ಬಿಬಿಎಂಪಿ ಸಭೆ : ಅಧಿಕಾರಿಗಳ ಬಂಧನಕ್ಕೆ ಪಾಲಿಕೆ ಸಭೆಯಲ್ಲಿ ಸದಸ್ಯರ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

bbmp-1
ಬೆಂಗಳೂರು, ಫೆ.19- ಕಟ್ಟಡ ಕುಸಿತ ಹಾಗೂ ಮ್ಯಾನ್‍ಹೋಲ್ ದುರಂತಕ್ಕೆ ಬಿಬಿಎಂಪಿ ಅಧಿಕಾರಿಗಳನ್ನು ನೇರ ಹೊಣೆ ಮಾಡಿ ಬಂಧಿಸಿರುವುದಕ್ಕೆ ಪಾಲಿಕೆ ಸಭೆಯಲ್ಲಿಂದು ಪಕ್ಷಾತೀತವಾಗಿ ಆಕ್ಷೇಪ ವ್ಯಕ್ತವಾಯಿತು. ತಪ್ಪಿತಸ್ಥ ಅಧಿಕಾರಿಗಳನ್ನು ಬಂಧಿಸಬೇಕು, ನಿರಪರಾಧಿಗಳನ್ನು ಬಿಡುಗಡೆ ಮಾಡಬೇಕು, ಮ್ಯಾನ್‍ಹೋಲ್ ದುರಂತಕ್ಕೆ ಜಲಮಂಡಳಿಯ ನಿರ್ಲಕ್ಷ್ಯ ಕಾರಣವಾಗಿದೆ. ಅವರನ್ನು ಬಂಧಿಸುವುದು ಬಿಟ್ಟು ಪಾಲಿಕೆ ಅಧಿಕಾರಿಗಳನ್ನು ಬಂಧಿಸುವುದು ಸಮಂಜಸವಲ್ಲ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಪಾಲಿಕೆ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ವಿಷಯ ಪ್ರಸ್ತಾಪಿಸಿ ಜಯರಾಮ ರೆಡ್ಡಿ ಬಡಾವಣೆಯಲ್ಲಿ ಕಟ್ಟಡ ಕುಸಿತ ಹಾಗೂ ಮ್ಯಾನ್‍ಹೋಲ್ ದುರಂತಕ್ಕೆ ಸಂಬಂಧಿಸಿದಂತೆ ಪಾಲಿಕೆಯ ಮೂರು ಮಂದಿ ಅಧಿಕಾರಿಗಳನ್ನು ಬಂಧಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಅಧಿಕಾರಿಗಳ ಬಂಧನ ಖಂಡಿಸಿ ಪಾಲಿಕೆ ನೌಕರರು ಹಾಗೂ ಅಧಿಕಾರಿಗಳು ಈಗಾಗಲೇ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಕೂಡಲೇ ಬಂಧಿತ ಅಧಿಕಾರಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಮ್ಯಾನ್‍ಹೋಲ್‍ಗಳ ನಿರ್ವಹಣೆ ಜಲಮಂಡಳಿಗೆ ಸೇರಿದ್ದು, ಒಸಿ ಕನೆಕ್ಷನ್‍ಗೆ ಬೇಗ ಬರುತ್ತಾರೆ. ಈಗ ಸಂಭವಿಸಿದ ದುರಂತದಲ್ಲಿ ಬಚಾವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಪ್ರದೇಶದಲ್ಲಿ ವ್ಯಕ್ತಿಯೊಬ್ಬನ ಕೊಲೆಯಾದರೆ ಪೊಲೀಸರನ್ನು ಬಂಧಿಸುತ್ತಾರಾ? ಇಲ್ಲ ತಾನೆ. ಹಾಗೆಯೇ ಬಂಧಿಸುವ ಮೊದಲು ಸತ್ಯಾಸತ್ಯತೆ ಪರಿಶೀಲಿಸಬೇಕು. ಏಕಾಏಕಿ ಬಂಧಿಸಿ ಎಫ್‍ಐಆರ್ ಹಾಕಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು, ದುರಂತಕ್ಕೆ ಸಂಬಂಧಿಸಿದಂತೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.  ಇದಕ್ಕೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಬೆಂಬಲ ಸೂಚಿಸಿದಾಗ ಮೇಯರ್ ಅವರು ಜಲಮಂಡಳಿ ಅಧಿಕಾರಿ ಗಂಗಾಧರ್ ಅವರನ್ನು ಕರೆಸಿ, ನಿಮ್ಮ ತಪ್ಪಿಗೆ ನಮ್ಮವರನ್ನೇಕೆ ಜೈಲಿಗೆ ಕಳುಹಿಸುತ್ತೀರ. ನಿಮ್ಮವರನ್ನು ಬಂಧಿಸಿ, ನಮ್ಮವರನ್ನು ಬಿಡಿಸಿ ಎಂದು ಖಾರವಾಗಿ ನುಡಿದರು.

ಗಂಗಾಧರ್ ಅವರು ಇದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹಾರಿಕೆಯ ಉತ್ತರ ನೀಡಿದಾಗ ನಿಮಗೆ ಗೊತ್ತಿಲ್ಲದ ಮೇಲೆ ಪಾಲಿಕೆ ಕಟ್ಟಡಕ್ಕೆ ಏಕೆ ಬರುತ್ತೀರಿ, ಜಲಮಂಡಳಿ ವಿಷಯಕ್ಕೆ ಸಂಬಂಧಿಸಿದ ವಿಚಾರಗಳಿಗೆ ಪಾಲಿಕೆಗೆ ಬಂದು ಕೆಲಸ ಮಾಡಿಸಿಕೊಳ್ತೀರ. ಈಗ ನನಗೆ ಮಾಹಿತಿ ಇಲ್ಲ ಎಂದು ಸಬೂಬು ಹೇಳ್ತೀರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಯುಕ್ತ ಮಂಜುನಾಥ್ ಪ್ರಸಾದ್ ಕೂಡ ಮೇಯರ್ ಅವರನ್ನು ಬೆಂಬಲಿಸಿ ಈ ಎರಡು ದುರಂತದಲ್ಲಿ ಪಾಲಿಕೆ ಅಧಿಕಾರಿಗಳ ಬಂಧನ ಸಮಂಜಸವಲ್ಲ. ಬಂಧಿತ ಅಧಿಕಾರಿಗಳನ್ನು ಕೂಡಲೇ ಬಿಡುಗಡೆ ಮಾಡಬೇಕು. ಈ ಬಗ್ಗೆ ಪಾಲಿಕೆ ಕಾನೂನು ಕೋಶ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ಒಂದು ಬಾರಿ ಎಫ್‍ಐಆರ್ ದಾಖಲಿಸಿದ ಮೇಲೆ ಅದನ್ನು ಹಿಂಪಡೆಯಲು ಬರುವುದಿಲ್ಲ. ಕಾನೂನಾತ್ಮಕವಾಗಿ ಅಗತ್ಯ ದಾಖಲೆಗಳನ್ನು ಒದಗಿಸಿ ಅಧಿಕಾರಿಗಳನ್ನು ಬಿಡಿಸಿಕೊಂಡು ಬರುವಂತೆ ಸಲಹೆ ನೀಡಿದರು. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಮಿಷನರ್‍ಗೂ ಪತ್ರ ಬರೆಯಲಾಗಿದೆ. ಅಧಿಕಾರಿಗಳ ಬಂಧನಕ್ಕೂ ಮುನ್ನ ನಮ್ಮ ಗಮನಕ್ಕೆ ವಿಷಯ ತರಬೇಕು. ಕೂಲಂಕಷವಾಗಿ ಪರಿಶೀಲಿಸಿ ನಂತರ ಬಂಧಿಸಬೇಕು. ಏಕಾಏಕಿ ಬಂಧಿಸಿರುವುದು ಸರಿಯಲ್ಲ. ಕೂಡಲೇ ಬಂಧಿತ ಅಧಿಕಾರಿಗಳನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಸಂತಾಪ: ರೈತ ಮುಖಂಡ ಪುಟ್ಟಣ್ಣಯ್ಯ ಅವರ ನಿಧನಕ್ಕೆ ಪಾಲಿಕೆ ಸಭೆಯಲ್ಲಿಂದು ಮೇಯರ್, ಉಪಮೇಯರ್, ಆಯುಕ್ತರು ಸೇರಿದಂತೆ ಎಲ್ಲ ಸದಸ್ಯರೂ ಸಂತಾಪ ಸೂಚಿಸಿದರು.

Facebook Comments

Sri Raghav

Admin