ಮಹಾವಿರಾಗಿ ಬಾಹುಬಲಿಗೆ ಭಕ್ತಿ ನಮನ..

ಈ ಸುದ್ದಿಯನ್ನು ಶೇರ್ ಮಾಡಿ

sharavanabelogala--4

ಸಂತೋಷ್ ಹಾಸನ

ಶ್ರವಣಬೆಳಗೊಳದ ವಿಂಧ್ಯಗಿರಿಯ ಮೇಲೆ ವಿರಾಜಮಾನನಾಗಿರುವ ದಿವ್ಯಪ್ರಭೆಯ ಬಾಹುಬಲಿ ಮೂರ್ತಿ ವೈರಾಗ್ಯದ ಮಹಾನ್ ಸಂಕೇತವಾಗಿರುವಂತೆಯೇ ತ್ಯಾಗ, ಅಹಿಂಸೆಯ ದ್ಯೋತಕವಾಗಿದೆ. ವಿಶ್ವದಲ್ಲೇ ದೊಡ್ಡದೆನಿಸಿದ ಏಕಶಿಲೆಯಲ್ಲಿ ಒಡಮೂಡಿದ 58 ಅಡಿ ಎತ್ತರದ ಗೊಮ್ಮಟೇಶ್ವರನ ವಿಗ್ರಹಕ್ಕೆ ತೀರ್ಥಂಕರರಿಗೂ ಮೊದಲೇ ಪ್ರಾಶಸ್ತ್ಯ ದೊರೆತಿರುವುದಕ್ಕೆ ಸಾಕ್ಷಿಯಾಗಿದೆ. ಈ ಮೂರ್ತಿಗೆ 12 ವರ್ಷಕ್ಕೊಮ್ಮೆ ಮಹಾಮಜ್ಜನ ನೆರವೇರಿಸಿ ನಮಿಸುವಾಗ ಇಡೀ ಭಕ್ತವೃಂದವೇ ಪುಳಕಗೊಳ್ಳುತ್ತದೆ.

sharavanabelogala

ಭವ ವೃತ್ತದಿಂದ ವಿಮೋಚನೆ ಪಡೆದ ಬಾಹುಬಲಿಗೆ ಮೊದಲು ಮೋಕ್ಷ ಪ್ರಾಪ್ತಿಯಾಯಿತು ಎಂಬುದು ಉಲ್ಲೇಖಾರ್ಹ. ಜೈನರ ಮೊದಲ ತೀರ್ಥಂಕರರಾದ ವೃಷಭನಾಥನಿಗೂ ಮೊದಲೆ ಬಾಹುಬಲಿ ತನ್ನ ವಿರಾಗದಿಂದ ಜಗತ್ತಿನ ಎಲ್ಲಾ ಭವ-ಬಾಂಧವ್ಯಗಳನ್ನು ಕಳಚಿಕೊಂಡು ಅಹಿಂಸೆಯಿಂದ ಸುಖ ತ್ಯಾಗದಿಂದ ಶಾಂತಿ ಎಂಬ ನೀತಿಯನ್ನು ಸಾರಿದ್ದರಿಂದ ಆತನೇ ಜೈನರ ಆರಾಧ್ಯ ದೈವವಾಗಿ ಎಲ್ಲರ ಭಕ್ತಿಗೆ -ಪೂಜೆಗೆ ಅರ್ಹನಾಗಿ ಜಗತ್ತಿಗೆ ದೊಡ್ಡ ತತ್ವದ ಪ್ರಸರಣದ ಸಾಕಾರ ಮೂರ್ತಿಯಾಗಿ ನೆಲೆಗೊಂಡಿದ್ದಾನೆ. ಬಾಹುಬಲಿಯ ತಂದೆ ವೃಷಭನಾಥ ಜೈನ ಧರ್ಮದ ಆದ್ಯ ಪ್ರವರ್ತಕ. ಆತನಿಂದ ಆರಂಭವಾಗುವ ಕಥಾನಕವನ್ನೇ ಆದಿಕವಿ ಪಂಪ ತನ್ನ ಆದಿಪುರಾಣದಲ್ಲಿ ರಮ್ಯವಾಗಿ ವರ್ಣಿಸಿದ್ದಾನೆ.

ಸಂಸಾರದ ನಶ್ವರತೆಯನ್ನು ಕ್ಷಣಾರ್ಧದಲ್ಲಿ ಕಂಡುಕೊಂಡ ವೃಷಭನಾಥನಿಗೆ ವೈರಾಗ್ಯವಾಗುವ ಸನ್ನಿವೇಶವೂ ಅದ್ಭುತ. ಅನೇಕ ಭವಗಳನ್ನು ಪೂರ್ಣಗೊಳಿಸಿ ರಾಜ ವೈಭೋಗದಲ್ಲಿದ್ದಾಗ ನೀಳಾಂಜನ ಎಂಬ ನರ್ತಕಿಯ ನೃತ್ಯ ಸವಿಯುತ್ತಾ ಇದ್ದಾಗಲೇ ಆಕೆಯ ಆಯಸ್ಸು ಮುಗಿದು ಹೋಗುವುದರಿಂದ ವೃಷಭನಾಥನಿಗೆ ರಸಭಂಗವಾಗದಿರಲೆಂದು ಇಂದ್ರ ಅರೆ ಕ್ಷಣದಲ್ಲಿ ನೀಳಾಂಜನೆಯ ನೃತ್ಯ ಮುಂದುವರೆಸಿದರೂ ಮಿಂಚಿನ ಸಂಚಲನದಂತೆ ನಡೆದ ಘಟನೆಯ ಸೂಕ್ಷ್ಮತೆ ಅರಿತ ವೃಷಭನಾಥ ತನ್ನ ಹಿರಿಯ ಮಗ ಭರತ, ಮನ್ಮಥನಂತಿದ್ದ ಬಾಹುಬಲಿ ಸೇರಿದಂತೆ 100 ಪುತ್ರರಿಗೆ ರಾಜ್ಯವನ್ನು ಹಂಚಿ ಕಾಡಿಗೆ ತೆರಳಿದ.  ಪರಾಕ್ರಮ,ಅಪ್ರತಿಮ ಸೌಂದರ್ಯದಲ್ಲೂ ಒಬ್ಬರಿಗೊಬ್ಬರು ಮೀರಿಸುವಂತಿದ್ದರೂ ಬಾಹುಬಲಿಯ ವೀರಾವೇಶಕ್ಕೆ ಎಣೆ ಇರಲಿಲ್ಲ. ಭರತನಿಗೆ ಅಯೋಧ್ಯೆಯನ್ನು ಬಾಹುಬಲಿಗೆ ಪೌದನಪುರವನ್ನು ವಹಿಸಿ ಉಳಿದ 98 ಮಕ್ಕಳಿಗೆ ಒಂದೊಂದು ರಾಜ್ಯ ನೀಡಿ ಹೊರಟನು ವೃಷಭದೇವ. ಶಸ್ತ್ರಾಗಾರದಲ್ಲಿ ಕಾಣಿಸಿದ ಚಕ್ರದಿಂದ ದಿಗ್ವಿಜಯಕ್ಕೆ ಹೊರಟ ಭರತ. ಆತನ ಶೌರ್ಯಕ್ಕೆ ಸಾಮ್ರಾಜ್ಯಗಳೇ ಅವನ ಪಾಲಾದವು. ಹಿಂದಿರುಗಿ ರಾಜ್ಯಕ್ಕೆ ಬರುವಾಗ ಕೋಟೆಯ ಬಾಗಿಲಲ್ಲೆ ಚಕ್ರ ನಿಂತಾಗ ಭರತನ ಸೋದರರು ಪ್ರಭುತ್ವ ಒಪ್ಪಿಕೊಳ್ಳದ ಬಗ್ಗೆ ಜ್ಯೋತಿಷಿಗಳಿಂದ ಕೇಳಿ ತಿಳಿದ ಭರತ ಅವರ ಬಳಿಗೂ ದೂತನನ್ನು ಕಳುಹಿಸಿ ಚಕ್ರವರ್ತಿಯಾಗಿ ಒಪ್ಪಿಕೊಳ್ಳುವಂತೆ ತಿಳಿಸಿದಾಗ ಆತನ ಅಡಿಯಾಳಾಗಿ ಇರಲು ಇಚ್ಛಿಸದ ತಮ್ಮಂದಿರು ಸಾಮ್ರಾಜ್ಯ ತ್ಯಜಿಸಿ ಅಪ್ಪನಂತೆ ತಪ್ಪಸ್ಸಿಗೆ ತೆರಳಿದರು.

sharavanabelogala-1

ಆದರೆ ಇದಕ್ಕೆ ಒಪ್ಪದ ಬಾಹುಬಲಿಯೊಂದಿಗೆ ಭರತ ದೃಷ್ಟಿ , ಜಲ ಮತ್ತು ಮಲ್ಲಯುದ್ಧ ನಡೆಸಿದಾಗ ಬಾಹುಬಲಿ ವಿಜಯ ಮಾಲೆ ಗಳಿಸಿದ. ಇದರಿಂದ ಕುಪಿತನಾದ ಭರತ ತನ್ನ ಚಕ್ರಕ್ಕೆ ಬಾಹುಬಲಿಯನ್ನು ಸಂಹರಿಸುವಂತೆ ಅಪ್ಪಣೆ ಮಾಡಿದರೂ ಆ ಚಕ್ರ ಜಯಗಳಿಸಿದ ಬಾಹುಬಲಿಯ ಸುತ್ತ ಸುತ್ತು ಹಾಕಿ ನಿಂತುಬಿಟ್ಟಿತು. ವೃಷಭನಾಥನಂತಹ ದೊರೆಯ ಮಕ್ಕಳು ರಾಜ್ಯಕ್ಕೆ, ಜನರಿಗೆ ಮಾದರಿಯಾಗಿ ನಿಲ್ಲದೆ ರಾಜ್ಯ-ಅಧಿಕಾರದ ಆಸೆಗಾಗಿ ಸೋದರನೊಂದಿಗೆ ಸೆಣೆಸಿದ್ದರಿಂದ ನೊಂದ ಬಾಹುಬಲಿಯಲ್ಲಿ ಆ ಕ್ಷಣ ಮೂಡಿದ ವೈರಾಗ್ಯದಿಂದ ದೀಕ್ಷೆ ಪಡೆದು ಧ್ಯಾನಕ್ಕೆ ನಿಂತ ಬಾಹುಬಲಿ ಸುತ್ತ ಹುತ್ತಗಳೆ ಬೆಳೆಯಿತು. ಆತನ ಆಜಾನು ಬಾಹುಗಳು ಬಳ್ಳಿಗಳಿಗೆ ಆಶ್ರಯವಾದವು. ಆದರೂ ತಪ್ಪಿಸ್ಸಿನಿಂದ ಕೇವಲ ಜ್ಞಾನ ಪ್ರಾಪ್ತಿಯಾಗದೇ ಹೋದಾಗ ಭರತನ ರಾಜ್ಯದಲ್ಲಿ ಕಾಲೂರಿ ನಿಂತ ಭಾವದಿಂದ ಬಾಹುಬಲಿ ಎಲ್ಲವನ್ನು ತೊರೆದಿಲ್ಲ ಎಂಬ ಮನಃಕ್ಲೇಶದಿಂದ ಸಾಧ್ಯವಾಗದ ಜ್ಞಾನದ ಬಗ್ಗೆ ತಂದೆಯಿಂದ ತಿಳಿದ ಭರತ ನೀನು ಕೊಟ್ಟ ಭೂಮಿ ಇದು. ಇಂತಹ ಅಭಿಮಾನ ತೊರೆದು ಧ್ಯಾನಸ್ತನಾಗು ಎಂದು ಮಾಡಿದ ಮನವಿಯ ನಂತರ ಬಾಹುಬಲಿಗೆ ಕೇವಲ ಜ್ಞಾನ ಪ್ರಾಪ್ತವಾಗಿ ಮೋಕ್ಷ ಸಾಧಿಸಿದ.

ಆಸೆ ಆಮಿಷಗಳನ್ನು ಮೆಟ್ಟಿ ನಿಂತು ರಾಜ್ಯ ಗಳಿಸಿ ದಿಗ್ವಿಜಯ ಸಾಧಿಸುವ ಐಹಿಕ ಸುಖಕ್ಕಿಂತ ಪಾರಮಾರ್ಥಿಕ ಲೋಕದಲ್ಲಿ ದಿವ್ಯಚೇತನವಾಗಿ ಬೆಳಗಿದ.
ಶ್ರವಣಬೆಳಗೊಳ ಐತಿಹಾಸಿಕ ಧಾರ್ಮಿಕ ಕ್ಷೇತ್ರ. ಚಂದ್ರಗುಪ್ತ ಮËರ್ಯ ಹಾಗೂ ಆತನ ಗುರು ಭದ್ರಬಾಹು ಮುನಿಗಳು ಕ್ರಿ.ಪೂ. 3ನೆ ಶತಮಾನದಲ್ಲಿ ಇಂದಿನ ಚಂದ್ರಗಿರಿಗೆ ಆಗಮಿಸಿ ಸಲ್ಲೇಖನ ಕೈಗೊಂಡು ಸಮಾಧಿ ಹೊಂದಿದ ಬಗ್ಗೆ ಕ್ರಿ.ಶ. 600ರಲ್ಲಿ ದೊರೆತ ಶಾಸನಗಳಿಂದ ತಿಳಿದುಕೊಳ್ಳಬಹುದು. ಇದು ಶ್ರವಣಬೆಳಗೊಳದ ಇತಿಹಾಸವನ್ನು ಸಾರುತ್ತದೆ. ಮುಕ್ತಿಯೇ ಗುರಿಯಾಗಿದ್ದ ಶ್ರವಣರಿಗೆ ಸಾಧನೆಯ ಕೇಂದ್ರವಾಗಿದ್ದು, ಶ್ರವಣಬೆಳಗೊಳದ ಚಂದ್ರಗಿರಿ. ಇದರ ಪುರಾತನ ಹೆಸರು ಕಳ್ವಪ್ಪು, ಕಟವಪ್ರ, ರಿಷಿಗಿರಿ, ತೀರ್ಥಗಿರಿ, ಸಮಾಧಿ ಬೆಟ್ಟ. ಇಲ್ಲಿ ಮಹಾಕವಿ ರನ್ನನ ಹಸ್ತಾಕ್ಷರವಿದ್ದು, ಕವಿರತ್ನ ಎಂಬ ಚಿಕ್ಕ ಶಾಸನವೂ ಕ್ಷೇತ್ರದ ಮಹತ್ವವನ್ನು ನೂರ್ಮಡಿಗೊಳಿಸಿದೆ. ಚಂದ್ರಗಿರಿಯು 2300 ವರ್ಷಗಳ ಇತಿಹಾಸ ಹೊಂದಿದೆ. ಚಂದ್ರಗಿರಿಯಲ್ಲಿರುವ ಕತ್ತಲೆ ಬಸದಿ, ಚಾವುಂಡರಾಯ ಬಸದಿ, ಶಾಂತಲೆ ಕಟ್ಟಿಸಿದ ಸವತಿಗಂಧಾವರಣ ಬಸದಿ ಮತ್ತು ಇನ್ನೂ ಅನೇಕ ಬಸದಿಗಳು ಶಿಲ್ಪಕಲೆ ಮತ್ತು ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿವೆ. ಶ್ರವಣಬೆಳಗೊಳ ನಗರ ಪ್ರದೇಶದಲ್ಲಿರುವ ಭಂಡಾರ ಬಸದಿಯು ಬೆಳಗೊಳದ ಅತಿ ದೊಡ್ಡ ಮತ್ತು ಪುರಾತನ ಬಸದಿಯಾಗಿದೆ. 24 ತೀರ್ಥಂಕರರು ಮತ್ತು ಅವರ ಯಕ್ಷ-ಯಕ್ಷಿಯರು ನೆಲೆಸಿರುವಂತ ಅಪರೂಪದ ಬಸದಿ. ತ್ರಿಕಾಲ ತೀರ್ಥಂಕರರನ್ನು ಒಂದೇ ಸ್ಥಳದಲ್ಲಿ ನೋಡುವುದೇ ಸಂತೋಷವಾದ ವಿಷಯ.

ಮಂಗಾಯಿ ಬಸದಿ, ದಾನಶಾಲಾ, ಸಿದ್ದಾಂತ ಬಸದಿ, ನಗರ ಜಿನಾಲಯ ಬಸದಿ ಮತ್ತು ಅಕ್ಕನ ಬಸದಿಗಳು ನಗರದ ಧಾರ್ಮಿಕ ಮಹತ್ವವನ್ನೂ ಹೆಚ್ಚಿಸಿದೆ ಹಾಗೂ ಇವೆಲ್ಲಾ ಬಸದಿಗಳು ತನ್ನದೇ ಆದ ಪುರಾತನ ಇತಿಹಾಸವನ್ನು ಹೊಂದಿವೆ. ಊರಿಗೆ ಬರುವ ಭಕ್ತಾಧಿಗಳನ್ನು ಬರಮಾಡಿ ಕೊಳ್ಳುವ ಧರ್ಮಚಕ್ರ ಮತ್ತು ಜನಮಂಗಲ ಕಲಶಗಳು ಧರ್ಮದಿಂದ ಮಂಗಳವಾಗುತ್ತದೆ ಎಂಬ ಸಂದೇಶವನ್ನು ಸಾರುತ್ತದೆ.  ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ: ಶ್ರವಣಬೆಳಗೊಳ ಎಂದೊಡನೆ ನೆನಪಾಗುವುದು ಬಾಹುಬಲಿ ಗೊಮ್ಮಟೇಶನ ಮೂರ್ತಿ ಹಾಗೂ ಆ ಮೂರ್ತಿಯ ಕೀರ್ತಿ… ಹಾಗೆಯೇ ಜೈನ ಕಾಶಿ ಎಂದೇ ಬಿರುದು ಹೊಂದಿರುವ ಶ್ರೀ ಕ್ಷೇತ್ರದ ಸಾರಥ್ಯ ವಹಿಸಿರುವ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು.

ಗಂಗರಸ ರಾಜಮಲ್ಲನ ಮಂತ್ರಿ ಚಾವುಂಡರಾಯ. ತನ್ನ ತಾಯಿಯ ಆಸೆ ಈಡೇರಿಸುವ ಉದ್ದೇಶದಿಂದ ಶ್ರವಣಬೆಳಗೊಳದ ವಿಂಧ್ಯಗಿರಿಯ ಮೇಲೆ ಕ್ರಿ.ಶ.982ರಲ್ಲಿ ಗೊಮ್ಮಟೇಶ್ವರನ ಮೂರ್ತಿ ಕೆತ್ತಿಸಿ ಪ್ರತಿಷ್ಠಾಪನೆ ಮಾಡಿದ ಬಳಿಕ ಬೆಳಗೊಳದಲ್ಲಿ ಮಠವೊಂದನ್ನು ಸ್ಥಾಪಿಸಿ, ನೇಮಿಚಂದ್ರ ಸಿದ್ಧಾಂತ ಚಕ್ರವರ್ತಿಯವರನ್ನು ಮಠದ ಪೀಠಾಧಿಪತಿಯಾಗಿ ನೇಮಕ ಮಾಡಿದ. ನೇಮಿಚಂದ್ರರ ಬಳಿಕ ಶುಭಚಂದ್ರಮುನಿ ಆಚಾರ್ಯ ಪಟ್ಟದಲ್ಲಿದ್ದಾಗ ರಾಜ್ಯದಲ್ಲಿ ಕ್ಷೋಭೆ ಉಂಟಾಯಿತು. ಈ ವೇಳೆ ಚಾವುಂಡರಾಯನಿಗೆ ಶುಭಚಂದ್ರರು ಕೆಲವು ಸಲಹೆ ಸೂಚನೆ ನೀಡಿದರು. ಹೀಗಾಗಿ ಅಂದು ಚಾವುಂಡರಾಯ ಶ್ರೀಗಳ ಮಾರ್ಗದರ್ಶನದ ಕೃತಜ್ಞತೆಗಾಗಿ ಮಠದ ಪೀಠಾಧ್ಯಕ್ಷರಿಗೆ ಬಳುವಳಿಯಾಗಿ ಚಾರುಕೀರ್ತಿ ಎಂಬ ಬಿರುದು ಪ್ರದಾನ ಮಾಡಲಾಯಿತು. ಅಂದಿನಿಂದ ಶ್ರವಣಬೆಳಗೊಳದಲ್ಲಿ ಯಾರೇ ಪೀಠಾಧಿಪತಿಗಳಾದರೂ ಅವರಿಗೆ ಚಾರುಕೀರ್ತಿ ಎಂಬ ಹೆಸರು ಶಾಶ್ವತವಾಯಿತು.

—————————————————————————————————————————————-

sharavanabelogala--5
ಪರಮಪೂಜ್ಯ ಸ್ವಸ್ತಿಶ್ರೀ ಜಗದ್ಗುರು ಕರ್ಮ ಯೋಗಿ ಚಾರುಕೀರ್ತಿ ಭಟ್ಟಾರಕ ಸ್ವಾಮಿಜೀಯವರ ಪರಿಶ್ರಮದಿಂದ ಇಂದು ಶ್ರವಣಬೆಳಗೊಳದ ಜೈನಮಠ ರಾಜ್ಯ, ರಾಷ್ಟ್ರವಲ್ಲದೆ, ವಿಶ್ವಮಟ್ಟದಲ್ಲಿಯೂ ಗುರುತಿಸುವಂತಾಗಿದೆ. ಅದಕ್ಕೆಲ್ಲ ಕಾರಣಕರ್ತರು ಈ ಭಟ್ಟಾರಕರು. ಅಂತಹ ಭಟ್ಟಾರಕರು ಈ ಮಠದ ಬೆಳಕಾಗಿದ್ದಾರೆ. ಈ ಬೆಳಕಿನಡಿ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದಲ್ಲಿ ದಾರಿಯೊಂದನ್ನು ಕಂಡುಕೊಂಡಿದ್ದಾರೆ. ಅಂತಹ ದಾರಿ ಕಂಡುಕೊಂಡವರಲ್ಲಿ ನಾನು ಕೂಡಾ ಓರ್ವ ಎಂದು ಹೇಳಲು ಹೆಮ್ಮೆ ಪಡುತ್ತೇನೆ. ಅಂತಹ ಮಠದ ಬೆಳಕಾಗಿರುವ ಚಾರುಕೀರ್ತಿ ಭಟ್ಟಾರಕರ ಬಗ್ಗೆ ನನಗೆ ತಿಳಿದಿರುವ ಸಂಗತಿಯನ್ನು ನಿಮ್ಮ ಮುಂದಿಡಲು ನನಗೆ ತುಂಬಾ ಸಂತೋಷ ವಾಗುತ್ತಿದೆ. ಪೂಜ್ಯರ ಹಿನ್ನೆಲೆ: ರತ್ನವರ್ಮ ಎಂಬುದು ಇಂದಿನ ಚಾರುಕೀರ್ತಿ ಭಟ್ಟಾರಕರ ಸ್ವಾಮೀಜಿಯವರ ಪೂರ್ವ ಹೆಸರು. ದಕ್ಷಿಣ ಕನ್ನಡ ಜಿಲ್ಲೆಯ ವರಂಗ ಗ್ರಾಮದ ಕಾಂತಮ್ಮ, ಪುರೋಹಿತ ರತ್ನ ಚಂದ್ರರಾಜ ಇಂದ್ರರ 3ನೆ ಮಗನಾಗಿ ಮೇ 3, 1949ರಲ್ಲಿ ರತ್ನ ವರ್ಮರು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ವರಂಗಾದ ಪದ್ಮಾಂಬ ಶಾಲೆಯಲ್ಲಿ, ಪ್ರೌಢಶಾಲೆಯನ್ನು ಕಾರ್ಕಳದ ಬೋರ್ಡ್ ಹೈಸ್ಕೂಲ್‍ನಲ್ಲಿ ಹಾಗೂ ಶ್ರವಣಬೆಳಗೊಳದ ಆಶ್ರಮದಲ್ಲಿದ್ದುಕೊಂಡು ಪದವಿ ಪೂರ್ವ ಕಾಲೇಜು ಶಿಕ್ಷಣವನ್ನು ಪಡೆದರು. ಅಧ್ಯಯನದ ಜತೆಗೆ ಪ್ರಾಕೃತ, ತತ್ವಶಾಸ್ತ್ರ, ಸಂಸ್ಕøತ, ಕನ್ನಡ ಭಾಷೆಯ ಜ್ಞಾನ ಪಡೆಯುವುದಕ್ಕೆ ಸೀಮಿತವಾಗಿಸದೆ, ಮೈಸೂರು ವಿಶ್ವವಿದ್ಯಾಲಯದಲ್ಲಿ ಇತಿಹಾಸ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ ಸ್ನಾತಕೋತ್ತರ ಪದವಿ ಪಡೆದರು.

ಬಾಲ್ಯಾವಸ್ಥೆ ದಾಟಿ ಯೌವ್ವನಾವಸ್ಥೆಗೆ ಬಂದ ಸಂದರ್ಭದಲ್ಲಿ ದೀಕ್ಷೆ ಸ್ವೀಕರಿಸಬೇಕೆಂದು ಪ್ರೇರಣೆಯಾದ ಹಿನ್ನೆಲೆಯಲ್ಲಿ 1969 ಡಿಸೆಂಬರ್ 12ರಂದು ಸನ್ಯಾಸತ್ವದ ದೀಕ್ಷೆ ಪಡೆದರು. ದೀಕ್ಷೆ ಪಡೆದ ಆರು ತಿಂಗಳೊಳಗೆ ಅಂದರೆ 1970ರ ಏಪ್ರಿಲ್ 19ರಂದು ರತ್ನವರ್ಮರು ಶ್ರವಣಬೆಳಗೊಳದ ಜೈನಮಠದ ಪೀಠಾಧ್ಯಕ್ಷರಾಗುವ ಮೂಲಕ ಭಟ್ಟಾರಕರಾಗಿ ಪದೋನ್ನತಿ ಹೊಂದಿ ಪೀಠಾರೋಹಣ ಮಾಡಿದರು. ಪೀಠಾಧ್ಯಕ್ಷರಾಗಿ ಇಂದಿಗೆ ಸುಮಾರು 47 ವರ್ಷಗಳು ಸಂದಿವೆ. ಸ್ವಾಮೀಜಿಯವರು ಮಠದ ಕೆಲಸ-ಕಾರ್ಯಗಳನ್ನು ಮಾಡುತ್ತಲೇ ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿಗಳನ್ನು ಪಡೆದುಕೊಂಡರು. ಸರಳತೆ ಮತ್ತು ಸಜ್ಜನಿಕೆಗೆ ಹೋಲಿಕೆ ಮಾಡಲು ನಮಗೆ ಬೇರ್ಯಾವ ಮಠಾಧೀಶರು ಕಾಣಸಿಗುವುದಿಲ್ಲ. ಜೈನ ಮಠದ ಪೀಠಾಧ್ಯಕ್ಷರಾದ ಬಳಿಕ ಶ್ರವಣಬೆಳಗೊಳದಲ್ಲಿ ಹಲವಾರು ಅಭಿವೃದ್ಧಿ ಪರ ಕೆಲಸಗಳಾಗಿವೆ. ಇವರು 30ಕ್ಕೂ ಹೆಚ್ಚು ದೇವಾಲಯಗಳನ್ನು ಜೀರ್ಣೋದ್ಧಾರಗೊಳಿಸಿ ಪ್ರತಿನಿತ್ಯ ಪೂಜೆ ಸಲ್ಲುವಂತೆ ಮಾಡಿದ್ದಾರೆ.

ಮಹಾವೀರರ 2500ನೆ ಜಯಂತಿ ಅಂಗವಾಗಿ ಭಾರತದಾದ್ಯಂತ ಧರ್ಮಚಕ್ರ ಯಾತ್ರೆಯನ್ನು ಯಶಸ್ವಿಗೊಳಿಸಿದ ಕೀರ್ತಿ ಪರಮಪೂಜ್ಯರಿಗೆ ಸಲ್ಲುತ್ತದೆ. 1981ರಲ್ಲಿ ನಡೆದ ಸಹಸ್ರಾಬ್ದಿ ಮಸ್ತಕಾಭಿಷೇಕದ ಯಶಸ್ಸಿನ ಬೆನ್ನಲ್ಲೇ ಅಂದಿನ ಪ್ರಧಾನಿ ಇಂದಿರಾಗಾಂಧಿ ಭಟ್ಟಾರಕ ಸ್ವಾಮೀಜಿಯವರಿಗೆ ಕರ್ಮಯೋಗಿ ಎಂಬ ಎಂಬ ಅಭಿದಾನ ನೀಡಿದ್ದು ಅವಿಸ್ಮರಣೀಯ. ಧಾರ್ಮಿಕ ಚಟುವಟಿಕೆಗಳ ಜತೆಗೆ ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ಕೆ ಕೆಲವು ಹಳ್ಳಿಗಳನ್ನು ದತ್ತು ಪಡೆದರು. ಸಾವಿರಾರು ಮಂದಿಗೆ ಉಚಿತ ಕಣ್ಣಿನ ಚಿಕಿತ್ಸೆ, ಕೃತಕ ಅಂಗಾಂಗಗಳ ಜೋಡಣೆ, ಮಕ್ಕಳ ಆಸ್ಪತ್ರೆ, ಪ್ರಾಕೃತ, ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ತೆರೆದು ಸಾಮಾಜಿಕ ಕಾರ್ಯದಲ್ಲಿಯೂ ಮುಂಚೂಣಿ ಪಾತ್ರ ವಹಿಸಿದರು. ಪ್ರಾಕೃತ ಭಾಷೆಯ ಉನ್ನತಿಗಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಹಲವರಿಗೆ ಪ್ರತಿವರ್ಷ ಪ್ರಾಕೃತ ಜ್ಞಾನಭಾರತಿ ಪ್ರಶಸ್ತಿ ನೀಡುತ್ತ ಬಂದಿದ್ದಾರೆ. ಜೈನ ಸಂಸ್ಕøತಿಗೆ ಅಪಾರ ಕೊಡುಗೆ ನೀಡಿದವರಿಗೆ ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿ ಪುರಸ್ಕಾರ ನೀಡಲಾಗುತ್ತಿದೆ. ಜೈನ ಸಾಹಿತ್ಯ ಸಮ್ಮೇಳನ ನಡೆಸಲು ಜೈನ ಅಧ್ಯಯನ ಸಂಸ್ಥೆಯೊಂದನ್ನು ಸ್ಥಾಪನೆ ಮಾಡಿದ್ದಾರೆ. ಜೈನ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಚಾವುಂಡರಾಯ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದಾರೆ.

ಕ್ಷೇತ್ರಕ್ಕೆ ಆಗಮಿಸುವ ಸಾವಿರಾರು ಯಾತ್ರಾರ್ಥಿಗಳಿಗೆ ಧರ್ಮಶಾಲೆ, ಅತಿಥಿಗೃಹದ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ನೀಡುವ ವಿವಿಧ ರೂಪದ ದಾನದಿಂದ ಮಠಕ್ಕೆ ಬರುವ ಭಕ್ತಾದಿಗಳಿಗೆ ಪ್ರತಿ ದಿನ ಭೋಜನದ ವ್ಯವಸ್ಥೆ ಮಾಡಿದ್ದಾರೆ. ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಪೂಜ್ಯರು ಮಾತುಗಾರರು ಹೌದು. ಅಮೆರಿಕಾ, ಇಂಗ್ಲೆಂಡ್, ಕೀನ್ಯಾ, ಸಿಂಗಪೂರ್ ದೇಶಗಳಿಗಷ್ಟೆ ಅಲ್ಲದೆ ಯೂರೋಪ್ ಖಂಡದ ಹಲವು ದೇಶಗಳಲ್ಲೂ ಧರ್ಮ ಪ್ರಚಾರ ಮಾಡಿದ್ದಾರೆ.  ಒದೆಗಲ್ಲು ಬಸದಿ: ಬೇಲೂರಿನ ಗರುಡಗಂಬವನ್ನು ನೋಡಿದರೆ ವಿಶ್ವದಲ್ಲೇ ಕಾಣಸಿಗದ ಅಡಿಪಾಯವೇ ಇಲ್ಲದೆ ನಿಲ್ಲಿಸಿರುವುದೆಂದು ಗೊತ್ತಿದೆ. ಆದರೆ, ಇದೇ ಜಿಲ್ಲೆಯಲ್ಲಿ ಮತ್ತೊಂದು ಆಶ್ಚರ್ಯಕರ ದೇವಾಲಯವೊಂದಿದೆ. ಈ ದೇವಾಲಯಕ್ಕೆ ಅಡಿಪಾಯವನ್ನೇ ಹಾಕದೇ ಕೇವಲ ಕಲ್ಲುಗಳ ಸಹಾಯದಿಂದ ನಿರ್ಮಾಣ ಮಾಡಿದ್ದಾರೆ. ಅದು ಬೇರ್ಯಾವುದೂ ಅಲ್ಲ, ಅದೇ ಒದೆಗಲ್ ಬಸದಿ.

ಚೈತ್ಯಾಲಯ: ಹೌದು, ಇಂತಹದ್ದೊಂದು ದೇವಾಲಯ ಇರುವುದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ತಾಲ್ಲೂಕಿನ ಶ್ರವಣಬೆಳಗೊಳದಲ್ಲಿ. ಪಟ್ಟಣದ ವಿಂದ್ಯಗಿರಿ ಬೆಟ್ಟ ಏರಿ ನಾವು ಅಡಿಪಾಯವಿಲ್ಲದ ಚೈತ್ಯಾಲಯ ಅಥವಾ ಈ ಬಿದ್ರೆಗಲ್ಲು ಬಸದಿಯನ್ನ ನೋಡಬಹುದಾಗಿದೆ.  ವಿಂದ್ಯಗಿರಿಯ ಪ್ರಮುಖ ಆಕರ್ಷಣಾ ಕೇಂದ್ರವೂ ಇದಾಗಿದೆ. ಬೆಟ್ಟ ಹತ್ತಿದ ಬಳಿಕ ಕೋಟೆಯ ಮೊದಲಿಗೆ ಕಾಣುವುದು ಈ ಒದೆಗಲ್ ಬಸದಿ. ಉತ್ತರಾಭಿಮುಖವಾಗಿದ್ದು, ವಾಸ್ತುಪ್ರಕಾರ ನಿರ್ಮಾಣವಾಗಿ ದೆಯಂತೆ. 7272 ಅಡಿ ಅಳತೆ ಸುತ್ತಳತೆ ಹೊಂದಿರುವ ಇದು 26 ಮೆಟ್ಟಿಲುಗಳನ್ನು ಹತ್ತಿದ ಬಳಿಕ ಸಿಗುತ್ತದೆ.

ಈ ಸುಂದರ ಮಹಾಮೂರ್ತಿಗೆ ಹತ್ತಾರು ಹೆಸರು- ದೋರ್ಬಲಿ, ಭುಜಬಲಿ, ಸೌನಂದಿ, ಗೊಮ್ಮಟ, ಬಾಹುಬಲಿ, ಮನ್ಮಥ  ಇತ್ಯಾದಿ. ಉತ್ತರ ದಿಕ್ಕಿಗೆ ಮುಖ ಮಾಡಿ ನಿಂತ ಮಂದಸ್ಮಿತ ಬಾಹುಬಲಿಯು  ಪ್ರಥಮ ಮೋಕ್ಷಗಾಮಿ. ಪ್ರಥಮ ತೀರ್ಥಂಕರ ಆದಿನಾಥನ ಪುತ್ರ. ಈ ವಿರಾಗಿಗೆ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ.  ವಿಶ್ವದಾದ್ಯಂತ ತನ್ನೆಲ್ಲಾ ಭಕ್ತರನ್ನೂ ಆಕರ್ಷಿಸುವ  ಸ್ವಾಮಿ ಬಾಹುಬಲಿಯನ್ನು ದರ್ಶಿಸಲು 625 ಮೆಟ್ಟಿಲುಗಳನ್ನು ನಿರಾಯಾಸವಾಗಿ ಹತ್ತುವುದೇ ಖುಷಿಯ ವಿಚಾರ.

Facebook Comments

Sri Raghav

Admin