ರಾಯಣ್ಣ ಬ್ರಿಗೇಡ್ ಮತ್ತೆ ಬಂತು ಜೀವ..! ಈಶ್ವರಪ್ಪ ಜೊತೆ ಮುರುಳೀಧರ್ ರಾವ್ ರಹಸ್ಯ ಮಾತುಕತೆ..?

ಈ ಸುದ್ದಿಯನ್ನು ಶೇರ್ ಮಾಡಿ

Eshwarappa--01

ಬೆಂಗಳೂರು,ಫೆ.22-ವರಿಷ್ಠರ ಮಧ್ಯಪ್ರವೇಶದಿಂದ ಸ್ಥಗಿತಗೊಂಡಿದ್ದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆ ಮತ್ತೆ ಗರಿಗೆದರಿದ್ದು ಇದೇ 26ರಂದು ಕರೆದಿರುವ ಸಭೆ ಭಾರೀ ಮಹತ್ವ ಪಡೆದುಕೊಂಡಿದೆ. ರಾಯಣ್ಣ ಬ್ರಿಗೇಡ್ ಬಲಿತುಕೊಂಡಷ್ಟು ಪಕ್ಷಕ್ಕೆ ಹಾನಿಯಾಗಲಿದೆ ಎಂಬುದನ್ನು ಅರಿತಿರುವ ರಾಜ್ಯ ಬಿಜೆಪಿ ನಾಯಕರು, ಪಕ್ಷದ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಅವರೊಂದಿಗೆ ತಕ್ಷಣವೇ ಮಾತುಕತೆ ನಡೆಸಬೇಕೆಂದು ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್‍ಗೆ ಸೂಚನೆ ಕೊಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ಸಂಜೆಯೊಳಗೆ ಮುರುಳೀಧರ್ ರಾವ್ ಈಶ್ವರಪ್ಪನವರೊಂದಿಗೆ ರಹಸ್ಯ ಸ್ಥಳವೊಂದರಲ್ಲಿ ಮುಖಾಮುಖಿ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲು ಮುಂದಾಗಿದ್ದಾರೆ. ರಾಯಣ್ಣ ಬ್ರಿಗೇಡ್ ಪುನಃ ಗರಿಗೆದರುತ್ತಿರುವುದು ಪಕ್ಷದ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಇಂತಹ ಚಟುವಟಿಕೆಗಳು ಚುನಾವಣಾ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂಬ ಅಳಕು ವರಿಷ್ಠರನ್ನು ಕಾಡುತ್ತಿದೆ.  ಹೀಗಾಗಿಯೇ ಕೇಂದ್ರ ನಾಯಕರು ತಕ್ಷಣವೇ ಈಶ್ವರಪ್ಪ ಜೊತೆ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸುವಂತೆ ಸಲಹೆ ಮಾಡಿದ್ದಾರೆ. ತದನಂತರ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್ ಹಾಗೂ ಸಹ ಉಸ್ತುವಾರಿ ಪಿಯೂಶ್ ಗೋಯಲ್ ಕೂಡ ಸಂಧಾನ ನಡೆಸಲಿದ್ದಾರೆ.

ಕಾರಣವೇನು:
ಕಳೆದ ವರ್ಷ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಾಜ್ಯಾದ್ಯಂತ ಭರ್ಜರಿ ಸದ್ದು ಮಾಡಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಾಯಕತ್ವಕ್ಕೆ ಸವಾಲೆಂಬಂತೆ ಈಶ್ವರಪ್ಪ ರಾಜ್ಯಾದ್ಯಂತ ರಾಯಣ್ಣ ಬ್ರಿಗೇಡ್ ಮೂಲಕ ಪರ್ಯಾಯ ವೇದಿಕೆಯನ್ನು ಹುಟ್ಟುಹಾಕಿದರು.  ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ಬಿಎಸ್‍ವೈ ತಮ್ಮ ಬೆಂಬಲಿಗರಿಗೆ ಸ್ಥಾನಮಾನ ನೀಡಿದ್ದಾರೆ ಎಂಬುದು ಅವರ ಆರೋಪವಾಗಿತ್ತು. ಇದು ಎಷ್ಟರಮಟ್ಟಿಗೆ ಪರಿಣಾಮ ಬೀರಿತ್ತು ಎಂದರೆ ಇನ್ನೇನು ಬಿಜೆಪಿ ಹೋಳಾಗಲಿದೆ ಎಂದೇ ಹೇಳಲಾಗಿತ್ತು.

ಕೊನೆಗೆ ಕೇಂದ್ರ ನಾಯಕರ ಮಧ್ಯಪ್ರವೇಶದಿಂದಾಗಿ ದೆಹಲಿ ಅಂಗಳ ತಲುಪಿತ್ತು. ರಾಯಣ್ಣ ಬ್ರಿಗೇಡ್‍ನಲ್ಲಿ ತಾವು ಗುರುತಿಸಿಕೊಳ್ಳಬಾರದೆಂದು ಕೇಂದ್ರ ನಾಯಕರು ಸೂಚಿಸಿದ್ದರು. ತದನಂತರ ಈಶ್ವರಪ್ಪ ಕೂಡ ವರಿಷ್ಠರ ಸೂಚನೆಯಂತೆ ಬ್ರಿಗೇಡ್ ಚಟುವಟಿಕೆಯಿಂದ ದೂರ ಉಳಿದರು.  ಆದರೆ ಇತ್ತೀಚೆಗೆ ಕೆಲ ದಿನಗಳ ಹಿಂದೆ ಶಿವಮೊಗ್ಗದಲ್ಲಿ ನಡೆದ ಘಟನೆಯೊಂದು ಈಶ್ವರಪ್ಪನವರ ಮನಸ್ಸನ್ನು ಕದಡುವಂತೆ ಮಾಡಿತು. ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಗೌಡ ತಮ್ಮ ಬೆಂಬಲಿಗರೊಂದಿಗೆ ನಡೆಸಿದ ಸಭೆಯಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಈಶ್ವರಪ್ಪನವರಿಗೆ ಟಿಕೆಟ್ ನೀಡಬಾರದೆಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಅದರಲ್ಲೂ ಸಭೆಯಲ್ಲಿ ಭಾಗವಹಿಸಿದ್ದ ಕೃಷ್ಣಮೂರ್ತಿ ಎಂಬುವರು ಈಶ್ವರಪ್ಪನವರಿಗೆ ಟಿಕೆಟ್ ನೀಡಿದರೆ ಠೇವಣಿಯೇ ಬರುವುದಿಲ್ಲ ಎಂದು ಹೇಳಿದ್ದರು. ಇದು ಭಾರೀ ಮುಜುಗರ ತಂದಿತ್ತು. ಈಶ್ವರಪ್ಪ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಕಣ್ಣೀರು ಕೂಡ ಹಾಕಿದ್ದರು.  ತಮ್ಮ ನಾಯಕರಿಗೆ ಅವಮಾನ ಮಾಡಲಾಗಿದೆ ಎಂದು ಈಶ್ವರಪ್ಪ ಬೆಂಬಲಿಗರು ಹಾಗೂ ರಾಯಣ್ಣ ಬ್ರಿಗೇಡ್ ಬೆಂಬಲಿಗರು ಬೇಸರಗೊಂಡಿದ್ದರು. ಈಶ್ವರಪ್ಪನವರಿಗೆ ಟಿಕೆಟ್ ತಪ್ಪಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದರು.   ಇದೀಗ ಸೋಮವಾರ ಬ್ರಿಗೇಡ್ ನಾಯಕರು ಸಭೆ ಕರೆದಿದ್ದಾರೆ. ಮುಂದೆ ನಡೆಯಲಿರುವ ಚಟುವಟಿಕೆಗಳು ಇನ್ನಷ್ಟು ಕುತೂಹಲ ಹುಟ್ಟಿಸಿದೆ.

Facebook Comments

Sri Raghav

Admin