ಮೇಯರ್ ಸಾಹೇಬ್ರೆ ಈ ಶಾಲೆ ಅದೋಗತಿ ಒಮ್ಮೆ ಕಣ್ಬಿಟ್ಟು ನೋಡಿ..!

ಈ ಸುದ್ದಿಯನ್ನು ಶೇರ್ ಮಾಡಿ

School--01

ಬೆಂಗಳೂರು, ಫೆ.20- ಗಬ್ಬು ನಾರುತ್ತಿರುವ ಟಾಯ್ಲೆಟ್… ವಿತರಣೆಯಾಗದೆ ಕೊಳೆಯುತ್ತಿರುವ ಸ್ಯಾನಿಟರಿ… ಛಾವಣಿಯೇ ಇಲ್ಲದ ಲ್ಯಾಬ್‍ಗಳು… ನಾಯಿ ಸತ್ತಿರುವಂತೆ ವಾಸನೆ… ಇವು ಟಸ್ಕರ್‍ಟೌನ್‍ನಲ್ಲಿರುವ ಬಿಬಿಎಂಪಿ ಹಾಗೂ ಪಿಯುಸಿ ಕಾಲೇಜಿನ ನೈಜ ಚಿತ್ರಣ. ಪಾಲಿಕೆ ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಗಂಗಮ್ಮ ಹಾಗೂ ಮತ್ತಿತರ ಅಧಿಕಾರಿಗಳ ತಂಡ ಇಂದು ಶಾಲೆಗೆ ಭೇಟಿ ನೀಡಿದ ವೇಳೆ ಕಂಡುಬಂದ ನೈಜ ಚಿತ್ರಣ…  ಇಂತಹ ಶಾಲೆಯಲ್ಲಿ ಮುದ್ದಾದ ಮಕ್ಕಳು ಪಾಠ ಕಲಿಯುತ್ತಿರುವುದು ದುರ್ದೈವವೇ ಸರಿ…

ಈ ಅವ್ಯವಸ್ಥೆ ಕಂಡು ಕೆಂಡಾಮಂಡಲರಾದ ಉಪಮೇಯರ್ ಅವರು ಮುಖ್ಯೋಪಾಧ್ಯಾಯರನ್ನು ತರಾಟೆಗೆ ತೆಗೆದುಕೊಂಡು ಬಡವರ ಮಕ್ಕಳಾದರೆ ಇಷ್ಟೊಂದು ತಾತ್ಸಾರವೇ. ಇದೇ ಪರಿಸ್ಥಿತಿ ನಿಮ್ಮ ಮಕ್ಕಳಿಗೆ ಬಂದಿದ್ದರೆ ಸುಮ್ಮನಿರುತ್ತಿದ್ದಿರಾ..? ಪಾಲಿಕೆ ಶಾಲೆಗೆ ಬನ್ನಿ ಬನ್ನಿ ಎಂದು ಭಾಷಣ ಮಾಡುತ್ತೀರಲ್ಲ, ಹೀಗೇನಾ ನೀವು ಶಾಲೆಯನ್ನು ಇಟ್ಟುಕೊಂಡಿರುವುದು… ಈ ರೀತಿ ಅವ್ಯವಸ್ಥೆ ಇದ್ದರೆ ಯಾವ ಮಕ್ಕಳು ತಾನೇ ಶಾಲೆ ಬರುತ್ತಾರೆ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಇನ್ನು ಪಿಯುಸಿ ಕಾಲೇಜಿನಲ್ಲಿರುವ ಲ್ಯಾಬ್ ಕೊಠಡಿಯ ಮೇಲ್ಚಾವಣಿಯೇ ಇಲ್ಲ. ಸರ್ಕಾರ ಹೆಣ್ಣು ಮಕ್ಕಳಿಗಾಗಿ ವಿತರಿಸುವ ಸ್ಯಾನಿಟರಿಗಳು ಒಂದು ವರ್ಷದಿಂದ ವಿತರಣೆಯಾಗದೆ ಹಾಳಾಗಿವೆ. ವಿತರಣೆ ಮಾಡದೆ ಏಕೆ ಇಟ್ಟುಕೊಂಡಿದ್ದೀರಿ, ಯಾವ ದೇಶ ಉದ್ಧಾರ ಮಾಡಲು ಈ ರೀತಿ ಮಾಡುತ್ತಿದ್ದೀರ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. ಕೂಡಲೇ ಮುಖ್ಯೋಪಾಧ್ಯಾಯರ ಬೇಜವಾಬ್ದಾರಿತನ ಆಯುಕ್ತರು ಹಾಗೂ ಮೇಯರ್ ಗಮನಕ್ಕೆ ತಂದು ಮುಖ್ಯಶಿಕ್ಷಕರನ್ನು ಅಮಾನತು ಮಾಡುವಂತೆ ತಿಳಿಸಲಾಗುವುದು ಎಂದರು.

ಈ ಕ್ಷಣದಿಂದಲೇ ಶಾಲೆಯ ನೈಜ ಚಿತ್ರಣ ಬದಲಾಗಬೇಕು. ನವೀಕರಣಕ್ಕೆ ಎಷ್ಟು ಹಣ ಖರ್ಚಾಗುತ್ತದೆ ಎಂಬುದರ ಬಗ್ಗೆ ನೀಲಿನಕ್ಷೆ ನೀಡಿ ಉಪಮೇಯರ್ ಅನುದಾನದಲ್ಲಿ ಹಣ ಮಂಜೂರು ಮಾಡಿಸಿಕೊಡಲಾಗುವುದು. ಒಟ್ಟಿನಲ್ಲಿ ಶಾಲೆಯ ಚಿತ್ರಣವೇ ಬದಲಾಗಿ ವಿದ್ಯಾರ್ಥಿಗಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಾಣವಾಗಬೇಕು. ಒಂದು ವೇಳೆ ನಿರ್ಲಕ್ಷ್ಯ ತೋರಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಮುಖ್ಯ ಶಿಕ್ಷಕರಿಗೆ ಎಚ್ಚರಿಕೆ ನೀಡಿದರು.

Facebook Comments

Sri Raghav

Admin