ಆನೇಕಲ್‍ನಲ್ಲಿ ಕೈ-ಕಮಲಕ್ಕೆ ಬಿಎಸ್‍ಪಿ-ಜೆಡಿಎಸ್ ದೋಸ್ತಿ ಸವಾಲ್

ಈ ಸುದ್ದಿಯನ್ನು ಶೇರ್ ಮಾಡಿ

Anekal--01

– ಬಣ್ಣ ರಮೇಶ್

ರಾಜಕೀಯವನ್ನೇ ಉಸಿರಾಗಿಸಿ ಕೊಂಡಿರುವ ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕಾಂಗ್ರೆಸ್, ಬಿಜೆಪಿ ಹಾಗೂ ಬಿಎಸ್‍ಪಿ ಪಾಳಯದಲ್ಲಿ ಸಂಚಲನ ಮೂಡಿದೆ. ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಎ.ನಾರಾಯಣಸ್ವಾಮಿರವರು 18 ವರ್ಷಗಳ ಕಾಲ ಆನೇಕಲ್ ಕ್ಷೇತ್ರದಲ್ಲಿ ಶಾಸಕರಾಗಿ ಮಂತ್ರಿಗಳಾಗಿದ್ದರೂ ಸಹ 2013ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯ ಆಂತರಿಕ ಸಮಸ್ಯೆಯಿಂದ ಅವರು ಸೋಲನ್ನು ಕಂಡಿದ್ದರು.

ಕಾಂಗ್ರೆಸ್ ನಿಂದ ಟಿಕೇಟ್ ವಂಚಿತನಾದ ಆನೇಕಲ್ ಕೇಶವರವರು ಜೆಡಿಎಸ್ ಪಕ್ಷದಲ್ಲಿ ಟಿಕೇಟ್ ಪಡೆಯುವಲ್ಲಿ ಯಶಸ್ವಿಗೊಂಡರು ಸಹ ಚುನಾವಣೆ ಸಮೀಪವಾಗುತ್ತಿದ್ದಂತೆ ಕಣ್ಮರೆಯಾಗಿದ್ದರು ಆದರೂ ಸಹ 7 ಸಾವಿರ ಮತವನ್ನು ಜನತೆ ಜೆಡಿಎಸ್ ಪಕ್ಷಕ್ಕೆ ನೀಡಿದ್ದರು. ಇನ್ನು ಬಿ.ಎಸ್.ಪಿ ಅಭ್ಯರ್ಥಿಯಾದ ಕಲ್ಲಹಳ್ಳಿ ಶ್ರೀನಿವಾಸ್ ಕೂಡ ಕಡಿಮೆ ಮತಗಳನ್ನು ಪಡೆದು ಪರಾಭವಗೊಂಡಿದ್ದರು. ಇವುಗಳ ನಡುವೆ 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ಬಿ.ಶಿವಣ್ಣರವರು 40 ಸಾವಿರ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು.

ಬಿಜೆಪಿ ಅಭ್ಯರ್ಥಿ ಘೋಷಣೆ- ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮಾಜಿ ಸಚಿವ ಎ.ನಾರಾಯಣಸ್ವಾಮಿರವರೇ ಬಿಜೆಪಿಯ ಅಭ್ಯರ್ಥಿ ಎಂದು ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೆಬ್ಬಗೋಡಿಯಲ್ಲಿ ನಡೆದ ನವ ಚೈತನ್ಯ ಸಮಾವೇಶದಲ್ಲಿ ಘೋಷಣೆ ಮಾಡಿದ್ದರು.  ಬಿಜೆಪಿ ಪಕ್ಷದ ಮುಖಂಡರಲ್ಲಿದ್ದ ಆಂತರಿಕ ಸಮಸ್ಯೆಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಮಾಜಿ ಸಚಿವ ಎ.ನಾರಾಯಣಸ್ವಾಮಿರವರು ಯಶಸ್ವಿಯಾಗಿ ಇತ್ತೀಚೆಗೆ ಹೆಬ್ಬಗೋಡಿಯಲ್ಲಿ ನಡೆದ ನವ ಚೈತನ್ಯ ಸಮಾವೇಶದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಜನತೆ ಯನ್ನು ಒಟ್ಟುಗೂಡಿಸಿ ಸಮಾವೇಶವನ್ನು ಯಶಸ್ವಿಗೊಳಿಸಿದ್ದಾರೆ.

ಅಭಿವೃದ್ಧಿಯೇ ಮೂಲಮಂತ್ರ:
ಕಳೆದ 5 ವರ್ಷದಲ್ಲಿ ಆನೇಕಲ್ ಕ್ಷೇತ್ರದಲ್ಲಿ ಸಾಕಷ್ಠು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದು ಜನತೆ ಮತ್ತೇ ನನ್ನ ಕೈ ಹಿಡಿಯುತ್ತಾರೆ ಎಂದು ಹಾಲಿ ಶಾಸಕ ಬಿ.ಶಿವಣ್ಣರವರು ತಿಳಿಸಿದ್ದಾರೆ.

ಹೊಂದಾಣಿಕೆ:
ಜೆಡಿಎಸ್ ವರಿಷ್ಠರ ಆಜ್ಞೆಯಂತೆ ಆನೇಕಲ್ ಕ್ಷೇತ್ರದಲ್ಲಿ ಈ ಬಾರಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಬಿಎಸ್ ಪಿ ಅಭ್ಯರ್ಥಿಗೆ ಸಹಕಾರ ನೀಡುವುದಾಗಿ ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜಣ್ಣ ತಿಳಿಸಿದ್ದಾರೆ.

ಮಿಂಚಿನ ಸಂಚಲನ :
ಆನೇಕಲ್ ವಿಧಾನ ಸಭಾ ಕ್ಷೇತ್ರದಲ್ಲಿ ತಳಸೇರಿದ್ದ ಜೆಡಿಎಸ್ ಪಕ್ಷವನ್ನು ಕಾಂಗ್ರೆಸ್ ಮತ್ತು ಬಿಜೆಪಿಗೆ ಸಮನಾಂತರವಾಗಿ ಸಂಘಟಿಸಲು ಜೆಡಿಎಸ್ ಯುವ ಮುಖಂಡ ಕೆ.ಪಿ.ರಾಜುರವರು ಯಶಸ್ವಿಯಾಗಿದ್ದರು. ಜೊತೆಗೆ ಸಾವಿರಾರು ಕಾರ್ಯಕರ್ತರನ್ನು ಬೇರೆ-ಬೇರೆ ಪಕ್ಷಗಳಿಂದ ಜೆಡಿಎಸ್ ಪಕ್ಷಕ್ಕೆ ಕರೆತಂದಿದ್ದರು ಆದರೆ ಕೊನೆ ಕ್ಷಣದಲ್ಲಿ ಜೆಡಿಎಸ್ ವರಿಷ್ಠರು ಆನೇಕಲ್ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಬಿಎಸ್‍ಪಿ ಅಭ್ಯರ್ಥಿಗೆ ಬೆಂಬಲ ಸೂಚಿಸುವುದಾಗಿ ಘೋಷಣೆ ಮಾಡಿರುವುದರಿಂದ ಅಭ್ಯರ್ಥಿ ಮತ್ತು ಜೆಡಿಎಸ್ ಕಾರ್ಯಕರ್ತರಿಗೆ ನಿರಾಸೆ ಮೂಡಿದೆ.

ಚಂದಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಹಳೇ ಚಂದಾಪುರದ ಕೃಷ್ಣಮೂರ್ತಿರವರು ತಾವೇ ಬಿಎಸ್‍ಪಿ ಅಭ್ಯರ್ಥಿ ಎಂದು ಈಗಾಗಲೇ ಬಿಎಸ್‍ಪಿ ಮುಖಂಡರ ಜೊತೆಗೂಡಿ ಆನೇಕಲ್ ಕ್ಷೇತ್ರದ ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಪಕ್ಷದ ಬಲವರ್ದನೆಗೆ ದುಡಿಯುತ್ತಿದ್ದಾರೆ ಇನ್ನು ಬಹುಜನ ವಿದ್ಯಾರ್ಥಿ ಸಂಘದ ಕಾರ್ಯಕರ್ತರು ಸಹ ಬಿಎಸ್.ಪಿ ಗೆ ಬೆಂಬಲ ಸೂಚಿಸಿದ್ದಾರೆ.

ಆನಂದ್‍ರಾಜ್ ಅಂಬೇಡ್ಕರ್‍ರವರ ನೇತೃತ್ವದಲ್ಲಿ ಸ್ಥಾಪಿತವಾಗಿರುವ ಕರ್ನಾಟಕ ರಿಪಬ್ಲಿಕನ್ ಸೇನೆ ವತಿಯಿಂದ ಪ್ರಥಮವಾಗಿ ಆನೇಕಲ್ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ಕೆ.ಆರ್.ಎಸ್. ಸಂಘಟನೆಯ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ಸಹ ತಿಳಿಸಿದ್ದಾರೆ. ಆನೇಕಲ್ ವಿಧಾನ ಸಭಾ ಕ್ಷೇತ್ರದಲ್ಲಿ 2.5 ಲಕ್ಷ ಮತದಾರರಿದ್ದು ಈ ಬಾರಿ ಚುನಾವಣೆಯಲ್ಲಿ ಮತದಾರರನ ತೀರ್ಪು ಯಾರ ಕಡೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಾರೆಯಾಗಿ ಚುನಾವಣೆ ಎರಡು ತಿಂಗಳು ಇರುವಾಗಲೇ ಆನೇಕಲ್ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಅಖಾಡಕ್ಕಿಳಿದು ಮತದಾರರ ಮನವೊಲಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ.

Facebook Comments

Sri Raghav

Admin