ಸಾಲ, ರಫ್ತು ವಹಿವಾಟು ಮೇಲೆ ಆರ್‍ಬಿಐ ಹದ್ದಿನ ಕಣ್ಣು

ಈ ಸುದ್ದಿಯನ್ನು ಶೇರ್ ಮಾಡಿ

RBI--01

ನವದೆಹಲಿ/ಬೆಂಗಳೂರು, ಮಾ.1-ದೇಶದ ಪ್ರತಿಷ್ಠಿತ ವಾಣಿಜ್ಯೋದ್ಯಮ ಸಂಸ್ಥೆಗಳಿಂದಲೇ ಬ್ಯಾಂಕುಗಳಿಗೆ ಭಾರೀ ಪ್ರಮಾಣದ ವಂಚನೆ ಮತ್ತು ಅವ್ಯವಹಾರಗಳು ಬೆಳಕಿಗೆ ಬರುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ) ಅಕ್ರಮಗಳಿಗೆ ಕಡಿವಾಣ ಹಕ್ಕಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಈ ಸಂಬಂಧ ಆರ್‍ಬಿಐ ಈಗಾಗಲೇ ಬೆಂಗಳೂರು ಸೇರಿದಂತೆ ರಫ್ತು ವಹಿವಾಟು ನಡೆಸುವ ಕಂಪನಿಗಳು, ದೊಡ್ಡ ಉದ್ದಿಮೆಗಳು ಮತ್ತು ಬ್ಯಾಂಕ್‍ಗಳಿಗೆ ಪತ್ರ ಬರೆದಿದ್ದು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದೆ.

12,723 ಕೋಟಿ ರೂ. ಮೊತ್ತದ ಪಿಎನ್‍ಬಿ ಬ್ಯಾಂಕ್ ವಂಚನೆ ಪ್ರಕರಣ, ರೋಟಮ್ಯಾಕ್ ಪೆನ್ ಕಂಪನಿಯ ಅವ್ಯವಹಾರ, ದಾಸ್ ಇಂಟರ್‍ನ್ಯಾಷನಲ್ ಸಂಸ್ಥೆಯಿಂದ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‍ಗೆ ಸಾಲ ವಂಚಿಸಿದ ಹಗರಣ ಮೊದಲಾದವು ಬೆಳಕಿಗೆ ಬಂದ ಬೆನ್ನಲ್ಲೇ ಇಂಥ ಅಕ್ರಮಗಳು ಮತ್ತೆ ಮರುಕಳಿಸದಂತೆ ತಡೆಯಲು ಆರ್‍ಬಿಐ ಮುಂದಾಗಿದೆ.  ರಫ್ತು ಕಂಪನಿಗಳು, ಮಂಚೂಣಿಯಲ್ಲಿರುವ ಉದ್ದಿಮೆಗಳು ಮತ್ತು ಇಂಥ ಸಂಸ್ಥೆಗಳಿಗೆ ಸಾಲ ನೀಡುವ ಬ್ಯಾಂಕ್‍ಗಳು ಅನುಸರಿಸಬೇಕಾದ ನೀತಿ-ನಿಯಮ ಮತ್ತು ನಿಬಂಧನೆಗಳ ಬಗ್ಗೆ ಆರ್‍ಬಿಐ ಪತ್ರದಲ್ಲಿ ತಿಳಿಸಿದೆ.

ಅಲ್ಲದೇ ಆರ್‍ಬಿಐನ ಅಧಿಕಾರಿಗಳ ವಿಶೇಷ ತಂಡವೊಂದು ಈಗಾಗಲೇ ಕೆಲವು ಪ್ರತಿಷ್ಠಿತ ಸಂಸ್ಥೆಗಳು ಮತ್ತು ಪ್ರಮುಖ ರಾಷ್ಟ್ರೀಕೃತ ಸಂಸ್ಥೆಗಳಿಗೆ ಭೇಟಿ ನೀಡಿದ್ದು, ಅವುಗಳ ವಹಿವಾಟು ಮತ್ತು ವ್ಯವಹಾರಗಳನ್ನು ಪರಿಶೀಲನೆ ನಡೆಸಿದ್ದು, ಪಾಲಿಸಬೇಕಾದ ಸೂಚನೆಗಳ ಬಗ್ಗೆ ತಿಳಿಸಿವೆ. ಕಳಂಕಿತ ಉದ್ಯಮಿಗಳಾದ ಕಿಂಗ್‍ಫಿಶರ್ ವಿಜಯಮಲ್ಯ, ಡೈಮಂಡ್ ಕಿಂಗ್ ನೀರವ್ ಮೋದಿ ಮತ್ತು ಗೀತಾಂಜಲಿ ಗ್ರೂಪ್ ಅಧಿಪತಿ ಮೆಹುಲ್ ಚೋಕ್ಸಿ ಅವರಂಥ ಆರ್ಥಿಕ ಅಪರಾಧಿಗಳು ದೇಶದಿಂದ ಫಲಾಯನವಾಗಿರುವ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮಕ್ಕೆ ಆರ್ ಬಿಐ ಮುಂದಾಗಿದೆ.

ಪಿಎನ್‍ಬಿ ಹಗರಣದ ಬಗ್ಗೆ ಕೇಂಧ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಬ್ಯಾಂಕ್ ಅಧಿಕಾರಿಗಳೂ ಸಹ ಇಂಥ ಹಗರಣಗಳಲ್ಲಿ ಶಾಮೀಲಾಗುತ್ತಿರುವ ಕುರಿತು ಅವರು ಸಿಡಿಮಿಡಿಗೊಂಡ ಬೆನ್ನಲ್ಲೇ ಆರ್‍ಬಿಐ ಈ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin