ನೆಲಮಂಗಲದಲ್ಲಿ ಕೈ-ಕಮಲ ಗೊಂದಲದಿಂದ ಜೆಡಿಎಸ್ ಗೆ ಸಿಗುವುದೇ ಸೆಕೆಂಡ್ ಚಾನ್ಸ್..?

ಈ ಸುದ್ದಿಯನ್ನು ಶೇರ್ ಮಾಡಿ

Nelamangala

– ಮಂಜುನಾಥ್
ಕರುನಾಡಿನ ವಿಧಾನಸಭೆ ಕದನಕ್ಕೆ ರಣ ಕಣ ಸಜ್ಜಾಗುತ್ತಿದೆ. ರಾಜಧಾನಿ ಬೆಂಗಳೂರಿನ ಸೆರಗಿನಲ್ಲೇ ಇರೋ ನೆಲಮಂಗಲ ಮೀಸಲು ವಿಧಾನಸಭೆ ಕ್ಷೇತ್ರದಲ್ಲಿ ರಾಜಕೀಯ ಗರಿಗೆದರಿದೆ.  ನೆಲಮಂಗಲ ಕ್ಷೇತ್ರದ ಮತದಾರರು ಪಕ್ಷವೋ..ವ್ಯಕ್ತಿಯೋ ಅನ್ನೋ ಗೊಂದಲವನ್ನು ಇತಿಹಾಸದುದ್ದಕ್ಕೂ ಮುಂದುವರೆಸುತ್ತಲೇ ಬಂದಿದ್ದಾರೆ.  ಈ ಹಿಂದೆ ಹಿರಿಯ ನಾಯಕರಾದ ಆಂಜನಮೂರ್ತಿ ಮತ್ತು ಶಂಕರ್ ನಾಯಕ್ ನಡುವೆ ವ್ಯಕ್ತಿ ಸಮರ ನಡೆದಿತ್ತು. ಆದರೆ 2008ರ ಕ್ಷೇತ್ರ ಪುನರ್ ವಿಂಗಡಣೆ ನಂತರ ಇಲ್ಲಿ ವ್ಯಕ್ತಿ ಮಾಯವಾಗಿ ಪಕ್ಷ ಪೂಜೆ ಶುರುವಾಗಿದೆ.

ಹೀಗಾಗಿ ಈ ಬಾರಿ ಯಾವ ಪಕ್ಷದ ಸರದಿ ಅನ್ನೋದೇ ಬಾರೀ ಕುತೂಹಲದ ಸಂಗತಿಯಾಗಿದೆ. ಕ್ಷೇತ್ರದಲ್ಲಿ ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ಪಾರುಪತ್ಯವನ್ನು ಪಡೆದಿತ್ತು. ಆದರೆ ಈ ಹಿಂದೆ ಕೊರಟಗೆರೆ ಕ್ಷೇತ್ರದ ಜತೆ ಹಂಚಿಹೋಗಿದ್ದ ನೆಲಮಂಗಲ ತಾಲೂಕಿನ ಭಾಗವಾದ ಸೋಂಪುರ (ದಾಬಸ್‍ಪೇಟೆ) ಹೋಬಳಿ ಮತ್ತು ಮಾಗಡಿ ತಾಲೂಕಿನ ಸೋಲೂರು ಹೋಬಳಿಗಳು ಸೇರಿಕೊಂಡ ನಂತರ ಚಿತ್ರಣವೇ ಬದಲಾಗಿದೆ. ಜೆಡಿಎಸ್ ಇಲ್ಲಿ ಗೆಲುವಿನ ಕುದುರೆ ಅನಿಸಿಕೊಂಡಿದ್ದರೆ ಒಂದೇ ಒಂದು ಗೆಲುವಿನ ಇತಿಹಾಸ ಹೊಂದಿರುವ ಬಿಜೆಪಿ ಪ್ರಮುಖ ಕಂಟೆಂಡರ್ ಎನಿಸಿಕೊಂಡಿದೆ.

ಕೈ ಕಚ್ಚಾಟ :

ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರೋ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್‍ಗೆ ನೆಲಮಂಗಲದಲ್ಲಿ ಮಾತ್ರ ವಿಶ್ವಾಸ ಇಲ್ಲ. ಏಕೆಂದರೆ ಇಲ್ಲಿ ಮನೆಯೊಂದು ನಾಲ್ಕು ಬಾಗಿಲು ಅನ್ನೋ ಸ್ಥಿತಿ ಇದೆ. ಎಲೆಕ್ಷನ್‍ಗೆ ಮೂರ್ನಾಲ್ಕು ತಿಂಗಳು ಬಾಕಿ ಇರುವಾಗಲೇ ಬಂಡಾಯದ ಬೆಂಕಿ ಕಾಂಗ್ರೆಸ್ ಪಕ್ಷವನ್ನು ವ್ಯಾಪಿಸಿಕೊಂಡಿದೆ.
ಒಂದು ಟಿಕೆಟ್‍ಗಾಗಿ ಆರು ಮಂದಿ ಆಕಾಂಕ್ಷಿಗಳಿದ್ದು, ನಾಲ್ವರ ನಡುವೆ ತೀವ್ರ ಪೈಪೋಟಿ  ಇದೆ. ಮಾಜಿ ಸಚಿವ ಆಂಜನಮೂರ್ತಿ, ಎಂಎಲ್‍ಸಿ ಎಲ್.ಹನುಮಂತಯ್ಯ, ಹೆಚ್.ಪಿ.ಚೆಲುವರಾಜು, ಸಪ್ತಗಿರಿ ಶಂಕರನಾಯಕ್, ಮಾಜಿ ಮೇಯರ್ ನಾರಾಯಣಸ್ವಾಮಿ, ಉಮಾದೇವಿ ಮತ್ತು ಕಾರೇಹಳ್ಳಿ ವೆಂಕಟರಾಮ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇದ್ರಲ್ಲಿ ಆಂಜನಮೂರ್ತಿ ಮತ್ತು ಚೆಲುವರಾಜು ನಡುವೆ ಪೈಪೋಟಿ  ಇದೆ. ಆಂಜನಮೂರ್ತಿ ಎಸ್‍ಎಂಕೆ ಸರ್ಕಾರದಲ್ಲಿ ಸಚಿವರಾಗಿದ್ದವರು.

ಈ ಹಿಂದೆ ಎರಡು ಬಾರಿ ಕ್ಷೇತ್ರ ಪ್ರತಿನಿಧಿಸಿದ್ದಾರೆ. ಹೀಗಾಗಿ ನನಗೇ ಟಿಕೆಟ್ ಬೇಕು ಎಂದು ಜಿದ್ದಿಗೆ ಬಿದ್ದಿದ್ದಾರೆ. ಆದ್ರೆ ಇಳಿ ವಯಸ್ಸಿಗೆ ಜÁರಿರೋ ಆಂಜನಮೂರ್ತಿಗೆ ಹೊಸ ಕಾರ್ಯ ಕರ್ತರ ಬೆಂಬಲ ಇಲ್ಲ. ಹೀಗಾಗಿ ನಮಗೆ ಆಂಜನಮೂರ್ತಿ ಬೇಡ್ವೇ ಬೇಡ ಅನ್ನೋ ಕೂಗು ಎದ್ದಿದೆ. ಇತ್ತೀಚೆಗಷ್ಟೇ ವೀಕ್ಷಕಿ ಜಯಮಾಲಾ ಸಮ್ಮುಖದಲ್ಲೂ ಇದೇ ಕಾರಣಕ್ಕೆ ದೊಡ್ಡ ರಾದ್ಧಾಂತವೇ ನಡೆದು ಸಭೆ ಅರ್ಧಕ್ಕೆ ಮೊಟಕುಗೊಂಡಿತ್ತು. 2008ರ ನಂತ್ರ ಎರಡು ಬಾರಿ ಅಭ್ಯರ್ಥಿಯಾಗಿದ್ದ ಆಂಜನಮೂರ್ತಿ ಸೋತು ಸುಣ್ಣವಾಗಿದ್ದಾರೆ. ತಮ್ಮ ಮಗನನ್ನೇ ಸೋಂಪುರ ಜಿಪಂ ಕ್ಷೇತ್ರಕ್ಕೆ ನಿಲ್ಲಿಸಿದರೂ ಗೆಲ್ಲಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಅವರ ಸ್ಪರ್ಧೆಗೆ ವಿರೋಧ ಹೆಚ್ಚಿದೆ. ಇದೇ ಕಾರಣಕ್ಕೆ ಈ ಭಾಗದ ಸಂಸದ ವೀರಪ್ಪ ಮೊಯ್ಲಿ ಕೂಡ ಆಂಜನಮೂರ್ತಿ ನೆರವಿಗೆ ಬರ್ತಿಲ್ಲ.

ಇದರ ಲಾಭ ಪಡೆಯೋಕೆ ಹೆಚ್.ಪಿ.ಚೆಲುವರಾಜು ಸಜ್ಜಾಗಿದ್ದಾರೆ. ಹೇಳಿಕೇಳಿ ಇವರು ಸಚಿವ ಹೆಚ್.ಆಂಜನೇಯ ಅವರ ಸಂಬಂಧಿ. ಆಂಜನೇಯ ಪತ್ನಿ ಮತ್ತು ಚೆಲುವರಾಜು ಪತ್ನಿ ಇಬ್ಬರೂ ಸೋದರಿಯರು. ಹೀಗಾಗಿ ಆಂಜನೇಯ ತನ್ನ ಸಂಬಂಧಿಗೆ ಟಿಕೆಟ್ ಕೊಡಿಸಲು ಶ್ರಮಿಸುತ್ತಿದ್ದಾರೆ. ಕಳೆದ ಬಾರಿ ಕೆಜೆಪಿಯಿಂದ ನಿಂತಿದ್ದ ಚೆಲುವರಾಜು 9 ಸಾವಿರ ಮತಗಳನ್ನು ಪಡೆದುಕೊಂಡಿದ್ದರು. ಇದರ ಮಧ್ಯೆ ಎಂಎಲ್‍ಸಿ ಹನುಮಂತಯ್ಯ ನನಗೇ ಟಿಕೆಟ್ ಎಂದು ಹೇಳಿಕೊಂಡು ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾರೆ.  ಇದು ಬಿಟ್ಟರೆ ಬಿಬಿಎಂಪಿಯ ಮಾಜಿ ಮೇಯರ್ ನಾರಾಯಣಸ್ವಾಮಿಯೂ ಓಡಾಟ ಶುರು ಮಾಡಿದ್ದಾರೆ. ಕ್ಷೇತ್ರದಲ್ಲಿ ಒಂದು ಜಿಪಂ ಕ್ಷೇತ್ರ, 9 ತಾಪಂ ಕ್ಷೇತ್ರ ಮತ್ತು 7-8 ಗ್ರಾಮ ಪಂಚಾಯ್ತಿಗಳಲ್ಲಿ ಕಾಂಗ್ರೆಸ್ ಹಿಡಿತ ಇದೆ. ಸಾಂಪ್ರದಾಯಿಕ ಮತಗಳು ಕಾಂಗ್ರೆಸ್ ಕಡೆ ಇದ್ದರೂ ಟಿಕೆಟ್ ಗೊಂದಲ ಅದರ ಓಟಕ್ಕೆ ತೊಡಕಾಗುತ್ತಿದೆ.

ಕಮಲ ಗೊಂದಲ:
ನೆಲಮಂಗಲ ಕ್ಷೇತ್ರದ ಇತಿಹಾಸದಲ್ಲಿ ಬಿಜೆಪಿ ಲೆಕ್ಕಕ್ಕೇ ಇರಲಿಲ್ಲ. ಆದರೆ 2008ರಲ್ಲಿ ಯಡಿಯೂರಪ್ಪ ಅಲೆ ಕಮಲವನ್ನು ಗೆಲ್ಲಿಸಿತ್ತು. ನಿರ್ಣಾಯಕ ಸಂಖ್ಯೆಯಲ್ಲಿರೋ ಲಿಂಗಾಯತರು ಮತ್ತು ಬೋವಿಗಳ ಸಮೀಕರಣ ಕಮಲ ಅರಳಿಸಿತ್ತು. ಆದರೆ ಈ ಬಾರಿ ಅಂತಾ ವಾತಾವರಣ ಇಲ್ಲವೇ ಇಲ್ಲ. ಕಾಂಗ್ರೆಸ್‍ನಂತೆ ಇಲ್ಲೂ ಟಿಕೆಟ್ ಫೈಟ್ ದೊಡ್ಡ ಮಟ್ಟದಲ್ಲಿದೆ. ಮಾಜಿ ಶಾಸಕ ಎಂ.ವಿ.ನಾಗರಾಜ್, ನಿವೃತ್ತ ತಹಶೀಲ್ದಾರ್ ಬಿ.ಹೊಂಬಯ್ಯ ಮತ್ತು ನಿವೃತ್ತ ಐಎಎಸ್ ಅಧಿಕಾರಿ ವಿ.ಶ್ರೀನಿವಾಸ್ ನಡುವೆ ಪೈಪೋಟಿ  ಇದೆ.

ಬೋವಿ ಜನಾಂಗದ ನಾಗರಾಜ್ ತನಗೇ ಟಿಕೆಟ್ ಎನ್ನುತ್ತಿದ್ದಾರೆ. 2008ರಲ್ಲಿ ಬಿಎಸ್‍ವೈ ಕಾರಣಕ್ಕೆ ಗೆದ್ದಿದ್ದ ನಾಗರಾಜು ಅವರ ಬೆನ್ನಿಗೆ ನಿಲ್ಲಲಿಲ್ಲ. ರೆಡ್ಡಿಗಳ ಮಾತು ಕೇಳಿ ಬಂಡಾಯ ಎದ್ದು ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದರು. 900 ಕೋಟಿ ಅನುದಾನ ತಂದಿದ್ದೀನಿ ಅಂತಾ ಹೇಳಿಕೊಂಡ್ರೂ ಗುರುತಿಸುವಂತಹ ಸಾಧನೆಗಳು ಕಾಣುತ್ತಿಲ್ಲ. ಬಿಜೆಪಿಯಿಂದ ಗೆದ್ದು ಬಂದ್ರೂ ಜೆಡಿಎಸ್ ಜತೆ ಸಖ್ಯ ಬೆಳೆಸಿಕೊಂಡಿದ್ದರು ಅನ್ನೋ ಕಾರಣಕ್ಕೆ ಮತ್ತೆ ಅವರಿಗೆ ಟಿಕೆಟ್ ಕೊಡೋದು ಬಹುತೇಕ ಸ್ಥಳೀಯ ಮುಖಂಡರಿಗೆ ಇಷ್ಟವಿಲ್ಲ.

ರಾಜಕೀಯ ಎಂಟ್ರಿ ಕಾರಣದಿಂದಲೇ ತಹಶೀಲ್ದಾರ್ ಹುದ್ದೆಗೆ ಸ್ವಯಂ ನಿವೃತ್ತಿ ಕೊಟ್ಟು ಬಂದ ಬಿ.ಹೊಂಬಯ್ಯಗೆ ಆರ್‍ಎಸ್‍ಎಸ್ ಆಶೀರ್ವಾದ ಇದೆ. ಜತೆಗೆ 25ವರ್ಷ ನೆಲಮಂಗಲದಲ್ಲೇ ಸರ್ಕಾರಿ ಅಧಿಕಾರಿಯಾಗಿ ಕೆಲಸ ಮಾಡಿರೋ ಪ್ಲಸ್ ಪಾಯಿಂಟ್ ಕೂಡಾ ಇದೆ.. ಇದೇ ಕಾರಣಕ್ಕೆ ಇತ್ತೀಚೆಗೆ ನಡೆದ ಪರಿವರ್ತನಾ ರ್ಯಾಲಿಯಲ್ಲಿ ಯಡಿಯೂರಪ್ಪ ಅವ್ರು ನಾಗರಾಜ್ ಮತ್ತು ಹೊಂಬಯ್ಯ ಇಬ್ಬರ ಹೆಸರನ್ನೂ ಪ್ರಸ್ತಾಪ ಮಾಡಿದ್ದರು. ಆದರೆ ಸ್ಥಳೀಯ ಮುಖಂಡರಲ್ಲಿ ಹೊಂಬಯ್ಯ ಬಗ್ಗೆಯೂ ಕೆಲವರಿಗೆ ಇಷ್ಟ ಇಲ್ಲ. ಏಕಂದ್ರೆ ಅವ್ರಿಗೆ ರಾಜಕೀಯದ ಅನುಭವ ಇಲ್ಲ ಅನ್ನೋ ಕಾರಣ ಕೊಡ್ತಾರೆ. ಹೊಂಬಯ್ಯಗೆ ಟಿಕೆಟ್ ತಪ್ಪಿಸಲು ನಾಗರಾಜ್ ಶತಪ್ರಯತ್ನ ನಡೆಸುತ್ತಲೇ ಇದ್ದಾರೆ. ಹೀಗಾಗಿ ಇವರಿಬ್ಬರ ನಡುವೆ ಐಎಎಸ್ ಹುದ್ದೆಯನ್ನೆ ತ್ಯಜಿಸಿ ಬಂದಿರೋ ವಿ.ಶ್ರೀನಿವಾಸ್‍ಗೆ ಕಮಲ ಪಕ್ಷದ ಟಿಕೆಟ್ ಸಿಗೋ ಚಾನ್ಸ್ ಇದೆ. ಹೀಗಾಗಿ ಇಲ್ಲೂ ಅಭ್ಯರ್ಥಿ ಯಾರು ಅನ್ನೋ ಗೊಂದಲ ಇದೆ.

ದಳಕ್ಕೆ ಡಾಕ್ಟರ್ ಫಿಕ್ಸ್..!:
ಜೆಡಿಎಸ್ ಪಕ್ಷಕ್ಕೆ ಹಾಲಿ ಶಾಸಕ ಡಾಕ್ಟರ್ ಶ್ರೀನಿವಾಸಮೂರ್ತಿಯೇ ಅಭ್ಯರ್ಥಿ ಅನ್ನೋದು ಪಕ್ಕಾ ಆಗಿದೆ. ವಿಕಾಸ ಪರ್ವ ಸಮಾವೇಶದಲ್ಲಿ ಹೊರ ಬಿದ್ದ ಮೊದಲ ಪಟ್ಟಿಯಲ್ಲಿ ಶ್ರೀನಿವಾಸಮೂರ್ತಿ ಹೆಸರು ಘೋಷಣೆ ಆಗಿದೆ. ಅಲ್ಲಿಗೆ ಅಭ್ಯರ್ಥಿ ಗೊಂದಲ ಇಲ್ವೇ ಇಲ್ಲ. ಸಾಫ್ಟ್ ಸ್ವಭಾವ ಹೊಂದಿರೋ ಶ್ರೀನಿವಾಸಮೂರ್ತಿ ಎಲ್ಲರ ಜತೆಯೂ ಹೊಂದಿಕೊಂಡು ಹೋಗುತ್ತಾರೆ. ಕೆಲಸದ ವಿಚಾರದಲ್ಲಿ ರಾಜಕಾರಣವನ್ನೂ ಮಾಡೋಲ್ಲ ಅನ್ನೋ ಕಾರಣಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರೂ ಇವರನ್ನು ಪ್ರೀತಿಸುತ್ತಾರೆ. ಕಳೆದ ಐದು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ ಕ್ಷೇತ್ರಕ್ಕೆ ಒಂದಷ್ಟು ಅಭಿವೃದ್ಧಿ ಕೆಲಸಗಳನ್ನು ತಂದಿದ್ದಾರೆ. ಮುಂದೆ ಜೆಡಿಎಸ್ ಅಧಿಕಾರಕ್ಕೆ ಬರೋ ಮುನ್ಸೂಚನೆ ಇರೋದ್ರಿಂದ ಜನರೂ ಶ್ರೀನಿವಾಸಮೂರ್ತಿ ಅವರನ್ನೇ ಗೆಲ್ಲಿಸುವ ವಿಶ್ವಾಸ ಇದೆ.

ಆದರೆ ಜೆಡಿಎಸ್‍ನಲ್ಲೂ ಭಿನ್ನಮತ ಇಲ್ಲವೆಂದೇನಿಲ್ಲ. ಕ್ಷೇತ್ರದ ನಿರ್ಣಾಯಕ ಸಮುದಾಯ ಒಕ್ಕಲಿಗರಲ್ಲಿ ಒಗ್ಗಟ್ಟಿನ ಕೊರತೆ ಕಾಣುತ್ತಿದೆ. ದಿವಂಗತ ಬಿಎಂಎಲ್ ಕೃಷ್ಣಪ್ಪ ಅವರ ಪುತ್ರ ಹಾಗೂ ಎಂಎಲ್‍ಸಿ ಕಾಂತರಾಜು ತಾಲೂಕಿನಲ್ಲಿ ತಾನು ಹೇಳಿದ್ದೇ ನಡೀಬೇಕು ಅನ್ನುತ್ತಿದ್ರೆ, ಮಾಜಿ ಎಂಎಲ್‍ಸಿ ಇ.ಕೃಷ್ಣಪ್ಪ ಬೆಂಬಲಿಗರು ತಮ್ಮ ನಾಯಕನದ್ದೇ ನಡೆಯಬೇಕು ಎನ್ನುತ್ತಿದ್ದಾರೆ. ಇವರಿಬ್ಬರ ನಡುವೆ ಹೊಂದಾಣಿಕೆ ತಂದು ಬಿಟ್ಟರೆ ಜೆಡಿಎಸ್ ಗೆಲುವಿನ ಹಾದಿ ಸುಗಮ. ಹೀಗಾಗಿ ಎಚ್‍ಡಿಡಿ-ಎಚ್‍ಡಿಕೆ ಒಮ್ಮೆ ಕ್ಷೇತ್ರಕ್ಕೆ ಬಂದು ಹೋದ್ರೆ ಈ ಗೊಂದಲ ಬಗೆಹರಿದಂತೆ ಎನ್ನುತ್ತಿದ್ದಾರೆ ಸ್ಥಳೀಯ ಮುಖಂಡರು. ಕ್ಷೇತ್ರದಲ್ಲಿ ದಲಿತ ಮತಗಳೂ ಹೆಚ್ಚಿರೋದ್ರಿಂದ ಇಲ್ಲಿ ಬಿಎಸ್‍ಪಿ ಮೈತ್ರಿ ಜೆಡಿಎಸ್‍ಗೆ ಇನ್ನಷ್ಟು ಬಲ ತಂದಿದೆ.

ದಲಿತರೇ ಹೆಚ್ಚು..ಒಕ್ಕಲಿಗರೇ ನಿರ್ಣಾಯಕ..!:
ಬರೋಬ್ಬರಿ 2 ಲಕ್ಷ ಮತದಾರರನ್ನು ಹೊಂದಿರುವ ನೆಲಮಂಗಲದಲ್ಲಿ ಪುರುಷ ಮತ್ತು ಮಹಿಳಾ ಮತದಾರರ ನಡುವೆ ಅಂತಹ ಅಂತರವೇನೂ ಇಲ್ಲ. 97790 ಪುರುಷರಿದ್ದರೆ, 94973 ಮಹಿಳಾ ಮತದಾರರಿದ್ದಾರೆ. ಇದ್ರಲ್ಲಿ ಎಸ್‍ಸಿ-ಎಸ್‍ಟಿಗಳದ್ದೇ ಸಿಂಹಪಾಲು. ಒಟ್ಟು 58 ಸಾವಿರ ಮತದಾರರು ಪರಿಶಿಷ್ಟ ಜಾತಿ-ಪಂಗಡಕ್ಕೆ ಸೇರಿದ್ದಾರೆ. ಅದು ಬಿಟ್ಟರೆ 55 ಸಾವಿರ ಒಕ್ಕಲಿಗರು. 30 ಸಾವಿರ ಲಿಂಗಾಯತರು, 16 ಸಾವಿರ ಮುಸ್ಲಿಂರು, 12 ಸಾವಿರ ಬೋವಿಗಳು, 35 ಸಾವಿರಕ್ಕೂ ಹೆಚ್ಚು ತಿಗಳ,ಬ್ರಾಹ್ಮಣ ಮತ್ತಿತರೆ ಜಾತಿಗಳ ಮತಗಳಿವೆ.

ಕಾಂಗ್ರೆಸ್ ದಲಿತ ಮತ್ತು ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟಿದೆ. ಜೆಡಿಎಸ್‍ಗೆ ಒಕ್ಕಲಿಗ ಮತಗಳ ಬಲ ಇದ್ದರೆ ಬಿಎಸ್‍ಪಿ ಕಾರಣಕ್ಕೆ ದಲಿತ ಹಾಗೂ ಮುಸ್ಲಿಂ ಮತಗಳೂ ಸುಲಭವಾಗಿ ದಕ್ಕುವ ವಿಶ್ವಾಸ ಇದೆ. ಇನ್ನು ಬಿಜೆಪಿ ಲಿಂಗಾಯತ ಮತ್ತು ಬೋವಿ ಮತಗಳನ್ನು ನೆಚ್ಚಿಕೊಂಡಿದೆ. ಮೀಸಲು ಕ್ಷೇತ್ರ ಆಗಿರೋ ಕಾರಣಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಎಸ್‍ಸಿ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಬಿಜೆಪಿ ಬೋವಿ ಜನಾಂಗಕ್ಕೆ ಮಣೆ ಹಾಕುತ್ತೋ ಅಥವಾ ಎಸ್‍ಸಿಗೆ ಬರೋ ಹೊಂಬಯ್ಯಗೆ ಟಿಕೆಟ್ ನೀಡುತ್ತೋ ಕಾದು ನೋಡಬೇಕು. ಒಟ್ಟಿನಲ್ಲಿ ಬಿಜೆಪಿ-ಕಾಂಗ್ರೆಸ್‍ನಲ್ಲಿ ಅಭ್ಯರ್ಥಿ ಗೊಂದಲ ಇದ್ರೆ. ದಳ ಮಾತ್ರ ಆಗಲೇ ಗೆಲುವಿನ ವಿಶ್ವಾಸದಲ್ಲಿ ಹೆಜ್ಜೆ ಹಾಕುತ್ತಿದೆ.

Facebook Comments

Sri Raghav

Admin