ದೇಶದಲ್ಲೇ ಪ್ರಥಮ ಬಾರಿಗೆ ಥಿಯೆಟರ್ ಒಲಂಪಿಕ್ಸ್ ಫೆ.20ಕ್ಕೆ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

national-drama-school
ಬೆಂಗಳೂರು, ಫೆ.17-ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ರಾಷ್ಟ್ರೀಯ ನಾಟಕ ಶಾಲೆ ಆಯೋಜಿಸಿರುವ ಎಂಟನೇ ಆವೃತ್ತಿಯ ಥಿಯೇಟರ್ ಒಲಂಪಿಕ್ ಇದೇ 20 ರಿಂದ ಮಾರ್ಚ್ 6ರವರೆಗೆ ಪ್ರದರ್ಶನಗೊಳ್ಳುತ್ತಿರುವುದು ಹೆಮ್ಮೆಯ ವಿಷಯ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ತಿಳಿಸಿದರು. ಕನ್ನಡ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವದ ಅತಿ  ದೊಡ್ಡ ರಂಗಭೂಮಿ ಉತ್ಸವವು (ನಾಟಕ ಪ್ರದರ್ಶನ) ನಗರದ ರವೀಂದ್ರ ಕಲಾಕ್ಷೇತ್ರ ಹಾಗೂ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ 15 ದಿನಗಳ ಕಾಲ ನಡೆಯಲಿದೆ ಎಂದು ತಿಳಿಸಿದರು. ಇಂದಿನಿಂದ 51 ದಿನಗಳ ಕಾಲ ನಡೆಯಲಿರುವ ರಂಗಭೂಮಿ ಉತ್ಸವಕ್ಕೆ ದೆಹಲಿಯ ಕೆಂಪುಕೋಟೆಯಲ್ಲಿ ಉಪರಾಷ್ಟ್ರಪತಿಯವರು ಚಾಲನೆ ನೀಡಿದ್ದಾರೆ ಎಂದು ಹೇಳಿದರು.
ಭಾರತ 17 ನಗರಗಳ ಈ ಜಾಗತಿಕ ರಂಗೋತ್ಸವದ ಎಂಟನೆ ಆವೃತ್ತಿಯ ಆತಿಥ್ಯವನ್ನು ವಹಿಸಲಿದೆ. 450 ಪ್ರದರ್ಶನಗಳು, 250 ಯುವ ವೇದಿಕೆಯ ಪ್ರದರ್ಶನಗಳು ನಡೆಯಲಿವೆ. ಇದರಲ್ಲಿ ಪ್ರಪಂಚದಾದ್ಯಂತ ಸುಮಾರು 25 ಸಾವಿರ ಕಲಾವಿದರು ಪಾಲ್ಗೊಳ್ಳುವರು. ಇದನ್ನು ವಿಶ್ವದಲ್ಲೇ ಅತ್ಯಂತ ದೊಡ್ಡ ಸಂಭ್ರಮವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಇದರಲ್ಲಿ ಕನ್ನಡದಲ್ಲಿ 12 ನಾಟಕಗಳು ಪ್ರದರ್ಶನಗೊಳ್ಳಲಿವೆ. ಕಲೆ ಎಂಬುದು ಸಂವಹನದ ಹಳೆಯ ರೂಪವಾಗಿದೆ. ಒಬ್ಬ ವ್ಯಕ್ತಿಯು ಪ್ರಪಂಚದ ಯಾವುದೇ ಮೂಲೆಯಿಂದ ಬಂದಿರಲಿ ಕಲೆಯನ್ನು ಆರಾಧಿಸುವ ಪ್ರೇಕ್ಷಕನ ಎದುರು ಪ್ರದರ್ಶನ ನೀಡುವ ಅವಕಾಶಕ್ಕಿಂತ ಹೆಚ್ಚಿನ ಸಂತೋಷ ಕಲಾವಿದನಿಗೆ ಬೇರೆ ಯಾವುದೂ ಇಲ್ಲ ಎಂದು ಹೇಳಿದರು. ಹಲವಾರು ವಿಭಿನ್ನ ಸಂಸ್ಕøತಿ, ಸಂಪ್ರದಾಯಗಳು ಜನರನ್ನು ಒಂದುಗೂಡಿಸಿ ಒಂದೇ ಸೂರಿನಡಿ ಸೇರಿಸುವ ಮಹಾನ್ ಸಮಾನತಾ ಪರಿಕರವೇ ರಂಗಭೂಮಿ ಎಂದು ತಿಳಿಸಿದರು.

ವಿಚಾರ ಸಂಕಿರಣ, ಹೊಸ ರೀತಿಯ ನಾಟಕಗಳನ್ನು ಕಟ್ಟುವ ಬಗ್ಗೆ ಅಭಿಲಾಷ್ ಪಿಳ್ಳೆ ಅವರಿಂದ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ದೇಶದಾದ್ಯಂತ ನಾವೆಲ್ಲ ಒಂದೇ ಎಂಬ ಭಾವನೆ ಮೂಡಿಸಲು ಒಂದೇ ಧ್ವಜವನ್ನು ಹಿಡಿಯುವ ಮೂಲಕ ಸ್ನೇಹ ಧ್ವಜ ಎಂಬ ವಿಷಯದೊಂದಿಗೆ ನಾಟಕ ಪ್ರದರ್ಶನಗೊಳ್ಳಲಿದೆ. ಒಂದು ಟಿಕೆಟ್‍ಗೆ 50 ರೂ. ನಿಗದಿಪಡಿಸಲಾಗಿದೆ. ಆನ್‍ಲೈನ್ ಮೂಲಕವೂ ಟಿಕೆಟ್ ಬುಕ್ ಮಾಡಬಹುದು. ಹೆಚ್ಚಿನ ಮಾಹಿತಿಗೆ 8375966782, 9821987950 ಸಂಪರ್ಕಿಸಬಹುದು. ಕಾರ್ಯಕ್ರಮವನ್ನು ಸಚಿವೆ ಉಮಾಶ್ರೀ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಡಾ.ಚಂದ್ರಶೇಖರ ಕಂಬಾರ ಪಾಲ್ಗೊಳ್ಳುವರು. ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ನಾಟಕ ಶಾಲೆ ನಿರ್ದೆಶಕ ಸಿ.ಬಸವಲಿಂಗಯ್ಯ ಉಪಸ್ಥಿತರಿದ್ದರು.

Facebook Comments

Sri Raghav

Admin