40 ಎಲೆಕ್ಟ್ರಿಕ್ ಬಿಎಂಟಿಸಿ ಬಸ್‍ಗೆ ಚಾಲನೆ : ಸಾರಿಗೆ ಸಚಿವ ಎಚ್.ಎಂ.ರೇವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

Revanna--01

ಮಹದೇವಪುರ, ಮಾ.2- ಅತಿ ಶೀಘ್ರದಲ್ಲೇ ಬೆಂಗಳೂರಿಗೆ 40 ಎಲೆಕ್ಟ್ರಿಕ್ ಬಿಎಂಟಿಸಿ ಬಸ್‍ಗಳಿಗೆ ಚಾಲನೆ ನೀಡಲಾಗುವುದು ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಇಂದಿಲ್ಲಿ ಭರವಸೆ ನೀಡಿದರು. ಕ್ಷೇತ್ರದ ಮಂಡೂರಿನಲ್ಲಿ ಹೊಸದಾಗಿ ನಿರ್ಮಿಸಿರುವ ಬಿಎಂಟಿಸಿ ಘಟಕ ಹಾಗೂ ನೂತನ ಬಸ್ ಉದ್ಘಾಟಿಸಿ ಮಾತನಾಡಿದ ಅವರು, ನಗರದಲ್ಲಿ 72 ಲಕ್ಷ ವಾಗನಗಳಿದ್ದು, ಇದರಲ್ಲಿ 52 ಲಕ್ಷ ಸ್ವಂತ ವಾಹನಗಳಾಗಿವೆ. ಇದರಿಂದಾಗಿ ಬೆಂಗಳೂರಿನಲ್ಲಿ ವಾಯುಮಾಲಿನ್ಯ, ಶಬ್ಧಮಾಲಿನ್ಯ ಹೆಚ್ಚಾಗಿದ್ದು, ಎಲ್ಲರೂ ಸಾರಿಗೆ ಸಂಸ್ಥೆ ಬಸ್‍ಗಳಲ್ಲಿ ಸಂಚರಿಸುವಂತೆ ಮನವಿ ಮಾಡಿದರು.

ಹೆಣ್ಣು ಮಕ್ಕಳು ಬಿಎಂಟಿಸಿ ಬಸ್‍ನಲ್ಲಿ ಕುಳಿತುಕೊಳ್ಳುವ ಸೀಟುಗಳಿಗೆ ಪಿಂಕ್ ಸೀಟ್‍ಗಳನ್ನು ಅಳವಡಿಸಲಾಗುವುದು. ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಯಲು ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ ಎಂದರು. ಬೆಂಗಳೂರು ನಗರ ಅಭಿವೃದ್ಧಿಗೆ ಮುಖ್ಯಮಂತ್ರಿ ಹೆಚ್ಚು ಒತ್ತು ನೀಡಿದ್ದಾರೆ. ಅದೇ ರೀತಿ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಕರ್ತವ್ಯ. ನಮ್ಮ ಮೆಟ್ರೊ ಬಂದ ಮೇಲೆ ಬಿಎಂಟಿಸಿ ಬಸ್‍ಗಳು ಕಡಿಮೆಯಾಗಿಲ್ಲ. ಸಂಪರ್ಕ ಬಸ್‍ಗಳನ್ನು ಹೆಚ್ಚು ಹಾಕಲಾಗಿದೆ ಎಂದು ತಿಳಿಸಿದರು.

ವಾಗ್ವಾದ:
ಬಿಎಂಟಿಸಿ ಅಧ್ಯಕ್ಷ ಎಂ.ನಾಗರಾಜ್ ಯಾದವ್ ಸ್ವಾಗತ ಭಾಷಣ ಮಾಡುವ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ತಾಪಂ ಉಪಾಧ್ಯಕ್ಷೆ ಭಾಗ್ಯಮ್ಮ ಸತೀಶ್‍ರನ್ನು ಸ್ವಾಗತಿಸದ ಕಾರಣ ಬಿಜೆಪಿ ಕಾರ್ಯಕರ್ತರು ಗಲಾಟೆ ಮಾಡಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದರು. ಪೊಲೀಸರು ಮಧ್ಯ ಪ್ರವೇಶಿಸಿ ಗಲಾಟೆಯನ್ನು ಅತೋಟಿಗೆ ತಂದು ಕಾರ್ಯಕ್ರಮ ಮುಂದುವರೆಸಲು ಅನುವು ಮಾಡಿಕೊಟ್ಟರು. ಈ ವೇಳೆ ಮಾತನಾಡಿದ ಸಚಿವ ಎಚ್.ಎಂ.ರೇವಣ್ಣ, ಗಲಭೆಗೆ ಕ್ಷಮೆ ಕೋರುವೆ. ಇಲ್ಲಿ ರಾಜಕೀಯ ಮಾಡಬಾರದು, ಯಾವುದೇ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ತಾಳ್ಮೆ ಇರಬೇಕು ಎಂದು ಕಿವಿಮಾತು ಹೇಳಿದರು.

ಇದೇ ವೇಳೆ ನಾಲ್ಕು ಹೊಸ ಬಿಎಂಟಿಸಿ ಬಸ್‍ಗಳು ಸಾರ್ವಜನಿಕ ಸಂಚಾರಕ್ಕೆ ಲೋಕಾರ್ಪಣೆಯಾದವು. ಶಾಸಕ ಅರವಿಂದ ಲಿಂಬಾವಳಿ, ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ, ರಿಜ್ವಾನ್ ಅರ್ಷದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ಜಿಪಂ ಸದಸ್ಯ ಕೆಂಪರಾಜು, ಗ್ರಾಪಂ ಅಧ್ಯಕ್ಷ ಜನಾರ್ಧನ್‍ಗೌಡ, ತಾಪಂ ಉಪಾಧ್ಯಕ್ಷೆ ಭಾಗ್ಯಮ್ಮ ಸತೀಶ್, ಅಧಿಕಾರಿಗಳು, ಗ್ರಾಪಂ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Facebook Comments

Sri Raghav

Admin