ಕಾವೇರಿ ತೀರ್ಪು: ನೀರಾವರಿ ತಜ್ಞರ-ಜನಪ್ರತಿನಿಧಿಗಳ ಸಭೆ ಕರೆಯಲು ಸಿಂಧ್ಯಾ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

P-G-R-Sindhia

ಬೆಂಗಳೂರು, ಫೆ.28-ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಕಾನೂನು ತಜ್ಞರು, ನೀರಾವರಿ ತಜ್ಞರು ಹಾಗೂ ವಿರೋಧ ಪಕ್ಷಗಳ ನಾಯಕರನ್ನೊಳಗೊಂಡ ಸಭೆ ಕರೆದು ಸಮಾಲೋಚಿಸಬೇಕೆಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ರಾಜ್ಯಸರ್ಕಾರವನ್ನು ಒತ್ತಾಯಿಸಿದರು. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸುಪ್ರೀಂಕೋರ್ಟ್‍ನ ಅಂತಿಮ ತೀರ್ಪಿನಿಂದಾಗಿ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮತ್ತೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ. ಮುಂದಿನ ಕಾರ್ಯತಂತ್ರ ರೂಪಿಸುವ ಬಗ್ಗೆ ಸಮಾಲೋಚನೆ ನಡೆಸಬೇಕು. ನೀರಾವರಿ ವಿಚಾರದಲ್ಲಿ ಸಮಗ್ರ ಅನುಭವ ಹೊಂದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಲಹೆಯನ್ನು ಸೌಜನ್ಯಕ್ಕಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಾಗಿದೆ ಎಂದ ಅವರು, ಸಾಲದ ಹಣದಲ್ಲಿ ಸರ್ಕಾರದ ಸಾಧನೆಯ ಜಾಹೀರಾತನ್ನು ನೀಡಲಾಗುತ್ತಿದೆ. ಭಾಗ್ಯಗಳನ್ನೇ ನೀಡಿದ್ದನ್ನು ಬಿಟ್ಟರೆ ಬೇರೆ ಅಭಿವೃದ್ಧಿ ಬಗ್ಗೆ ಖರ್ಚು ಮಾಡಿಲ್ಲ. ಐದು ವರ್ಷದಲ್ಲಿ ಎರಡು ಲಕ್ಷ ಕೋಟಿ ರೂ. ಸಾಲ ಮಾಡಲಾಗಿದೆ. ಸಾಧನಾ ಬಜೆಟ್ ಬಗ್ಗೆ ಚರ್ಚೆಯೇ ಆಗಿಲ್ಲ ಎಂದು ಟೀಕಿಸಿದರು. ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಕ್ಷಗಳ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುವುದನ್ನು ಬಿಟ್ಟು ವಿಷಯಾಧಾರಿತ ಆರೋಗ್ಯಕರ ಚರ್ಚೆ ಮಾಡಬೇಕು ಎಂದರು.
ರಾಜ್ಯದ ಜ್ವಲಂತ ಸಮಸ್ಯೆಗಳಾದ ಬೆಳೆಹಾನಿ, ಕೃಷಿ ಉತ್ಪನ್ನಗಳ ಬೆಲೆ ಕುಸಿತ, ಕಾವೇರಿ ಹಾಗೂ ಮಹದಾಯಿ ವಿಚಾರದ ಬಗ್ಗೆ ರಾಷ್ಟ್ರೀಯ ಪಕ್ಷಗಳು ಚರ್ಚೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಹಲವು ಬಾರಿ ಭೇಟಿ ನೀಡಿದ್ದಾರೆ. ಆದರೆ ಯಾವೊಂದು ಸಮಸ್ಯೆಗೂ ಪರಿಹಾರ ಒದಗಿಸಿಲ್ಲ. ಹಸಿರು ಶಾಲು ಹೊದ್ದು, ಸಂತರ ಹೆಸರು ಹೇಳುವುದರಿಂದ ರೈತರಿಗೆ ಉಪಯೋಗವಿಲ್ಲ. ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಬೇಕು. ಕೇಂದ್ರ ಸರ್ಕಾರದ ಕಳೆದ ನಾಲ್ಕು ಬಜೆಟ್‍ಗಳಲ್ಲಿ ರಾಜ್ಯಕ್ಕೆ ವಿಶೇಷ ಅನುದಾನ ಕೊಟ್ಟಿಲ್ಲ. ರಾಜ್ಯಕ್ಕೆ ನ್ಯಾಯಬದ್ಧವಾಗಿ ದೊರೆಯುವ ಪಾಲನ್ನಷ್ಟೇ ನೀಡಿದೆ ಎಂದರು. ಮಹದಾಯಿ ಸಮಸ್ಯೆ ಬಗೆಹರಿಸುವ ವಿಶ್ವಾಸವಿದ್ದು, ನೆರೆಹೊರೆಯ ರಾಜ್ಯಗಳನ್ನು ಟೀಕೆ ಮಾಡುವುದರಿಂದ ಉಪಯೋಗವಿಲ್ಲ. ಆ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೌಹಾರ್ದಯುತವಾಗಿ ಬಗೆಹರಿಸುವ ವಿಶ್ವಾಸವಿದೆ. ನಮ್ಮ ಪಕ್ಷಕ್ಕೆ ರಾಜ್ಯದ ಜನತೆ ಅಧಿಕಾರ ನೀಡಬೇಕು ಎಂದು ಮನವಿ ಮಾಡಿದರು.

ಬಿಎಸ್‍ಪಿ ಮತ್ತು ಎನ್‍ಸಿಪಿಯೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲಾಗಿದ್ದು, ಓವೈಸಿಯೊಂದಿಗಿನ ಮಾತುಕತೆ ಆರಂಭಿಕ ಹಂತದಲ್ಲಿದ್ದು, ಯಾವುದೇ ಅಂತಿಮ ತೀರ್ಮಾನವಾಗಿಲ್ಲ ಎಂದು ಹೇಳಿದರು. ವೈಯಕ್ತಿಕವಾಗಿ ತಾವು ಸ್ಪರ್ಧೆ ಮಾಡಬಾರದು ಎಂಬ ನಿರ್ಧಾರವಿದೆ. ಆದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಪಕ್ಷದಲ್ಲಿ ಚರ್ಚೆಯಾಗುತ್ತಿದೆ. ಪಕ್ಷದ ತೀರ್ಮಾನಕ್ಕೆ ತಲೆ ಬಾಗುವುದಾಗಿ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯರಾದ ರಮೇಶ್‍ಬಾಬು, ಕೆ.ಟಿ.ಶ್ರೀಕಂಠೇಗೌಡ ಉಪಸ್ಥಿತರಿದ್ದರು.

Facebook Comments

Sri Raghav

Admin