ಹೊಟೇಲ್‍ನಲ್ಲಿ ಶಾಸಕ ಹ್ಯಾರಿಸ್ ಪುತ್ರ ಗೂಂಡಾಗಿರಿ ಪ್ರದರ್ಶಿಸಿದ್ದೇಕೆ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

N-A-Haris--01

ಬೆಂಗಳೂರು, ಫೆ.18- ನಗರದ ಯುಬಿ ಸಿಟಿ ಹೊಟೇಲ್‍ನಲ್ಲಿ ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಕಾಲು ತಗುಲಿತು ಎಂಬ ವಿಚಾರಕ್ಕೆ ಉದ್ಯಮಿಯೊಬ್ಬರ ಪುತ್ರನ ಮೇಲೆ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮಹಮ್ಮದ್ ಹ್ಯಾರಿಸ್ ನಲ್ಪಡ್ ಹಾಗೂ ಸ್ನೇಹಿತರು ಹಲ್ಲೆ ನಡೆಸಿರುವ ಘಟನೆ ರಾತ್ರಿ ನಡೆದಿದೆ. ಮತ್ತಿಕೆರೆಯ ಉದ್ಯಮಿ ಪುತ್ರ, ಎಂಬಿಎ ಪದವೀಧರ ವಿದ್ವತ್ ಎಂಬುವವರು  ತನ್ನ ಸ್ನೇಹಿತರ ಜತೆ ಯುಬಿ ಸಿಟಿಯ ಕೆಫೆಯೊಂದರಲ್ಲಿ ರಾತ್ರಿ 11 ಗಂಟೆ ಸಮಯದಲ್ಲಿ ಊಟ ಮಾಡುತ್ತಿದ್ದಾಗ ಅಲ್ಲಿಗೆ ಆಗಮಿಸಿದ ಮಹಮ್ಮದ್ ಹ್ಯಾರಿಸ್ ನಲ್ಪಡ್ ಹಾಗೂ ಅವರ ಸ್ನೇಹಿತರು ಕಾಲು ತಗುಲಿದ ವಿಷಯದ ಬಗ್ಗೆ ಮಾತಿಗೆ ಮಾತು ಬೆಳೆದು ಜಗಳ ಉಂಟಾಗಿದೆ.

ಜಗಳದ ಒಂದು ಹಂತದಲ್ಲಿ ಮಹಮ್ಮದ್ ಹ್ಯಾರಿಸ್ ಹಾಗೂ ಆತನ ಸ್ನೇಹಿತರು ವಿದ್ವತ್ ಮೇಲೆ ಹಲ್ಲೆ ನಡೆಸಿದ್ದು, ಗಾಯಗೊಂಡಿರುವ ವಿದ್ವತ್ ಅವರನ್ನು ಮಲ್ಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಸಂಬಂಧ ಮಹಮ್ಮದ್ ಹ್ಯಾರಿಸ್ ನಲ್ಪಡ್ ಹಾಗೂ ಸ್ನೇಹಿತರ ವಿರುದ್ಧ ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಗೆ ವಿದ್ವತ್ ದೂರು ನೀಡಿದ್ದಾರೆ. ಹಲ್ಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮಹಮ್ಮದ್ ಹ್ಯಾರಿಸ್ ಅವರ ಸ್ನೇಹಿತ ಅರುಣ್ ಎಂಬುವವರು ಕೂಡ ವಿದ್ವತ್ ಕಡೆಯುವರು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕಬ್ಬನ್‍ಪಾರ್ಕ್ ಠಾಣೆಗೆ ಪ್ರತಿದೂರು ನೀಡಿದ್ದಾರೆ. ತನಿಖೆ ಮುಂದುವರಿಕೆ: ಮಹಮ್ಮದ್ ಹ್ಯಾರಿಸ್ ನಲ್ಪಡ್ ಹಾಗೂ ಸ್ನೇಹಿತರ ವಿರುದ್ಧ ಕಬ್ಬನ್‍ಪಾರ್ಕ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ.

ಉಚ್ಛಾಟನೆ : 
ಬೆಂಗಳೂರು, ಫೆ.18-ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಅವರ ಪುತ್ರ, ಬೆಂಗಳೂರು ನಗರ ಘಟಕದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಲ್ಪಡ್ ಹ್ಯಾರಿಸ್ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ.  ನಿನ್ನೆ ಹ್ಯಾರಿಸ್ ಪುತ್ರ ಮಹಮ್ಮದ್ ಹ್ಯಾರಿಸ್ ಅವರ ಸ್ನೇಹಿತರು ಹೊಟೇಲ್‍ವೊಂದರಲ್ಲಿ ಉದ್ಯಮಿ ಪುತ್ರರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದಿಂದ ಅವರನ್ನು ಉಚ್ಛಾಟನೆ ಮಾಡಲಾಗಿದೆ.

ಅವರ ಮೇಲೆ ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಉಚ್ಛಾಟನೆ ಮಾಡಲು ಪಕ್ಷದ ಅಧ್ಯಕ್ಷರು ಆದೇಶಿಸಿದ್ದಾರೆ. ಈ ಕ್ಷಣದಿಂದಲೇ ಜಾರಿಗೆ ಬರುವಂತೆ ಪಕ್ಷದ ಎಲ್ಲ ಜವಾಬ್ದಾರಿಯಿಂದ ಅವರನ್ನು ವಿಮುಕ್ತಗೊಳಿಸಲಾಗಿದೆ.   ಚುನಾವಣೆ ಸಂದರ್ಭದಲ್ಲಿ ಇಂತಹ ಘಟನೆಗಳು ಜರುಗಿರುವುದು ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಎಚ್ಚೆತ್ತ ಕಾಂಗ್ರೆಸ್ ಮುಖಂಡರು ಕೂಡಲೇ ಹ್ಯಾರಿಸ್ ಪುತ್ರನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.

Facebook Comments

Sri Raghav

Admin