ನಮ್ಮ ಮೆಟ್ರೋದಲ್ಲಿ ಇಂದಿನಿಂದ ಮಹಿಳೆಯರಿಗೆ ಮೀಸಲು ವ್ಯವಸ್ಥೆ ಜಾರಿ

ಈ ಸುದ್ದಿಯನ್ನು ಶೇರ್ ಮಾಡಿ

Namma-Metro--01

ಬೆಂಗಳೂರು,ಫೆ.19- ಮೆಟ್ರೋ ರೈಲು ಸೇವೆಯನ್ನು ಇನ್ನಷ್ಟು ಜನಪ್ರಿಯಗೊಳಿಸಲು ಮುಂದಾಗಿರುವ ನಿಗಮವು ಇಂದಿನಿಂದ ಮಹಿಳೆಯರಿಗೆ ಮುಂಭಾಗದ ಬೋಗಿಯ ಎರಡು ದ್ವಾರಗಳಲ್ಲಿ ಮಹಿಳೆಯರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸುವ ಪ್ರಾಯೋಗಿಕ ಮೀಸಲು ವ್ಯವಸ್ಥೆ ಜಾರಿ ಮಾಡಿದೆ. ಹಸಿರು ರೇಖೆ ಮತ್ತು ನೇರಳೆ ರೇಖೆಯ ಕೆಲವು ರೈಲುಗಳ ಬೋಗಿಗಳಲ್ಲಿ ನಾಲ್ಕರಲ್ಲಿ ಎರಡು ಬಾಗಿಲುಗಳನ್ನು ಮಹಿಳೆಯರಿಗೆ ಮಾತ್ರ ಬಳಸಲು ಅವಕಾಶ ನೀಡಲಾಗುವುದು. ಜನರಿಂದ ಬರುವ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಎಲ್ಲಾ ರೈಲುಗಳಿಗೆ ವಿಸ್ತರಿಸಲು ಮೆಟ್ರೋ ನಿಗಮ ತೀರ್ಮಾನಿಸಿದೆ.

ಮೆಟ್ರೊ ರೈಲುಗಳಲ್ಲಿ 6 ಬೋಗಿಗಳನ್ನು ಅಳವಡಿಸಿದ ನಂತರ ಎಲ್ಲಾ ರೈಲುಗಳಲ್ಲಿ ಮೊದಲ ಬೋಗಿಯನ್ನು ಮಹಿಳೆಯರಿಗೆ ಮಾತ್ರ ಮೀಸಲು ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಮೆಟ್ರೋ ನಿಗಮ ಮಂಡಳಿ ವ್ಯವಸ್ಥಾಪಕ ನಿದೇರ್ಶಕ ಮಹೇಂದ್ರ ಜೈನ್ ತಿಳಿಸಿದ್ದಾರೆ. ಆದರೆ ಇದು ಪೀಕ್ ಅವಧಿಯಲ್ಲಿ ಮಾತ್ರ ಜಾರಿ ಇರಲಿದೆ. ಬೆಳಗ್ಗೆ 9 ರಿಂದ 11.30 ರವರೆಗೆ ಹಾಗೂ ಸಂಜೆ 5.30 ರಿಂದ 7.30ರವರೆಗೆ ಪ್ರವೇಶ ದ್ವಾರಗಳಲ್ಲಿ ಮಹಿಳೆಯರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.ಈ ಎರಡು ದ್ವಾರಗಳಲ್ಲಿ ಪ್ರವೇಶಿಸುವ ಮಹಿಳೆಯರು ಪುರುಷರಿಗಿಂತ ಮೊದಲು ಒಳಗೆ ಹೋಗಿ ಆಸನಗಳಲ್ಲಿ ಕೂರಬಹುದು. ನಿಲ್ದಾಣಗಳಲ್ಲಿರುವ ಸಿಬ್ಬಂದಿ ಈ ದ್ವಾರದಲ್ಲಿ ಪ್ರವೇಶಿದಂತೆ ಸೂಚಿಸಿದ್ದಾರೆ.

ಇದರ ಜತೆಗೆ ನಿಲ್ದಾಣಗಳಲ್ಲಿ ಘೋಷಣೆ ಹೊರಡಿಸಲಾಗುತ್ತಿದೆ. ರೈಲುಗಳು ಬರುವ ಘೋಷಣೆಯ ಜತೆಗೆ ಇದನ್ನೂ ಘೋಷಿಸಿ ಮಾಹಿತಿ ನೀಡಲಾಗುತ್ತದೆ. ಮೆಟ್ರೋ ರೈಲಿನಲ್ಲಿ ಒಂದು ಬೋಗಿಯಲ್ಲಿ ನಾಲ್ಕು ದ್ವಾರಗಳಂತೆ 3 ಬೋಗಿಗಳಲ್ಲಿ ಒಟ್ಟು 12 ದ್ವಾರಗಳಿವೆ. ಆರು ಬೋಗಿಯ ರೈಲಿನಲ್ಲಿ ಮುಂಭಾಗದ ಬೋಗಿಯನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತದೆ.. ಆರು ಬೋಗಿ ರೈಲನ್ನು ಬೈಯ್ಯಪ್ಪನಹಳ್ಳಿ ಡಿಪೋದಲ್ಲಿ ಇರಿಸಿ 85 ತಂತ್ರಾಂಶ ಗಳನ್ನು ಅಳವಡಿಸಲಾಗುತ್ತದೆ. ಇದಾದ ಬಳಿಕ ಡಿಪೋದ ಹಳಿಯಲ್ಲಿ ಸಂಚಾರ ನಡೆಸಿ ಪರೀಕ್ಷಿಸಲಾಗುತ್ತದೆ.

ಏಜೆನ್ಸ್-ಫ್ರಾಂಕೈಸ್ ಡಿ ಡೆವೆಲಪ್ ಮೆಂಟ್ ನಿಧಿ ಯೋಜನೆ ಮೂಲಕ 150 ಬೋಗಿಗಳನ್ನು ಮೆಟ್ರೊ ರೈಲಿಗೆ ಒದಗಿಸಲು ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಬೆಂಗಳೂರು ಮೆಟ್ರೊ ರೈಲು ನಿಗಮ 1,421 ಕೋಟಿ ರೂಪಾಯಿಗಳ ಒಪ್ಪಂದವನ್ನು ಬೆಮೆಲ್ ಜೊತೆಗೆ ಮಾಡಿಕೊಂಡಿತ್ತು. ಬೋಗಿಗಳನ್ನು ಒಗ್ಗೂಡಿಸುವುದು ಮತ್ತು ಪ್ರಯೋಗಗಳು ಎರಡು ತಿಂಗಳಲ್ಲಿ ನಡೆಯುತ್ತವೆ. ಒಂದು ಬಾರಿ ಪ್ರಮಾಣೀಕರಣವಾದ ಮೇಲೆ ಪೂರ್ಣಪ್ರಮಾಣದ ಉತ್ಪಾದನೆ ಆರಂಭವಾಗಲಿದೆ.
ಜೂನ್ ನಿಂದ ಆಗಸ್ಟ್ ವರೆಗೆ ಪ್ರತಿ ತಿಂಗಳು 6 ಬೋಗಿಗಳನ್ನು ಪಡೆದು ಸೆಪ್ಟೆಂಬರ್ ತಿಂಗಳಲ್ಲಿ 9 ಬೋಗಿಗಳಿಗೆ ಹಾಗೂ ಅಕ್ಟೋಬರ್ ತಿಂಗಳಲ್ಲಿ 12 ಬೋಗಿಗಳಿಗೆ ಏರಿಕೆಯಾಗಲಿದೆ. 2019 ಜೂನ್ ವೇಳೆಗೆ ಎಲ್ಲಾ 150 ಬೋಗಿಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ.

Facebook Comments

Sri Raghav

Admin