ಮಕ್ಕಳ ಏಳಿಗೆಗೆ ಇಲ್ಲಿವೆ ಸರಳ ಸೂತ್ರಗಳು

ಈ ಸುದ್ದಿಯನ್ನು ಶೇರ್ ಮಾಡಿ

child

ಮಕ್ಕಳು ಚೆನ್ನಾಗಿ ಓದಿ ಬುದ್ಧಿವಂತರಾಗಬೇಕು ಎಂಬುದು ಎಲ್ಲಾ ಪೋಷಕರ ಒತ್ತಾಸೆ. ಅದಕ್ಕಾಗಿ ತಮ್ಮ ಜೀವನದ ಬಹುಪಾಲು ದುಡಿಮೆಯ ಹಣ, ಸಮಯ ಕಳೆದುಬಿಡುತ್ತಾರೆ. ಆದರೆ ಅವರ ಏಳಿಗೆಗೆ ಉತ್ತಮ ಶಾಲೆ, ಒಳ್ಳೆಯ ವಾತಾವರಣ, ಹಣ, ಉತ್ತಮ ಸೌಲಭ್ಯ ಕಲ್ಪಿಸುವ ಜತೆಗೆ ಮತ್ತೊಂದಿಷ್ಟು ಜಾಗ್ರತೆ ವಹಿಸುವ ಅಗತ್ಯವಿದೆ. ಹಾಗಾಗಿ ಅದಕ್ಕಾಗಿ ಇಂದಿನ ಪೋಷಕರು ವೈಜ್ಞಾನಿಕವಾಗಿಯೂ ಸಾಬೀತಾದ ಕೆಲವು ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಅಂತಹ ವಿಧಾನಗಳಿಂದ ಮಕ್ಕಳಲ್ಲಿನ ಋಣಾತ್ಮಕ ಅಂಶ ದೂರವಾಗಿ ಧನಾತ್ಮಕ ( Positive)ಅಂಶ ನೆಲೆಗೊಂಡು ಓದಿನ ಕಡೆಗೆ ಗಮನ ಹರಿಸಲು ಸಾಧ್ಯವಾಗುತ್ತದೆ ಎನ್ನಲಾಗಿದೆ.

child-2

ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಪ್ರೇರೇಪಿತರಾಗಲು ಈ ವಿಧಾನಗಳಿಂದ ಸಾಧ್ಯವಾಗಲಿದೆ ಅಲ್ಲದೆ, ಅವರ ಸಹಜ ಪ್ರತಿಭೆ ಹೊರಹೊಮ್ಮಲು ಸಹಕಾರಿಯಾಗುತ್ತದೆ ಎನ್ನುತ್ತಾರೆ ತಜ್ಞರು. ಕೆಲವು ವಸ್ತುವಿನ ಅಂಶವೂ ಇದರಲ್ಲಿ ಒಳಗೊಂಡಿರುತ್ತದೆ. ವಾಸ್ತು ಆಧಾರದ ಈ ಸರಳ ಸೂತ್ರಗಳು ಮಕ್ಕಳ ಓದಿಗೆ ಇಂಬು ನೀಡುತ್ತವೆ. ವಾಸ್ತುವಿನ ಸರಳ ಸೂತ್ರಗಳು ಮಗುವಿನ ಓದಿನ ಬಗ್ಗೆಯೂ ಕೂಡ ಪ್ರಮುಖ ಪಾತ್ರ ವಹಿಸಿದೆ. ಸಣ್ಣಪುಟ್ಟ ವಾಸ್ತುಶಾಸ್ತ್ರದ ವಿಧಾನಗಳನ್ನು ಅನುಸರಿಸುವ ಮೂಲಕ ನಿಮ್ಮ ಮಕ್ಕಳ ಪರೀಕ್ಷಾ ಒತ್ತಡವನ್ನು ತಗ್ಗಿಸಬಹುದು. ಪರೀಕ್ಷೆ ಸಮೀಪಿಸುತ್ತಲೇ ಹೆಚ್ಚು ಅಂಕ ಪಡೆಯಲೋಸುಗ ಸದಾಕಾಲ ಪುಸ್ತಕ ಹಿಡಿದು ಓದುವಂತೆ ಮಕ್ಕಳನ್ನು ಹಿಂಸಿಸುವುದು ಅವರ ಮನಸ್ಸಿನ ಮೇಲೆ ಅಡ್ಡಪರಿಣಾಮ ಬೀರಬಹುದು. ನಿಮ್ಮ ಮನೆಯಲ್ಲಿ ಓದುವ ಮಕ್ಕಳಿದ್ದರೆ ಇಲ್ಲಿ ಕೊಟ್ಟಿರುವ ಕೆಲವು ಸರಳ ಸೂತ್ರಗಳನ್ನು ಗಮನಿಸಿ.

child-3

ನಿಮ್ಮ ಮಗುವು-

– ಎಂದಿಗೂ ಪಶ್ಚಿಮ ಮತ್ತು ಉತ್ತರಕ್ಕೆ ತಲೆ ಹಾಕಿ ಮಲಗಬಾರದು.
– ನಿಮ್ಮ ಮಗುವು ಹುಡುಗನಾಗಿದ್ದರೆ, ಮನೆಯ ಅಥವಾ ಕೊಠಡಿಯ ವಾಯುವ್ಯ ಭಾಗದಲ್ಲಿ ಮಲಗಿ ನಿದ್ರಿಸದಂತೆ ಎಚ್ಚರ ವಹಿಸಿ.
– ಹುಡುಗಿಯಾಗಿದ್ದಲ್ಲಿ ಮನೆಯ ಅಥವಾ ಕೊಠಡಿಯ ನೈರುತ್ಯ ಭಾಗದಲ್ಲಿ ನಿದ್ರಿಸದಿರಲಿ.
– ಮಲಗುವ ಕೋಣೆಯಲ್ಲಿ ಕನ್ನಡಿಗಳು ಬೇಡ.
– ಮಕ್ಕಳು ಅಭ್ಯಾಸಕ್ಕೆ ಬಳಸುವ ಜಾಗದ ದಕ್ಷಿಣ ಮತ್ತು ಪಶ್ಚಿಮ ಗೋಡೆಗಳಲ್ಲಿ ಕನ್ನಡಿಗಳನ್ನು ಅಳವಡಿಸಬೇಡಿ.
– ಅಭ್ಯಾಸ, ಓದಿನ ವೇಳೆಗೆ ಪೂರ್ವ ಅಥವಾ ಉತ್ತರದತ್ತ ಮುಖಮಾಡಲಿ.
– ಸುತ್ತಮುತ್ತ ಪುಸ್ತಕ ಹಾಳೆಗಳನ್ನು ಹರಡದೆ ಅಭ್ಯಾಸದ ಮೇಜನ್ನು ಶುದ್ಧವಾಗಿಸಿ.
– ಮನೆಯ ಅಥವಾ ಕೊಠಡಿಯ ಈಶಾನ್ಯ ಭಾಗದಲ್ಲಿ ಮಕ್ಕಳಿಗೆ ಓದುವ ಜಾಗವನ್ನು ಅನುವು ಮಾಡಿ ಕೊಡಿ.
– ಮಕ್ಕಳು ಹೆಚ್ಚಿನ ಒತ್ತಡದಲ್ಲಿದ್ದರೆ, ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಲು ಹೇಳಿ.
– ಕುಟುಂಬದ ಸದಸ್ಯರು ಒಟ್ಟಾಗಿ ಕಲಿಯುವ ಲೀವಿಂಗ್ ರೂಮಿನ ಈಶಾನ್ಯ ದಿಕ್ಕಿಗೆ ಮೀನುಗಳ ಅಕ್ವೇರಿಯಂ, ನೀರಿನ ಕಾರಂಜಿ ಅಥವಾ ಅರ್ಧ ಡಜನ್ ಬಿದಿರಿನ ಸಸಿಗಳನ್ನಿಡಿ. ಆದರೆ ಎಂದಿಗೂ ಇವುಗಳನ್ನು ಮೂಲೆಯಲ್ಲಿ ಇಡಬೇಡಿ.
– ಮಕ್ಕಳು ಮಲಗುವ ಮತ್ತು ಅಭ್ಯಾಸ ನಡೆಸುವ ಸ್ಥಳಗಳಲ್ಲಿ ಹಸಿರು ಮತ್ತು ಹಳದಿ ಬಣ್ಣಗಳು ಯಥೇಚ್ಛವಾಗಿರಲಿ. ಹೊದಿಕೆ, ಅಭ್ಯಾಸ ಮೇಜಿನ ಹಾಸು ವಸ್ತ್ರ, ಕಿಟಿಕಿ ಬಾಗಿಲಿನ ಪರದೆಗಳು, ಮನೆಯೊಳಗಿಡುವ ಗಿಡಗಳು, ದಿಂಬಿನ ಕವರ್ ಇತ್ಯಾದಿಗಳನ್ನು ಈ ಬಣ್ಣದಲ್ಲೇ ಆರಿಸಿ.
– ಊಟ ಮಾಡುವ ವೇಳೆ, ಹುಡುಗಿಯಾಗಿದ್ದಲ್ಲಿ, ಪೂರ್ವಕ್ಕೂ, ಹುಡುಗನಾಗಿದ್ದರೆ ಉತ್ತರಕ್ಕೂ ಮುಖ ಮಾಡಿರಲಿ.
– ಕಲಿಕಾ ನಿರತವಾಗಿರುವ ಮಕ್ಕಳು ಬಳಸುವ ಜಾಗ ಮತ್ತು ಮಲಗುವ ಜಾಗವನ್ನು ಇತರರು ಬಳಸದಂತೆ ಜಾಗೃತೆ ವಹಿಸಿ.
– ಬೆಳಿಗ್ಗೆ ಎದ್ದೊಡನೆ ಬರಿಯ ಹೊಟ್ಟೆಗೆ ಕೆಲವು ತುಳಸಿ ಎಲೆಗಳನ್ನು ತಿನ್ನುವ ಅಭ್ಯಾಸ ಮಾಡಿಸಿ.
– ಎಂದಿಗೂ ಕಿವಿಗಡಚಿಕ್ಕುವ ಸಂಗೀತವನ್ನು ಕೇಳಿಸಲೇ ಬೇಡಿ. ಇದು ಅವರ ಮನಸ್ಸಿನ ಕೇಂದ್ರೀಕರಣಕ್ಕೆ ಧಕ್ಕೆ ತರಬಹುದು ಮತ್ತು ಒತ್ತಡವುಂಟುಮಾಡಬಹುದು.
– ಅತ್ಯಂತ ಕನಿಷ್ಠ ಧ್ವನಿಯಲ್ಲಿ ಮೃದುವಾಗ ಲಘು ಸಂಗೀತವನ್ನು ರಾತ್ರಿಯ ವೇಳೆ ಅವರ ಮಲಗುವ ಕೋಣೆಯಲ್ಲಿ ಕೇಳಿಸಿ. ಇದು ಗಾಯತ್ರಿ ಮಂತ್ರವೂ ಆಗಿರಬಹುದು.
– ಸೇರಿದ ಗೋಡೆಗಳ ಕೋನಕ್ಕೆ ಬಾಗಿಲಿರುವ ಕೋಣೆಯಲ್ಲಿ ಮಕ್ಕಳು ಮಲಗುವುದು ಮತ್ತು ಅಧ್ಯಯನ ನಡೆಸುವುದು ಬೇಡ.
– ಇವಿಷ್ಟು ಅಂಶಗಳನ್ನು ಗಮನಿಸುವುದರೊಂದಿಗೆ ಮಕ್ಕಳಲ್ಲಿ ಧನಾತ್ಮಕ ಮನೋಭಾವ ತುಂಬಿ. ಅವರ ಬಗ್ಗೆ ಋಣಾತ್ಮಕ ಮಾತನಾಡದಿರಿ. ನೀವು ಮಕ್ಕಳನ್ನು ಪ್ರೀತಿಸುತ್ತೀರೆಂಬ ಭದ್ರತಾ ಭಾವನೆ ಅವರಲ್ಲಿ ಮೂಡುವಂತೆ ಮಾಡಿ.
– ಮಧ್ಯೆ ಮಧ್ಯೆ ಅವರಿಗೆ ವಿಶ್ರಾಂತಿ ಪಡೆಯಲು ಅನುಕೂಲ ಮಾಡಿ. ಆಟವಾಡಲು ಅಥವಾ ಅವರ ಇಷ್ಟದ ಕೆಲಸದಲ್ಲಿ ತೊಡಗಲು ಇಲ್ಲವೇ ಯಾವುದಾದರೂ ಹೊಟೇಲಿಗೆ ಕರೆದೊಯ್ಯಿರಿ.
– ಮಕ್ಕಳ ಮನಸ್ಸನ್ನು ಬೇರೆಡೆಗೆ ಸೆಳೆಯುವಂತಹ ಯಾವುದೇ ವಸ್ತುವನ್ನು ಅವರ ಅಭ್ಯಾಸ ಜಾಗದಲ್ಲಿ ಇರಿಸಬೇಡಿ.
– ಮಕ್ಕಳು ವ್ಯಾಯಾಮ ಧ್ಯಾನ ಮಾಡಲು ಪ್ರೇರೇಪಿಸಿ. ಆದರೆ ಯಾವುದೇ ವಿಚಾರದಲ್ಲೂ ಅವರನ್ನು ಒತ್ತಾಯಿಸುವುದು ಬೇಡವೇ ಬೇಡ.

ಸರಿ, ಇದೀಗ ನಿಮಗೂ, ನಿಮ್ಮ ಮಗುವಿಗೂ ಶುಭಹಾರೈಕೆಗಳು. ಈ ಸೂತ್ರಗಳ ಸಹಾಯದಿಂದ ನಿಮ್ಮ ಮಗುವು ಒತ್ತಡರಹಿತವಾಗಿ ಪರೀಕ್ಷೆ ಬರೆಯುವಂತಾಗಲಿ.

Facebook Comments

Sri Raghav

Admin