ಮ್ಯಾನ್‍ಹೋಲ್ ದುರಂತಗಳಿಗೆ ಕಡಿವಾಣ ಹಾಕದಿದ್ದರೆ ಗಂಭೀರ ಪರಿಣಾಮ ಎದುರಿಸಲಿದ್ದೀರಿ ಹುಷಾರ್..!

ಈ ಸುದ್ದಿಯನ್ನು ಶೇರ್ ಮಾಡಿ

Manohar-01

ಬೆಂಗಳೂರು,ಫೆ.21-ನಗರದಲ್ಲಿ ಹೆಚ್ಚುತ್ತಿರುವ ಮ್ಯಾನ್‍ಹೋಲ್ ದುರಂತ ಪ್ರಕರಣಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸಫಾಯಿ ಕರ್ಮಚಾರಿ ಆಯೋಗದ ರಾಷ್ಟ್ರೀಯ ಅಧ್ಯಕ್ಷ ಮನೋಹರ್ ವಾಲ್ಜಿಭಾಯಿ ವಾಲಾ ಅವರು, ಇಂತಹ ಸಾವು ಪ್ರಕರಣ ಹೆಚ್ಚಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಿಬಿಎಂಪಿಗೆ ಎಚ್ಚರಿಕೆ ನೀಡಿದ್ದಾರೆ. ನಗರ ವ್ಯಾಪ್ತಿಯಲ್ಲಿರುವ ಪೌರಕಾರ್ಮಿಕರ ಮತ್ತು ಕರ್ಮಚಾರಿಗಳ ಮೂಲಭೂತ ಸೌಕರ್ಯ ಕುರಿತಂತೆ ಬಿಬಿಎಂಪಿಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಅಧಿಕಾರಿಗಳಿಗೆ ಈ ಎಚ್ಚರಿಕೆ ನೀಡಿದರು.

ಮ್ಯಾನ್‍ಹೋಲ್‍ಗಳಿಗೆ ಪೌರಕಾರ್ಮಿಕರನ್ನು ಇಳಿಸಬಾರದು ಎಂಬ ಕಾನೂನು ಇದೆ. ಆದರೆ ನಗರದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಮ್ಯಾನ್‍ಹೋಲ್ ದುರಂತ ಪ್ರಕರಣಗಳು ಹೆಚ್ಚಾಗಿವೆ. ನೀವೇನು ಮಾಡುತ್ತೀದ್ದೀರ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈವರೆಗೆಎಷ್ಟು ದುರಂತಗಳಾಗಿವೆ. ಅವರ ಕುಟುಂಬಕ್ಕೆ ಏನು ಪರಿಹಾರ ನೀಡಿದ್ದೀರ, ಅನಾಹುತ ತಡೆಯಲು ಏನು ಕ್ರಮ ಕೈಗೊಂಡಿದ್ದೀರ ಮಾಹಿತಿ ನೀಡಿ ಎಂದು ಸೂಚಿಸಿದರು.

ಸಭೆಯಲ್ಲಿ ಕೆಲ ಸಾಮಾಜಿಕ ಕಾರ್ಯಕರ್ತರು, ಮುಖಂಡರು ಮಾತನಾಡಿ, ಅನಾಹುತ ಆಗಲು ಕಟ್ಟಡಗಳ ಮಾಲೀಕರು ಕಾರಣ. ಆದರೆ ಮಾಲೀಕರ ವಿರುದ್ದ ಎಫ್‍ಐಆರ್ ದಾಖಲಿಸುತ್ತಿಲ್ಲ ಎಂದು ದೂರಿದರು. ಎಲ್ಲೆ ಅನಾಹುತವಾದರೂ ಕೂಡಲೇ ಪೊಲೀಸರು ಕಟ್ಟಡಗಳ ಮಾಲೀಕರ ವಿರುದ್ಧ ಎಫ್‍ಐಆರ್ ದಾಖಲಿಸಬೇಕು. ಇಲ್ಲದಿದ್ದಲ್ಲಿ ಆಯಾ ವಿಭಾಗದ ಡಿಸಿಪಿಗಳ ವಿರುದ್ದ ಆಯೋಗವೇ ಎಫ್‍ಐಆರ್ ದಾಖಲಿಸುತ್ತದೆ ಎಂದು ಎಚ್ಚರಿಕೆ ನೀಡಿದರು.
ನಗರದಲ್ಲಿರುವ ಪೌರಕಾರ್ಮಿಕರಿಗೆ ಬಿಬಿಎಂಪಿಯಿಂದಲೇ ನೇರವಾಗಿ ವೇತನ ಪಾವತಿಸುವಂತೆ ಸರ್ಕಾರ ಸೂಚಿಸಿದೆ. ನಿರ್ಧಿಷ್ಟ ಪೌರಕಾರ್ಮಿಕರನ್ನು ಗುರುತಿಸಿದ್ದೀರಾ, ವೇತನ ನೀಡುತ್ತಿದ್ದೀರಾ ಎಂದು ಅಧ್ಯಕ್ಷರು ಪ್ರಶ್ನಿಸಿದರು.

ಈ ವೇಳೆ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಐದು ವಲಯಗಳ ಪೌರಕಾರ್ಮಿಕರ ಬಯೋಮೆಟ್ರಿಕ್ ಸಿದ್ದವಾಗಿದೆ. ಇನ್ನು ಮೂರು ವಲಯಗಳ ಮಾಹಿತಿ ಎರಡುಮೂರು ದಿನಗಳಲ್ಲಿ ಸಿಗುತ್ತದೆ. ಮುಂದಿನ ತಿಂಗಳಿನಿಂದಲೇ ಪೌರಕಾರ್ಮಿಕರ ವೇತನವನ್ನು ಅವರವರ ಖಾತೆಗೆ ಹಾಕುವುದಾಗಿ ತಿಳಿಸಿದರು.
ಆಯೋಗದ ಸದಸ್ಯ ಜಗದೀಶ್ ಹಿರೆಮಣಿ ಮಾತನಾಡಿ, ಬೆಂಗಳೂರಿನಲ್ಲಿರುವ ಸುಲಭ ಶೌಚಾಲಯಗಳ ಉಸ್ತುವಾರಿಯನ್ನು ಬಿಹಾರಿಗಳು, ಉತ್ತರಪ್ರದೇಶದವರು ನೋಡಿಕೊಳ್ಳುತ್ತಾರೆ. ಆದರೆ ಇವುಗಳನ್ನು ಶುಚಿಗೊಳಿಸುವುದು ಸ್ಥಳೀಯ ಪೌರಕಾರ್ಮಿಕರು. ಉತ್ತರ ಭಾರತದವರಿಗೆ ಏಕೆ ಮಣೆ ಹಾಕುತ್ತೀರಾ ಇನ್ನು ಮುಂದೆ ಸ್ಥಳೀಯ ಪೌರಕಾರ್ಮಿಕರಿಗೆ ಆದ್ಯತೆ ನೀಡಿ ಎಂದು ಸೂಚಿಸಿದರು.

ಪೌರಕಾರ್ಮಿಕರಿಗೆ ಕಾಟ್ರರ್ಸ್ ನೀಡದಿರುವುದು, ಅಗತ್ಯ ಸೌಲಭ್ಯ ಕಲ್ಪಿಸದಿರುವ ಬಗ್ಗೆ ಕೆಲ ಕರ್ಮಚಾರಿಗಳು ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಮುಂದೆ ಸಫಾಯಿ ಕರ್ಮಚಾರಿಗಳಿಗೆ ಸಿಗಬೇಕಾದ ಸವಲತ್ತುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳ್ಳುವಂತೆ ಅಧ್ಯಕ್ಷ ಮನೋಹರ್ ವಾಲ್ಜಿಭಾಯಿ ವಾಲಾ ಸೂಚಿಸಿದರು.
ಸಭೆಯಲ್ಲಿ ಮೇಯರ್ ಸಂಪತ್ ರಾಜ್, ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಪ್ರತಿಪಕ್ಷದ ನಾಯಕಿ ನೇತ್ರ ನಾರಾಯಣ್ ಸೇರಿದಂತೆ ಅಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.

Facebook Comments

Sri Raghav

Admin