ವಂಚಿಸಿ ದೇಶದಿಂದ ಎಸ್ಕೇಪ್ ಆಗುವವರ ಆಸ್ತಿ ಜಪ್ತಿಗೆ ಕೇಂದ್ರ ಸಂಪುಟ ನಿರ್ಧಾರ..?

ಈ ಸುದ್ದಿಯನ್ನು ಶೇರ್ ಮಾಡಿ

Vijay-Malya-Nirav-Modi

ನವದೆಹಲಿ, ಮಾ.1-ಬ್ಯಾಂಕ್‍ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿ ಭಾರತದಿಂದ ಪರಾರಿಯಾಗುವ ಇಚ್ಚಾಪೂರ್ವಕ ಸುಸ್ತಿದಾರರು ಮತ್ತು ಆರ್ಥಿಕ ಅಪರಾಧಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೇಂದ್ರ ಸರ್ಕಾರ ಇಂದು ಮಹತ್ವದ ತೀರ್ಮಾನ ಕೈಗೊಳ್ಳಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಗಹನ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕಳಂಕಿತ ಉದ್ಯಮಿಗಳಾದ ಕಿಂಗ್‍ಫಿಶರ್ ವಿಜಯಮಲ್ಯ, ಡೈಮಂಡ್ ಕಿಂಗ್ ನೀರವ್ ಮೋದಿ ಮತ್ತು ಗೀತಾಂಜಲಿ ಗ್ರೂಪ್ ಅಧಿಪತಿ ಮೆಹುಲ್ ಚೋಕ್ಸಿ ಅವರಂಥ ಆರ್ಥಿಕ ಅಪರಾಧಿಗಳು ದೇಶದಿಂದ ಫಲಾಯನವಾಗಿರುವ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮಕ್ಕೆ ಕೇಂದ್ರ ಮುಂದಾಗಿದೆ.  ಉದ್ದೇಶಪೂರ್ವಕ ಸಾಲ ಸುಸ್ತಿದಾರರು ಮತ್ತು ಆರ್ಥಿಕ ಅಪರಾಧಿಗಳು ಭಾರತ ಬಿಟ್ಟು ಹೋದರೆ ಅವರ ಆಸ್ತಿ-ಪಾಸ್ತಿಗಳು ಮತ್ತು ಇತರ ಸ್ವತ್ತುಗಳನ್ನು ಜಫ್ತಿ ಮಾಡುವ ಹೊಸ ಕಾನೂನು ಜಾರಿ ಬಗ್ಗೆ ಇಂದಿನ ಸಭೆಯಲ್ಲಿ ಸಮಾಲೋಚನೆ ನಡೆಸಿ ಮಹತ್ವದ ನಿರ್ಧಾರ ಕೈಗೊಳ್ಳುವುದು ಬಹುತೇಕ ಖಚಿತವಾಗಿದೆ.  ಅದೇ ರೀತಿ 100 ಕೋಟಿ ರೂ.ಗಳ ಮೇಲ್ಪಟ್ಟ ಮರುಪಾವತಿಯಾಗದ ಹೊಣೆಗಾರಿಕೆ(ಸಾಲ ಇತ್ಯಾದಿ)ಯಿಂದ ತಪ್ಪಿಸಿಕೊಳ್ಳುವ ಉದ್ಯಮಿಗಳು ಮತ್ತು ಸಂಸ್ಥೆಗಳ ಆಸ್ತಿಗಳನ್ನು ಮುಟ್ಟಗೋಲು ಹಾಕಿಕೊಳ್ಳಲು ಹೊಸ ಕಾನೂನಿನ ಅಡಿ ಅವಕಾಶ ಕಲ್ಪಿಸಲು ನಿರ್ಧರಿಸಲಾಗುವುದು ಎಂದು ತಿಳಿದುಬಂದಿದೆ.

ಬ್ಯಾಂಕ್‍ಗಳಿಂದ ಭಾರಿ ಮೊತ್ತದ ಸಾಲಗಳನ್ನು ಎತ್ತುವಳಿ ಮಾಡಿ ಪುನರಾವರ್ತಿತ ಮನವಿಗಳಿಗೂ ಲೆಕ್ಕಿಸದೇ ಅನೇಕ ವರ್ಷಗಳಿಂದ ಸತಾಯಿಸುತ್ತಾ ಉದ್ದೇಶ ಪೂರ್ವಕ ಸುಸ್ತಿದಾರರಾಗಿರುವ ವಾಣಿಜ್ಯೋದ್ಯಮಿಗಳು ಮತ್ತು ಕಂಪನಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಲು ಶಾಸನಾತ್ಮಕ ಚೌಕಟ್ಟನ್ನು ರೂಪಿಸಲು ಸಂಪುಟ ಸಭೆ ಒಪ್ಪಿಗೆ ಸೂಚಿಸಲಿದೆ. ಅನುಮೋದನೆ ನಂತರ ಈ ನಿಟ್ಟಿನಲ್ಲಿ ಸರ್ಕಾರ ತ್ವರಿತವಾಗಿ ಕಾರ್ಯೋನ್ಮುಖವಾಗಲಿದೆ.
ಇದರೊಂದಿಗೆ, ಸುಸ್ತಿದಾರರು ಮತ್ತು ಆರ್ಥಿಕ ವಂಚಕರಿಗೆ ಕಡಿವಾಣ ಹಾಕಲು ಇರಬಹುದಾದ ಪರ್ಯಾಯ ಮಾರ್ಗೋಪಾಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ.

ರಾಷ್ಟ್ರೀಯ ಹಣಸಾಸು ವರದಿ ಪ್ರಾಧಿಕಾರ : ಭಾರತ ಲೆಕ್ಕಪರಿಶೋಧಕರ ಸಂಸ್ಥೆಯ(ಐಸಿಎಐ) ಶಿಸ್ತು ಕಾರ್ಯಗಳನ್ನು ಕ್ರಮಬದ್ಧಗೊಳಿಸಲು ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರ (ಎನ್‍ಎಫ್‍ಆರ್‍ಎ) ಸ್ಥಾಪನೆ ವಿಷಯ ಕುರಿತು ಸಹ ಸಭೆಯಲ್ಲಿ ಚರ್ಚೆಯಾಗಲಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ 12,723 ಕೋಟಿ ರೂ. ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ಲೆಕ್ಕ ಪರಿಶೋಧಕರ ನಿಬಂಧನೆ ಚೌಕಟ್ಟನ್ನು ಬಿಗಿಗೊಳಿಸಲು ಸಹ ಉದ್ದೇಶಿಸಲಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin