ಆಗ್ನೇಯ ಪೊಲೀಸರ ಭರ್ಜರಿ ಬೇಟೆ : 3 ಕೆಜಿ ಚಿನ್ನ ವಶ,49 ಆರೋಪಿಗಳ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

POlice-01

ಬೆಂಗಳೂರು, ಫೆ.24- ಆಗ್ನೇಯ ವಿಭಾಗದ ಪೊಲೀಸರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 49 ಆರೋಪಿಗಳನ್ನು ಬಂಧಿಸಿ 3.37 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು, ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಬಂಧನದಿಂದ ಒಟ್ಟು 158 ಪ್ರಕರಣಗಳು ಪತ್ತೆಯಾಗಿದ್ದು, 3 ಕೆಜಿ 100 ಗ್ರಾಂ ತೂಕದ ಚಿನ್ನಾಭರಣ, ಬೆಳ್ಳಿ ವಸ್ತುಗಳು, 16 ಕಾರು, 5 ಆಟೋರಿಕ್ಷಾ, 103 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಕುಪ್ಪಂ ಗ್ಯಾಂಗ್ ಬಂಧನ:
ಬ್ಯಾಂಕ್‍ಗಳು, ಸಬ್ ರಿಜಿಸ್ಟ್ರಾರ್ ಕಚೇರಿ, ಎಟಿಎಂ ಹಾಗೂ ಹಣದ ವಹಿವಾಟು ನಡೆಯುವ ಸ್ಥಳಗಳ ಬಳಿ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಒಜಿ ಕುಪ್ಪಂ ಗ್ಯಾಂಗ್‍ನ ಇಬ್ಬರನ್ನು ಬಂಧಿಸಲಾಗಿದೆ. ಮೂಲತಃ ಆಂಧ್ರ ಪ್ರದೇಶದ ಚಿತ್ತೂರು ಗ್ರಾಮದ ಒಜಿ ಕುಪ್ಪಂ ಗ್ರಾಮದ ಶ್ರೀನಿವಾಸಲು ಮತ್ತು ಬಾಬು ಬಂಧಿತ ಆರೋಪಿಗಳು.
ಮನೆ ಕನ್ನ ಕಳವು:
ಮನೆಗಳ್ಳತನ ನಡೆಸುತ್ತಿದ್ದ ಆರೋಪಿಗಳನ್ನು ಪತ್ತೆ ಹಚ್ಚಿರುವ ಬೊಮ್ಮನಹಳ್ಳಿ ಠಾಣೆ ಪೊಲೀಸರು ಪ್ರಕಾಶ, ರಾಮು ಎಂಬುವರನ್ನು ಬಂಧಿಸಿ ಸುಮಾರು 60 ಲಕ್ಷ ರೂ. ಮೌಲ್ಯದ ವಜ್ರ, ಪ್ಲಾಟಿನಂ, ಚಿನ್ನಾಭರಣಗಳು ಹಾಗೂ ಬೆಳ್ಳಿ ಪರಿಕರಗಳನ್ನು ವಶಪಡಿಸಿಕೊಂಡು 22 ಕನ್ನ ಕಳವು ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ.
ಈತನು ಹಳೆಯ ಮನೆಕಳವು ಆರೋಪಿಯಾಗಿದ್ದು, ಕಳೆದ ಫೆಬ್ರವರಿ 2017ರಲ್ಲಿ ಜೈಲಿನಿಂದ ಹೊರಬಂದು ಪುನಃ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುತ್ತಾನೆ.
ಈತನ ಬಂಧನದಿಂದ ಹೆಚ್‍ಎಸ್‍ಆರ್ ಲೇಔಟ್, ಬೊಮ್ಮನಹಳ್ಳಿ, ತಿಲಕ್‍ನಗರ, ಎಸ್‍ಜಿ ಪಾಳ್ಯ ಮತ್ತು ಮೈಕೋ ಲೇಔಟ್ ಪೊಲೀಸ್ ಠಾಣೆಗಳ ಪ್ರಕರಣಗಳು ಪತ್ತೆಯಾಗಿವೆ.

ಇಬ್ಬರ ಬಂಧನ- 32 ಲಕ್ಷ ರೂ. ಮೌಲ್ಯದ ಆಭರಣ ವಶ:

ಕೋರಮಂಗಲ ಪೊಲೀಸರು ಪ್ರತಾಪ್ ಕುಮಾರ್, ಸೋಹನ್ ದಾಸ್ ಎಂಬುವರನ್ನು ಬಂಧಿಸಿ ಸುಮಾರು 32 ಲಕ್ಷ ರೂ. ಬೆಲೆಬಾಳುವ 1 ಕೆಜಿ 100 ಗ್ರಾಂ. ತೂಕದ ಚಿನ್ನದ ಆಭರಣಗಳು ಮತ್ತು 600 ಗ್ರಾಂ. ಬೆಳ್ಳಿ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಬಂಧನದಿಂದ ಒಟ್ಟು 12 ಪ್ರಕರಣಗಳು ಪತ್ತೆಯಾಗಿವೆ. ಮನೆ ಕಳವು ಮಾಡುತ್ತಿದ್ದ ಆರೋಪಿಯ ಬಂಧನದಿಂದ ಸುಮಾರು 3 ಲಕ್ಷ ರೂ. ಬೆಲೆ ಬಾಳುವ 60 ಗ್ರಾಂ. ತೂಕದ ಚಿನ್ನ-ವಜ್ರದ ಆಭರಣಗಳು, ಎರಡು ಮೊಬೈಲ್ ಫೋನ್‍ಗಳು ಮತ್ತು 32 ಸಾವಿರ ರೂ. ವಶಪಡಿಸಿಕೊಳ್ಳಲಾಗಿದೆ.

ಎಲೆಕ್ಟ್ರಾನಿಕ್ಸ್ ಸಿಟಿ:
ಸ್ಥಳೀಯ ಪೊಲೀಸರು ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಾಗರಾಜ, ಇಮ್ರಾನ್ ಖಾನ್ ಮತ್ತು ಕಾರ್ತಿಕ್ ಕುಮಾರ್ ಎಂಬುವರನ್ನು ಬಂಧಿಸಿ 12 ಲಕ್ಷ ರೂ. ಮೌಲ್ಯದ 460 ಗ್ರಾಂ. ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ವಾಹನ ಕಳವು ಪ್ರಕರಣ:
ನಗರದಲ್ಲಿ ನಡೆದಿದ್ದ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಹುಳಿಮಾವು ಪೊಲೀಸರು ಕುಖ್ಯಾತ ಅಂತರರಾಜ್ಯ ಕಾರುಗಳ್ಳರಾದ ತಮಿಳುನಾಡು ಮೂಲದ ಸದ್ದಾಮ್ ಹುಸೇನ್ (25), ಶರವಣ (22) ಮಣಿಕಂಠನ್, ಅರ್ಜುನ್ , ಸಲ್ಮಾನ್, ಅಂಜನ್ ಎಂಬುವರನ್ನು ಬಂಧಿಸಿ 95 ಲಕ್ಷ ರೂ. ಬೆಲೆ ಬಾಳುವ 15 ಐಶಾರಾಮಿ ಕಾರುಗಳು ಮತ್ತು 18 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇವರ ಬಂಧನದಿಂದ ಒಟ್ಟು 33 ಪ್ರಕರಣಗಳು ಪತ್ತೆಯಾಗಿರುತ್ತವೆ.

ಪರಪ್ಪನ ಅಗ್ರಹಾರ:
ವಾಹನ ಕಳ್ಳತನ ನಡೆಸುತ್ತಿದ್ದ ಆರೋಪಿ ಕಾರ್ತಿಕ್ ಎಂಬಾತನನ್ನು ಬಂಧಿಸಿ 15 ಲಕ್ಷ ರೂ.ಮೌಲ್ಯದ 28 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬೇಗೂರು ಪೊಲೀಸ್ ಠಾಣೆ:
ಆರೋಪಿ ಪವನ್‍ಕುಮಾರ್ ಮತ್ತು ಹರೀಶ್ ಎಂಬುವವರನ್ನು ಬಂಧಿಸಿರುವ ಪೊಲೀಸರು ಸುಮಾರು 6.50 ಲಕ್ಷ ರೂ. ಮೌಲ್ಯದ 5 ಆಟೋ ರಿಕ್ಷಾಗಳು, 15 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಮಡಿವಾಳ ಪೊಲೀಸ್ ಠಾಣೆ:
ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಕಾರ್ತಿಕ್ ಮತ್ತು ಮಣಿಕಂಠ, ಲೋಕೇಶ ಎಂಬುವರನ್ನು ಬಂಧಿಸಿ 1.90 ಲಕ್ಷ ರೂ. ಬೆಲೆಬಾಳುವ ಒಟ್ಟು 6 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಕೋರಮಂಗಲ:  ಆರೋಪಿ ಶ್ರೀನಿವಾಸ್ ಎಂಬಾತನನ್ನು ಬಂಧಿಸಿ 2 ಲಕ್ಷ ರೂ. ಬೆಲೆ ಬಾಳುವ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಹೆಚ್‍ಎಸ್‍ಆರ್ ಲೇಔಟ್:  ಆರೋಪಿ ನಾಗೇಂದ್ರ ಎಂಬಾತನನ್ನು ಬಂಧಿಸಿ ಸುಮಾರು 2.50 ಲಕ್ಷ ರೂ. ಬೆಲೆಬಾಳುವ 6 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಆಡುಗೋಡಿ:  ಆರೋಪಿ ಮಂಜುನಾಥ್ ಎಂಬಾತನನ್ನು ಬಂಧಿಸಿ ಸುಮಾರು 2 ಲಕ್ಷ ರೂ. ಬೆಲೆ ಬಾಳುವ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಡೇಪಾಳ್ಯ: ಆರೋಪಿಗಳಾದ ಮಹಮದ್ ಇಮ್ರಾನ್, ಸೈಯದ್ ಮಕ್ಸೂದ್, ಅಭಿಶೇಕ್, ಯೋಗೇಶ್ ಎಂಬುವವರನ್ನು ಬಂಧಿಸಿ ಸುಮಾರು 5.26 ಲಕ್ಷ ರೂ. ಮೌಲ್ಯದ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

Facebook Comments

Sri Raghav

Admin