ರಾಹುಲ್ ಗಾಂಧಿಯನ್ನು ಬಚ್ಚಾ ಎಂದ ಯಡಿಯೂರಪ್ಪಗೆ ಪರಮೇಶ್ವರ್ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

Parameshwar--01
ಬೆಂಗಳೂರು, ಫೆ.22- ರಾಹುಲ್ ಗಾಂಧಿ ಅವರು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿದ್ದಾರೆ. ಅಂತಹವರ ಬಗ್ಗೆ ಕೆಟ್ಟದ್ದಾಗಿ ಮಾತನಾಡುವುದು ಎಷ್ಟು ಸರಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್‍ಗಾಂಧಿ ಬಚ್ಚಾ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿರುವುದು ಸರಿಯಲ್ಲ. ಯಡಿಯೂರಪ್ಪ ಅವರು ಒಬ್ಬ ಹಿರಿಯ ರಾಜಕಾರಣಿ, ಅಂತಹವರೇ ರಾಹುಲ್‍ಗಾಂಧಿ ಅವರನ್ನು ಬಚ್ಚಾ ಎಂದು ಹೇಳಿರುವುದು ಎಷ್ಟು ಸರಿ. ರಾಜ್ಯದ ಜನತೆ ಇದನ್ನೆಲ್ಲಾ ಗಮನಿಸುತ್ತಿದ್ದಾರೆ. ಅವರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದರು.

ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಪ್ರಕರಣ ಗೊತ್ತಾದ ತಕ್ಷಣ ಆತನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಕಾನೂನು ಪ್ರಕಾರ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಈ ರೀತಿಯ ಪ್ರಕರಣಗಳನ್ನು ನಾವು ಸಹಿಸುವುದಿಲ್ಲ ಎಂದು ಹೇಳಿದರು. ನಲಪಾಡ್ ಪ್ರಕರಣ ಕುರಿತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣು ಗೋಪಾಲ್ ಅವರು ಮಾಹಿತಿ ಪಡೆದು ಕೊಂಡಿದ್ದಾರೆ ಎಂದರು.
ಅದೇ ರೀತಿ ನಾರಾಯಣ ಸ್ವಾಮಿಯನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಪಕ್ಷಕ್ಕೆ ಮುಜುಗರವಾಗುವ ಯಾವುದೇ ಘಟನೆಗಳನ್ನು ಸಹಿಸುವುದಿಲ್ಲ. ಎಲ್ಲದಕ್ಕೂ ಕಾಂಗ್ರೆಸ್ ಪಕ್ಷವನ್ನು ಹೊಣೆ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.

ಇದೇ ವೇಳೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಶಾಸಕ ಎಸ್.ಟಿ.ಸೋಮ ಶೇಖರ್ ಬೆಂಬಲಿಗರ ಹಲ್ಲೆ ಪ್ರಕರಣದ ಬಗ್ಗೆ ನನಗೆ ಇದುವೆಗೆ ಮಾಹಿತಿ ಬಂದಿಲ್ಲ. ಮಾಹಿತಿ ತಿಳಿದು ಪ್ರತಿಕ್ರಿಯೆ ನೀಡುತ್ತೇನೆ ಎಂದರು. ಎರಡನೇ ಹಂತದ ರಾಹುಲ್‍ಗಾಂಧಿ ಪ್ರವಾಸ:ಇದೇ 24ರಿಂದ 27ರವರೆಗೆ ರಾಜ್ಯದಲ್ಲಿ ಎರಡನೇ ಹಂತದ ರಾಹುಲ್‍ಗಾಂಧಿ ಅವರು ಜನಾಶೀರ್ವಾದ ಯಾತ್ರೆ ಕೈಗೊಳ್ಳಲಿದ್ದಾರೆ. ಮುಂಬೈ ಕರ್ನಾಟಕದಲ್ಲಿ ಅವರು ಪ್ರವಾಸ ಮಾಡಲಿದ್ದಾರೆ ಎಂದು ಇದೇ ವೇಳೆ ಪರಮೇಶ್ವರ್ ತಿಳಿಸಿದರು.ನಿಗದಿತ ಸ್ಥಳಗಳಲ್ಲಿ ಸಮಾವೇಶ, ರೋಡ್ ಶೋ, ಕಾಂಗ್ರೆಸ್ ನಾಯ ಕರ ಜತೆ ರಾಹುಲ್‍ಗಾಂಧಿ ಸಭೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಎಲ್ಲ ಹಿರಿಯ ನಾಯಕರು ಸಾಥ್ ನೀಡಲಿದ್ದಾರೆ ಎಂದು ತಿಳಿಸಿದರು.

Facebook Comments

Sri Raghav

Admin