ಬಿಜೆಪಿ ಅಧಿಕಾರಕ್ಕೆ ಬಂದರೆ ಮಹದಾಯಿ ವಿವಾದ ಇತ್ಯರ್ಥ : ಅಮಿತ್ ಶಾ

ಈ ಸುದ್ದಿಯನ್ನು ಶೇರ್ ಮಾಡಿ

Amit-Shah--BJP--01

ಕಲಬುರಗಿ,ಫೆ.26- ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಮಹದಾಯಿ ವಿವಾದ ಇತ್ಯರ್ಥವಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಿಳಿಸಿದ್ದಾರೆ.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕರ್ನಾಟಕದಲ್ಲಿ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಅವರು ಇಚ್ಛಾಶಕ್ತಿ ಪ್ರದರ್ಶಿಸಲಿಲ್ಲ. ಕೇವಲ ಕೇಂದ್ರದ ವಿರುದ್ಧ ಟೀಕೆ ಮಾಡುತ್ತಲೇ ಭಾಷಣ ಮಾಡುತ್ತಿದ್ದಾರೆ. ಮಹದಾಯಿ ಬಗ್ಗೆ ತುಟಿ ಬಿಚ್ಚುತ್ತಿಲ್ಲ ಎಂದು ಶಾ ಕಿಡಿಕಾರಿದ್ದಾರೆ.

ಬಿಜೆಪಿಯನ್ನು ಜನ ಆಶೀರ್ವಾದ ಮಾಡಿದರೆ ಗೆಲ್ಲಿಸಿದರೆ ಗೋವಾ ಕರ್ನಾಟಕ ಮಧ್ಯೆ ಎದ್ದಿರುವ ವಿವಾದವನ್ನು ಇತ್ಯರ್ಥಗೊಳಿಸಲಾಗುವುದು ಮತ್ತು ಶೀಘ್ರದಲ್ಲಿಯೇ ಅದಕ್ಕೊಂದು ತಾರ್ಕಿಕ ಅಂತ್ಯ ಮಾಡಲಾಗುವುದು ಎಂದರು. ಕಾಂಗ್ರೆಸ್‍ನವರ ಮೊಂಡು ಧೋರಣೆಯೇ ಮಹದಾಯಿ ವಿವಾದ ಜಟಿಲಗೊಳ್ಳಲು ಕಾರಣವೆಂದು ಆರೋಪಿಸಿದ ಅವರು, ನದಿ ವಿವಾದ ಬಗೆಹರಿಸುವ ವಿಚಾರದಲ್ಲೂ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ವಿವಾದವನ್ನು ಬಗೆಹರಿಸುವ ಇಚ್ಛೆಯೇ ಅವರಿಗಿಲ್ಲ ಎಂದು ವಾಗ್ದಾಳಿ ಮಾಡಿದರು.

ಕರ್ನಾಟಕದಲ್ಲಿ ಹಿಂದುಳಿದ ಪ್ರದೇಶ ನೋಡಬೇಕಾದರೆ ಅದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕ್ಷೇತ್ರವನ್ನು ನೋಡಬೇಕು ಎಂದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಎಲ್ಲಾ ಕ್ಷೇತ್ರದಲ್ಲಿ ವಿಫಲವಾಗಿದೆಯಲ್ಲದೆ ಗೂಂಡಾಗಿರಿಯಲ್ಲಿ ತೊಡಗಿದೆ ಎಂದು ಟೀಕಿಸಿದರು. ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ತಲೆಕೆಡಿಸಿಕೊಂಡಿಲ್ಲ. ರೈತರ ಒಳಿತಿಗಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಅಮಿತ್ ಶಾ ಆಕ್ಷೇಪ ವ್ಯಕ್ತಪಡಿಸಿದರು.

ಆತಂಕ: ಅಮಿತ್ ಷಾ ಅವರು ಪತ್ರಿಕಾಗೋಷ್ಠಿ ನಡೆಸುತ್ತಿದ್ದಾಗ ಹೊರಗೆ ವ್ಯಕ್ತಿಯೊಬ್ಬ ಪಿಸ್ತೂಲು ಇಟ್ಟುಕೊಂಡಿರುವುದು ಪತ್ತೆಯಾಗಿ ಕೆಲ ಕಾಲ ಪೊಲೀಸರು ಹಾಗೂ ಸ್ಥಳೀಯರು ಆತಂಕಗೊಂಡ ಘಟನೆಯೂ ಕೂಡ ನಡೆಯಿತು. ತಕ್ಷಣ ಆತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಆ ವ್ಯಕ್ತಿ ಹೊಂದಿದ್ದ ಪಿಸ್ತೂಲಿಗೆ ಲೈಸೆನ್ಸ್ ಇರುವುದು ತಿಳಿದು ನಿರಾಳರಾದರು. ಎಸ್ಪಿ ಕೂಡ ಮಾಧ್ಯಮದವರಿಗೆ ಮಾಹಿತಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ತಿಳಿಗೊಲಿಸಿದರು.

Facebook Comments

Sri Raghav

Admin