ಖಾಕಿ ಕಳಚಿ ಖಾದಿ ತೊಡಲು ರೆಡಿಯಾದ ಪೊಲೀಸ್ ಅಧಿಕಾರಿಗಳು

ಈ ಸುದ್ದಿಯನ್ನು ಶೇರ್ ಮಾಡಿ

B-C-Patil--01

ಆಧುನಿಕ ಜಗತ್ತಿನಲ್ಲಿ ಕಾವಿ, ಖಾಕಿ, ಖಾದಿ ಬಹಳ ಬಲಿಷ್ಠ. ಖಾಕಿ ಮತ್ತು ಖಾದಿಗೆ ಬಹಳ ನಂಟು, ಸ್ನೇಹ, ಹಲವಾರು ಬಾಂಧವ್ಯದಿಂದಲೇ ಪೊಲೀಸ್ ಅಧಿಕಾರಿಗಳು ಖಾಕಿ ಕಳಚಿ ರಾಜಕೀಯಕ್ಕೆ ಬರುತ್ತಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿಮಾಡಿದ ಸೇವೆ, `ಘನ’ ಕಾರ್ಯಗಳನ್ನು ಮುಂದಿಟ್ಟುಕೊಂಡು ಪೊಲೀಸರು ರಾಜಕೀಯ ಪ್ರವೇಶ ಮಾಡುತ್ತಿರುವುದು ಈಗ ಸರ್ವೆ ಸಾಮಾನ್ಯವಾಗಿದೆ.  ಹೆಸರಾಂತ ಪೊಲೀಸ್ ಅಧಿಕಾರಿಗಳಾದ ಎಚ್.ಟಿ.ಸಾಂಗ್ಲಿಯಾನ, ಕೋದಂಡ ರಾಮಯ್ಯ, ರೇವಣ್ಣ ಸಿದ್ದಯ್ಯ, ಸುಭಾಷ್ ಭರಣಿ, ಶಂಕರ್ ಬಿದರಿ, ಬಿ.ಕೆ.ಶಿವರಾಂ,ಅಬ್ದುಲ್ ಅಜೀಂ, ಲೋಕೇಶ್ವರ, ಬಿ.ಸಿ.ಪಾಟೀಲ್, ಚನ್ನಿಗಪ್ಪ , ಆರ್.ಮಂಜುನಾಥ್, ರಾಜೀವ್ ಮುಂತಾದವರು ಈಗಾಗಲೇ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಮತ್ತು ಗೆಲುವುಗಳನ್ನು ಕಂಡಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅನುಪಮಾ ಶೆಣೈ, ಮದನ್ ಹಾಗೂ ಗಂಗಾಧರ್, ಎನ್.ಕೃಷ್ಣಪ್ಪ ಅವರು ಸಜ್ಜಾಗಿದ್ದಾರೆ. ರಾಜಕೀಯಕ್ಕೆ ಇವರು ಹೊಸಬರು.  ಡಿವೈಎಸ್ಪಿ ಹುದ್ದೆಗೆ ರಾಜೀನಾಮೆ ನೀಡಿ ಸ್ವತಂತ್ರ ರಾಜಕೀಯ ಪಕ್ಷ ಸ್ಥಾಪಿಸಿರುವ ಅನುಪಮಾ ಶೆಣೈ ಅವರು ಕಾಪು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ.   ಜನಸ್ನೇಹಿ ಪೊಲೀಸ್ ಅಧಿಕಾರಿ ಎಂದು ಹೆಸರು ಗಳಿಸಿರುವ ಮದನ್ ಅವರು ಮಂಗಳೂರಿನ ಬಜಪೆ ಠಾಣೆಯ ಎಸ್‍ಐಯಾಗಿ ಸೇವೆ ಸಲ್ಲಿಸುತ್ತಿದ್ದಾಗ ಹುದ್ದೆಗೆ ರಾಜೀನಾಮೆ ನೀಡಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಲು ಇಚ್ಚಿಸಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ 35 ವರ್ಷ ಸೇವೆ ಸಲ್ಲಿಸಿ ಎಸ್‍ಪಿಯಾಗಿ ನಿವೃತ್ತಿಯಾಗಿರುವ ಗಂಗಾಧರ್ ಅವರು ಬೆಂಗಳೂರು ನಗರ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿದ್ದಾರೆ.  ಕ್ರೀಡಾಪಟು ಆಗಿರುವ ಎಸ್.ಎನ್.ಗಂಗಾಧರ್ ಅವರು ಬೆಂಗಳೂರು ನಗರದ ವಿವಿಧ ಠಾಣೆಗಳಲ್ಲಿ ಸಬ್ ಇನ್‍ಸ್ಪೆಕ್ಟರ್, ಇನ್‍ಸ್ಪೆಕ್ಟರ್ ಹಾಗೂ ಸಂಚಾರ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಸಿಪಿಯಾಗಿ ಸೇವೆ ಸಲ್ಲಿಸಿ ಜನಮನ್ನಣೆಗಳಿಸಿದ್ದಾರೆ.
ಎಸ್ಪಿಯಾಗಿ ನಿವೃತ್ತಿ ಹೊಂದಿರುವ ಎನ್.ಕೃಷ್ಣಪ್ಪ ಅವರು ದಳದ ಅಭ್ಯರ್ಥಿಯಾಗಿ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಯಸಿದ್ದಾರೆ.
ಎನ್.ಕೃಷ್ಣಪ್ಪ ಅವರು ಯಲಹಂಕ ಪೊಲೀಸ್ ಠಾಣೆ ಮತ್ತು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಇನ್‍ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ.

ಈಗಾಗಲೇ ರಾಜಕೀಯ ಪ್ರವೇಶಿಸಿರುವ ಬಿ.ಕೆ.ಶಿವರಾಮ್ (ಕಾಂಗ್ರೆಸ್) ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಮತ್ತು ಜಿ.ಎ.ಭಾವ(ಕಾಂಗ್ರೆಸ್) ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡು ಮತ್ತೊಂದು ಅವಧಿಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ.  ಜೆಡಿಎಸ್ ತೊರೆದು ಬಿಜೆಪಿ ಸೇರಿರುವ ಮಾಜಿ ಎಂಎಲ್‍ಸಿ ಅಬ್ದುಲ್ ಅಜೀಂ ಅವರನ್ನು ಚಾಮರಾಜಪೇಟೆ ಕ್ಷೇತ್ರದ ಅಭ್ಯರ್ಥಿಯಾಗಿ ನಿಲ್ಲಿಸಲು ಬಿಜೆಪಿ ಚಿಂತನೆ ನಡೆಸುತ್ತಿದೆ.  ಬೆಳಗಾವಿ ಜಿಲ್ಲೆಯ ಕುಡಚಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾಗಿರುವ ರಾಜೀವ್ ಅವರು ಈಗ ಬಿಜೆಪಿಯಿಂದ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಇಚ್ಛಿಸಿದ್ದಾರೆ.
ಕಾಡುಗಳ್ಳ, ದಂತ ಚೋರ ವೀರಪ್ಪನ್ ಮತ್ತು ಆತನ ಸಹಚರರನ್ನು ಸದೆಬಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಖಡಕ್ ನಿವೃತ್ತ ಐಪಿಎಸ್ ಅಧಿಕಾರಿ ಶಂಕರ ಬಿದರಿ ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಅವರನ್ನು ವರುಣಾ ವಿಧಾನಸಭಾಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಶಂಕರ್ ಬಿದರಿಯವರಿಗೆ ಸೋಲು ಉಂಟಾಯಿತು. ನಂತರ ಅವರು ಬಿಜೆಪಿ ಸೇರಿದರು.  ಈಗಾಗಲೇ ಶಾಸಕರಾಗಿ, ಸಚಿವರಾಗಿ ಸೇವೆ ಸಲ್ಲಿಸಿರುವ ದಳದ ಮುಖಂಡ ಚನ್ನಿಗಪ್ಪ ಅವರು ಕೊನೆಯ ಗಳಿಗೆಯಲ್ಲಿ ಸ್ಪರ್ಧೆಗಿಳಿದರೂ ಅಚ್ಚರಿ ಪಡಬೇಕಿಲ್ಲ.   ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿರುವ ಆರ್.ಮಂಜುನಾಥ್ ಅವರು ಈಗಾಗಲೇ ರಾಜಕೀಯ ಪ್ರವೇಶಿಸಿದ್ದು , ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ದಳದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಭಾರೀ ಪ್ರಯತ್ನ ನಡೆಸಿದ್ದರು. ಬಿಬಿಎಂಪಿ ಚುನಾವಣೆಯಲ್ಲಿ ಮಲ್ಲಸಂದ್ರ ವಾರ್ಡ್‍ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದಾರೆ.  ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಭದ್ರತಾ ಸಿಬ್ಬಂದಿಯಾಗಿ ಮಂಜುನಾಥ್‍ರವರು ಸೇವೆ ಸಲ್ಲಿಸಿದ್ದರು.   ಕೆಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಲೋಕೇಶ್ವರ್ ಅವರು ಈಗ ದಳದ ಅಭ್ಯರ್ಥಿಯಾಗಿ ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ನಿಲ್ಲಲು ಸಜ್ಜಾಗಿದ್ದಾರೆ.

ಎರಡು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿರುವ ನಟ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಸಿ.ಪಾಟೀಲ್ ಮತ್ತೆ ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅಣಿಯಾಗಿದ್ದಾರೆ.  ಚುನಾವಣಾ ಆಯೋಗ ಮತದಾನದ ದಿನಾಂಕ ಘೋಷಣೆ ಮಾಡಿದ ನಂತರ ಪಕ್ಷಗಳು ತಮ್ಮ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡುವ ವೇಳೆಗೆ ಮತ್ತಷ್ಟು ನಿವೃತ್ತ ಪೊಲೀಸ್ ಅಧಿಕಾರಿಗಳು ಹೆಸರುಗಳು ಕೇಳಿಬರಬಹುದು ಎಂಬುದನ್ನು ಕಾದು ನೋಡಬೇಕಿದೆ.

Facebook Comments

Sri Raghav

Admin