಳಿಗೆ ವೀಡಿಯೋ ಲಿಂಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ಮಂಗಳೂರಿನಲ್ಲಿ 85 ಕೋಟಿ ವೆಚ್ಚದ ಅತ್ಯುನ್ನತ ಭದ್ರತಾ ವ್ಯವಸ್ಥೆಯ ಕಾರಾಗೃಹ ನಿರ್ಮಿಸಲಾಗುವುದು. ಕೈದಿಗಳಿಗೆ ಕೌಶಲ್ಯ ತರಬೇತಿ ನೀಡಿ ಪುನರ್‍ವಸತಿಗೆ ನೆರವಾಗಲು ಕಾರಾಗೃಹ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಗುವುದು. ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಅತ್ಯುನ್ನತ ಭದ್ರತಾ ವಿಭಾಗವನ್ನು ಸ್ಥಾಪಿಸಲು 100 ಕೋಟಿ ಖರ್ಚು ಮಾಡಲಾಗುವುದು.

ಈಗಾಗಲೇ 213 ಅಗ್ನಿ ಶಾಮಕ ಠಾಣೆ ಸ್ಥಾಪಿಸುವ ಮೂಲಕ 176 ತಾಲ್ಲೂಕುಗಳ ಪೈಕಿ 174 ತಾಲ್ಲೂಕುಗಳಲ್ಲಿ ಅಗ್ನಿ ಸುರಕ್ಷತೆ ವ್ಯವಸ್ಥೆ ಮಾಡಲಾಗಿದೆ. ಹೊಸ 50 ತಾಲ್ಲೂಕುಗಳಿಗೂ ಕೆಎಸ್‍ಎಎಫ್‍ಇ ಎರಡನೇ ಹಂತದ ಯೋಜನೆಯಲ್ಲಿ ಮುಂದಿನ ಐದು ವರ್ಷದಲ್ಲಿ ಅಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸಲಾಗುತ್ತದೆ.
ನಿವೃತ್ತಿಯ ನಂತರ ಪುನರ್ ವಸತಿ ಒದಗಿಸುವ ಸಲುವಾಗಿ ರಾಜ್ಯದ ಮಾಜಿ ಸೈನಿಕರ ದತ್ತಾಂಶವನ್ನು ಸಿದ್ದಪಡಿಸಿ ಕೌಶಲ್ಯಾಭಿವೃದ್ಧಿ ಇಲಾಖೆಗೆ ಜೋಡಣೆ ಮಾಡಲಾಗುವುದು ಎಂದು ಹೇಳಿರುವ ಸಿಎಂ, ಕಳೆದ ಐದು ವರ್ಷಗಳಲ್ಲಿ ಹೊಸದಾಗಿ ಆದ ನೇಮಕಾತಿಗಳು, ವಸತಿ ಗೃಹ ನಿರ್ಮಾಣ ಸೇರಿದಂತೆ ತಮ್ಮ ಸರ್ಕಾರದ ಸಾಧನೆಗಳನ್ನು ವಿವರಿಸಿದ್ದಾರೆ. ಈ ಸಾಲಿನಲ್ಲಿ ಗೃಹ ಇಲಾಖೆಗೆ 6647ಕೋಟಿ ರೂ.ಗಳನ್ನು ಒದಗಿಸಿದ್ದಾರೆ.

Facebook Comments

Sri Raghav

Admin