ಮೋದಿ ಆಗಮನದ ಹಿನ್ನೆಲೆಯಲ್ಲಿ ಕೇಸರಿಮಯವಾದ ಸಾಂಸ್ಕೃತಿಕ ನಗರಿ ಮೈಸೂರು

ಈ ಸುದ್ದಿಯನ್ನು ಶೇರ್ ಮಾಡಿ

Mysueru--01

ಮೈಸೂರು, ಫೆ.18- ಸಾಂಸ್ಕøತಿಕ ನಗರಿ ಮೈಸೂರು ಕೇಸರಿಮಯವಾಗಿದೆ. ಇಂದು ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ಮತ್ತು ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ನಾಳೆ ಮಧ್ಯಾಹ್ನ ಮಹಾರಾಜ ಕಾಲೇಜಿನಲ್ಲಿ ಭಾರೀ ಬಹಿರಂಗ ಸಭೆ ನಡೆಯಲಿದ್ದು, ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ. ಇಂದು ರಾತ್ರಿ ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಲಿರುವ ಮೋದಿ ಬಿಜೆಪಿ ಮುಖಂಡರೊಂದಿಗೆ ಮಾತುಕತೆ ನಡೆಸಲಿದ್ದಾರೆ.ಮೋದಿಯನ್ನು ಸ್ವಾಗತಿಸಲು ಸಾಂಸ್ಕøತಿಕ ನಗರಿಯಲ್ಲಿ ಅದ್ಧೂರಿ ಸಿದ್ಧತೆಗಳನ್ನು ಮಾಡಲಾಗಿದೆ. ಎಲ್ಲೆಲ್ಲೂ ಬಿಜೆಪಿ ಬಾವುಟಗಳು ರಾರಾಜಿಸುತ್ತಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಕ್ಷೇತ್ರ ಮೈಸೂರಿನಲ್ಲಿ ಬಿಜೆಪಿ ತನ್ನ ಬಲ ಪ್ರದರ್ಶನಕ್ಕೆ ಪ್ರಧಾನಿ ಅವರ ಕಾರ್ಯಕ್ರಮವನ್ನು ವೇದಿಕೆಯನ್ನಾಗಿ ಮಾಡಿಕೊಂಡಿದ್ದು, ಲಕ್ಷಾಂತರ ಕಾರ್ಯಕರ್ತರನ್ನು ಸೇರಿಸುವ ಮೂಲಕ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ಸಾಗುವ ಮಾರ್ಗದುದ್ದಕ್ಕೂ ಎತ್ತರೆತ್ತರದ ಕಟೌಟ್‍ಗಳು, ಬಿಜೆಪಿ ಧ್ವಜಗಳು ರಾರಾಜಿಸುತ್ತಿವೆ.   ಐದಾರು ಜಿಲ್ಲೆಗಳಿಂದ ಸುಮಾರು ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದೆ. ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ಸರ್ಕಾರಿ ಕಾರ್ಯಕ್ರಮ, ಮಹಾರಾಜ ಕಾಲೇಜಿನಲ್ಲಿ ಬಹಿರಂಗ ಸಭೆ, ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ, ಎಲ್ಲ ಕಾರ್ಯಕ್ರಮಗಳಿಗೂ ಸರ್ವ ರೀತಿಯಲ್ಲಿ ಮೈಸೂರು ಸಜ್ಜುಗೊಂಡಿದೆ.

ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳುವ ಜನರಿಗೆ ಉಚಿತವಾಗಿ ಊಟದ ವ್ಯವಸ್ಥೆ ಮಾಡಲು ರಾಜಸ್ಥಾನ ಸಮಾಜ ಮುಂದಾಗಿದೆ. ನಾಳೆ ಬೆಳಗ್ಗೆ ಶ್ರವಣಬೆಳಗೊಳಕ್ಕೆ ತೆರಳಿ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಂಡು ನಂತರ ಹಿಂದಿರುಗಿ ಬಹಿರಂಗ ಸಭೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ರಾಜಧಾನಿ ಬೆಂಗಳೂರಿನಲ್ಲಿ ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾರಂಭದಲ್ಲಿ ಮೋದಿ ಅವರು ಪಾಲ್ಗೊಂಡಿದ್ದಾಗ ಭಾರೀ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದ್ದರು.
ಮೈಸೂರಿನಲ್ಲಿ ಬಿಜೆಪಿ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ವಿಶೇಷವಾಗಿ ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ರಣಕಹಳೆ ಮೊಳಗಿಸಲಿದೆ. ಅದಕ್ಕಾಗಿ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ.  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್‍ಕುಮಾರ್, ಡಿ.ವಿ.ಸದಾನಂದಗೌಡ, ಈಶ್ವರಪ್ಪ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮೈಸೂರು ಜಿಲ್ಲಾ ಬಿಜೆಪಿ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin