‘ವಿಜಯನಗರ’ದ ವೀರಪುತ್ರನಾಗೋದು ಯಾರು..? ನನಸಾಗುವುದೇ ಎಂ.ಕೃಷ್ಣಪ್ಪರ ಹ್ಯಾಟ್ರಿಕ್ ಕನಸು..?

ಈ ಸುದ್ದಿಯನ್ನು ಶೇರ್ ಮಾಡಿ

vijaya-nagara

ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರದಲ್ಲಿ ವಿಜಯನಗರ ಎಲ್ಲರ ಹುಬ್ಬೇರುವಂತೆ ಮಾಡಿರುವ ಮತ್ತು ಕುತೂಹಲ ಕೆರಳಿಸಿರುವ ಮತ ಕ್ಷೇತ್ರ. ಕಾಂಗ್ರೆಸ್‍ನ ಭದ್ರಕೋಟೆಯಾಗಿ ಸತತ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ ಅಭ್ಯರ್ಥಿಗಳೇ ಇಲ್ಲಿ ಜಯಗಳಿಸಿರುವುದು ಇತಿಹಾಸ. ಅದರಂತೆ 2008ರ ಕ್ಷೇತ್ರ ಪುನರ್‍ವಿಂಗಡಣೆಯಿಂದ ಬಿನ್ನಿಪೇಟೆ ಹೆಸರು ಮಾಯವಾಗಿ ವಿಜಯನಗರ ವಿಧಾನಸಭಾ ಕ್ಷೇತ್ರವಾಗಿ ಮಾರ್ಪಟ್ಟ ನಂತರ ಕಾಂಗ್ರೆಸ್‍ನ ಬಳಿಯಲ್ಲೇ ಇದೆ.

ನೇರ ಹಣಾಹಣಿ ನಿರೀಕ್ಷಿತ ಕ್ಷೇತ್ರದಲ್ಲಿ ಈ ಬಾರಿ ಹಲವು ವಿದ್ಯಮಾನಗಳು ಕುತೂಹಲಕ್ಕೆ ಕಾರಣವಾಗಿದೆ. ಈ ಕ್ಷೇತ್ರವನ್ನು ಪ್ರತಿನಿಧಿಸುವ ಅಭ್ಯರ್ಥಿಗೆ ಸಚಿವ ಸ್ಥಾನ ಗ್ಯಾರಂಟಿ ಎಂಬ ನಂಬಿಕೆ ಕೂಡ ಇಲ್ಲಿನ ಮತದಾರರಲ್ಲಿದೆ. ಕಳೆದ 30 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿ ತಮ್ಮನ್ನು ತೊಡಗಿ 2000ನೆ ಸಾಲಿನಲ್ಲಿ ಪ್ರಥಮ ಬಾರಿಗೆ ವಿಧಾನಮಂಡಲ ಅಂಗಳ ಪ್ರವೇಶಿಸಿದ ಎಂ.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯರಾಗಿ 2006ರವರೆಗೂ ಕಾರ್ಯ ನಿರ್ವಹಿಸಿದರು. 2004ರಲ್ಲಿ ನಡೆದ ಲೋಕಸಭಾ ಚುನಾವಣೆ ವೇಳೆ ಕೊನೆ ಕ್ಷಣದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಎಂ.ಕೃಷ್ಣಪ್ಪ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿ ಕೇಂದ್ರ ಸಚಿವರಾದ ಅನಂತ್‍ಕುಮಾರ್ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದರು.ಚುನಾವಣೆಯಲ್ಲಿ ಪರಾಭವ ಗೊಂಡರೂ ಅವರ ಪ್ರಾಬಲ್ಯ ಎಲ್ಲರನ್ನು ಚಕಿತಗೊಳಿಸತ್ತಲ್ಲದೆ, 2008ರಲ್ಲಿ ವಿಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ್ದು, ದಾಖಲೆ ಮತಗಳ ಅಂತರದಿಂದ ವಿಧಾನಸಭೆ ಪ್ರವೇಶಿಸಿದ್ದರು.
ಈ ಭಾಗದಲ್ಲಿ ವಿ.ಸೋಮಣ್ಣ ಕೂಡ ಭಾರೀ ಪ್ರಭಾವಿತ ನಾಯಕರಾಗಿದ್ದು, ಇವರೂ ಕೂಡ ಸುಮಾರು 40 ವರ್ಷಗಳ ಸಕ್ರಿಯ ರಾಜಕಾರಣದಲ್ಲಿ ಹಲವಾರು ಏಳುಬೀಳುಗಳನ್ನು ಕಂಡಿದ್ದಾರೆ.ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ವಿ.ಸೋಮಣ್ಣ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡರು. ನಂತರ ಅವರ ಪ್ರಾಬಲ್ಯ ಕುಸಿಯಲಾರಂಭಿಸಿತು. ಆದರೂ ಮೇಲ್ಮನೆ ಸದಸ್ಯರಾಗಿ ಸಚಿವರೂ ಆಗಿದ್ದ ಸೋಮಣ್ಣ 2013ರ ನಡೆದ ಚುನಾವಣೆ ಯಲ್ಲಿ ವಿಜಯನಗರ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಿದ್ದ ಸೋಮಣ್ಣ ಪುನಃ ಎಂ.ಕೃಷ್ಣಪ್ಪ ವಿರುದ್ಧ ಸೋಲು ಕಂಡಿದ್ದರು.

ಪ್ರಸ್ತುತ ವಿಜಯನಗರ ಪ್ರತಿಷ್ಠಿತ ಬಡಾವಣೆ ಯಾಗಿದ್ದು, ಮೂಲಸೌಕರ್ಯದ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ ಮತ್ತು ಇಲ್ಲಿ ಕುಡಿಯುವ ನೀರು ಹಾಗೂ ಸಂಚಾರ ದಟ್ಟಣೆ ಹೊರತುಪಡಿಸಿದರೆ ಬೇರೆ ಯಾವುದೇ ರೀತಿಯ ಸಮಸ್ಯೆ ಕ್ಷೇತ್ರದಲ್ಲಿ ಕಾಣುವುದಿಲ್ಲ. ಹಸಿರು ಉದ್ಯಾನವನಗಳು, ಸುಂದರವಾದ ರಸ್ತೆಗಳು, ಕೆಲ ಕೊಳಗೇರಿ ಪ್ರದೇಶಗಳಲ್ಲೂ ಕೂಡ ಉತ್ತಮ ಸೌಲಭ್ಯಗಳ ಜೊತೆಗೆ ಈಗ ಆರಂಭಗೊಂಡಿರುವ ಇಂದಿರಾ ಕ್ಯಾಂಟೀನ್, ಶುದ್ಧ ಕುಡಿಯುವ ನೀರು ಘಟಕಗಳು ಸಾಕಷ್ಟು ಪ್ರಯೋಜನಕಾರಿಯಾಗಿದೆ.ಇವೆಲ್ಲದರ ನಡುವೆ ಈಗ ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡಲು ಬಿಜೆಪಿ ತನ್ನದೇ ಆದ ತಂತ್ರಗಾರಿಕೆ ನಡೆಸಿದ್ದು, ಒಕ್ಕಲಿಗ ಸಮುದಾಯದ ಎಚ್. ರವೀಂದ್ರ , ಇಲ್ಲವೇ ಕುರುಬ ಸಮುದಾಯದಿಂದ ಎರಡು ಬಾರಿ ಪಾಲಿಕೆ ಸದಸ್ಯರಾಗಿರುವ ಡಾ.ರಾಜು ಅವರನ್ನು ಕಣಕ್ಕಿಳಿ ಸುವ ಕುರಿತಂತೆ ಚಿಂತನೆ ನಡೆದಿದೆ.ಇದರ ನಡುವೆ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಬಿಜೆಪಿ ಹಿರಿಯ ಮುಖಂಡ ಅಶ್ವತ ್ಥನಾರಾಯಣ, ಮಾಜಿ ಉಪಮೇಯರ್ ಲಕ್ಷ್ಮಿ ನಾರಾಯಣ ಕೂಡ ಟಿಕೆಟ್ ಆಕಾಂಕ್ಷಿಗಳಾಗಿದ್ದು, ತಮ್ಮ ವರ್ಚಸ್ಸಿನಿಂದಲೇ ಬಿಜೆಪಿ ಹೈಕಮಾಂಡ್‍ವರೆಗೂ ಲಾಬಿ ನಡೆಸಿದ್ದಾರೆ. ಎಂ.ಕೃಷ್ಣಪ್ಪಗೆ ಪ್ರಬಲ ಪೈಪೋಟಿ ನೀಡಲು ಈಗಾಗಲೇ ಎಲ್ಲಾ ಸಮುದಾಯಗಳ ಸಭೆಗಳನ್ನು ನಡೆಸಿರುವ ಬಿಜೆಪಿ ದೊಡ್ಡ ಯೋಜನೆಯೊಂದನ್ನು ರೂಪಿಸಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತಿದೆ.

ಪ್ರಮುಖವಾಗಿ ಈ ಬಾರಿ ಜೆಡಿಎಸ್ ಕೂಡ ತನ್ನ ಪ್ರಾಬಲ್ಯವನ್ನು ಪ್ರದರ್ಶಿಸಲಿದ್ದು, ಕಳೆದ ಎರಡು ವಿಧಾನಸಭಾ ಕ್ಷೇತ್ರಗಳಲ್ಲೂ ನಿರೀಕ್ಷಿತ ಪೈಪೋಟಿ ನೀಡದ ಜೆಡಿಎಸ್ ಈ ಬಾರಿ ಅಭ್ಯರ್ಥಿ ಯಾರೆಂಬುದನ್ನು ಇನ್ನೂ ಆಯ್ಕೆ ಮಾಡಿಲ್ಲ. ಕಳೆದ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಬಿ.ಎಸ್.ಕನ್ಯಾಕುಮಾರಿ ಜೆಡಿಎಸ್‍ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್‍ನಿಂದ ಹೆಚ್ಚಿನ ಆಕಾಂಕ್ಷಿಗಳು ಸದ್ಯಕ್ಕೆ ಕಂಡುಬರುತ್ತಿಲ್ಲವಾದರೂ ಕೊನೆ ಕ್ಷಣದವರೆಗೂ ಕಾಯುವ ತಂತ್ರ ಅನುಸರಿಸಿದೆ. ಮಹತ್ವದ ಬೆಳವಣಿಗೆಯಲ್ಲಿ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎಚ್.ರವೀಂದ್ರ ಅವರನ್ನು ಸೆಳೆಯಲು ಪ್ರಯತ್ನ ನಡೆಯುತ್ತಿದ್ದು, ಇದು ಸಫಲವಾದರೆ ಮೂರೂ ಪಕ್ಷಗಳ ತ್ರಿಕೋಣ ಪೈಪೋಟಿ ನಡೆಯುವುದು ನಿಶ್ಚಿತವಾಗಿದೆ. ಆದರೆ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲವೊಂದು ವದಂತಿಗಳು ಹರಿದಾಡುತ್ತಿದ್ದು, ಕೆಲವೇ ದಿನಗಳಲ್ಲಿ ಎಲ್ಲದಕ್ಕೂ ತೆರೆ ಬಿದ್ದು ಘಟಾನುಘಟಿಗಳು ಗೆಲುವಿಗಾಗಿ ತಮ್ಮ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ. ಕ್ಷೇತ್ರದಲ್ಲಿ ಪುರುಷ 160151 ಮತ್ತು ಮಹಿಳೆ ಯರು 145099 ಇದ್ದು, ಒಟ್ಟು 305386 ಮತದಾರ ರಿದ್ದಾರೆ. ಬೃಹತ್ ಬೆಂಗಳೂರು ಮಹಾನಗರಪಾಲಿಕೆ ವಾರ್ಡ್‍ಗಳಲ್ಲಿ ಆರು ಮಂದಿ ಬಿಜೆಪಿ ಸದಸ್ಯರಿದ್ದರೆ, ಇಬ್ಬರು ಕಾಂಗ್ರೆಸ್ ಸದಸ್ಯರಿದ್ದಾರೆ.

ಜಾತಿ ಲೆಕ್ಕಾಚಾರ : ಕುರುಬ – 50,000 / ಒಕ್ಕಲಿಗರು – 60,000 / ಲಿಂಗಾಯತ – 45,000 / ಜೈನರು – 15,000 / ಎಸ್ಸಿ/ಎಸ್ಟಿ – 49,000 / ಮುಸ್ಲಿಂ – 23,000 /
ಇತರೆ – 25,000

Facebook Comments

Sri Raghav

Admin