ಇದೇ 9ರಿಂದ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಸ್ಥಗಿತ

ಈ ಸುದ್ದಿಯನ್ನು ಶೇರ್ ಮಾಡಿ

Saragovinda--02

ಬೆಂಗಳೂರು, ಮಾ.3- ಯುಎಫ್‍ಒ ಮತ್ತು ಕ್ಯೂಬ್‍ನೊಂದಿಗೆ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾತುಕತೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಇದೇ 9ರಿಂದ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಸ್ಥಗಿತಗೊಳ್ಳಲಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಯುಎಫ್‍ಒ (ಖಿಊu) ಮತ್ತು ಕ್ಯೂಬ್ (ಇಖಿಆಉ) ಡಿಜಿಟಲ್ ಸರ್ವೀಸ್ ಪ್ರವೈಡರ್ ಸಂಸ್ಥೆ ದಕ್ಷಿಣ ಭಾರತದ ಚಿತ್ರರಂಗದ ನಿರ್ಮಾಪಕರ ಬೇಡಿಕೆಗೆ ಸಮ್ಮತಿ ಸೂಚಿಸದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಈ ಸಂಸ್ಥೆಗಳು ನಿರ್ಮಾಪಕರಿಂದ ಪಡೆಯುವ ಒಟ್ಟು ಮೊತ್ತದಲ್ಲಿ ಶೇ.25ರಷ್ಟನ್ನು ಕಡಿಮೆ ಮಾಡುವಂತೆ ಕೋರಲಾಗಿತ್ತು. ಆದರೆ, ಸಂಸ್ಥೆ ಕೇವಲ ಶೇ.9ರಷ್ಟನ್ನು ಮಾತ್ರ ಕಡಿಮೆ ಮಾಡುವುದಾಗಿ ಹೇಳಿತ್ತು. ಈ ಸಂಬಂಧ ಮಾತುಕತೆಯೂ ನಡೆದಿತ್ತು. ಆದರೆ, ಸಂಸ್ಥೆ ಇದಕ್ಕೆ ಪೂರಕವಾಗಿ ಸ್ಪಂದಿಸದ ಕಾರಣ ಈಗಾಗಲೇ ದಕ್ಷಿಣ ಭಾರತದ ಉಳಿದ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಪಾಂಡಿಚೇರಿಗಳಲ್ಲಿ ಚಲನಚಿತ್ರ ಪ್ರದರ್ಶನ ಸ್ಥಗಿತಗೊಳಿಸಲಾಗಿದೆ ಎಂದು ವಿವರಿಸಿದರು.

ಈ ಸಂಸ್ಥೆಗಳು ಚಲನಚಿತ್ರಗಳ ಕಂಟೆಂಟ್ ಪಡೆದು ಸ್ಯಾಟಲೈಟ್‍ಗೆ ಅಪ್‍ಲೋಡ್ ಮಾಡುವ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆ ಸಾಕಷ್ಟು ಹೆಚ್ಚಿನ ಶುಲ್ಕ ಪಾವತಿಸಬೇಕಿದೆ. ಇದರಲ್ಲಿ ಕಡಿತಗೊಳಿಸುವಂತೆ ಸೂಚಿಸಿ ಶೇ.9ರಷ್ಟು ಪಡೆಯುವಂತೆ ಸೂಚಿಸಿದ್ದರೂ ಅದನ್ನು ಒಪ್ಪದ ಕಾರಣ ದಕ್ಷಿಣ ಭಾರತದ ಇತರೆ ರಾಜ್ಯಗಳು ಈಗಾಗಲೇ ಚಿತ್ರಪ್ರದರ್ಶನವನ್ನು ಸ್ಥಗಿತಗೊಳಿಸಿವೆ. ಕರ್ನಾಟಕದಲ್ಲಿ ಶುಲ್ಕ ಪಾವತಿಸಿದ್ದ ಕೆಲವೊಂದು ಚಿತ್ರಗಳ ಬಿಡುಗಡೆಯಾಗಿದ್ದರಿಂದ ಇದೇ 9 ರಿಂದ ಚಲನಚಿತ್ರ ಪ್ರದರ್ಶನ ಸ್ಥಗಿತಕ್ಕೆ ಕರೆ ನೀಡಲಾಗಿದೆ. ಈಗಾಗಲೇ ಪ್ರದರ್ಶನ ಕಾಣುತ್ತಿರುವ ಚಿತ್ರಗಳ ಪ್ರದರ್ಶನ ಮುಂದುವರಿಯಲಿದ್ದು, ಹೊಸ ಚಿತ್ರಗಳ ಪ್ರದರ್ಶನ ಸ್ಥಗಿತಗೊಳ್ಳಲಿದೆ.

ಮುಂದಿನ ವಾರ ತೆರೆ ಕಾಣಬೇಕಿದ್ದ ಯೋಗಿ ದುನಿಯಾ, ಇದಂ ಪ್ರೇಮಂ ಜೀವನಂ, ನಂಜುಂಡಿ ಕಲ್ಯಾಣ, ಓ ಪ್ರೇಮವೇ, ಶ್ರೀ, ಹೀಗೊಂದು ದಿನ, ಮುಖ್ಯಮಂತ್ರಿ ಕಳೆದೋದ್ನಪ್ಪೋ, ಸೋಜಿಗ ಚಿತ್ರಗಳು ತೆರೆ ಕಾಣಬೇಕಿತ್ತು. ಆದರೆ, ಈ ಚಿತ್ರಗಳ ನಿರ್ಮಾಪಕರ ಮನವೊಲಿಸಿ ಬಂದ್‍ಗೆ ಕರೆ ನೀಡಲು ಕೋರಿದ್ದರಿಂದ ಅವರು ಸಹಕರಿಸಿದ್ದಾರೆ. ಇದೇ 9 ರಿಂದ ಚಲನಚಿತ್ರಗಳ ಪ್ರದರ್ಶನ ಸಂಪೂರ್ಣ ಸ್ಥಗಿತಗೊಳ್ಳಲಿದೆ ಎಂದು ಮಾಹಿತಿ ಒದಗಿಸಿದರು.
ಪ್ರದರ್ಶನ ಮತ್ತೆ ಆರಂಭವಾದಾಗ ಮೊದಲಿಗೆ ಈಗ ಸ್ಥಗಿತಗೊಂಡಿರುವ ಈ ಎಂಟು ಚಿತ್ರಗಳಿಗೆ ಮೊದಲ ಆದ್ಯತೆ ನೀಡಿ ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು. ನಂತರ ಹಂತ ಹಂತವಾಗಿ ಉಳಿದ ಚಿತ್ರಗಳಿಗೆ ಅವಕಾಶ ನೀಡಲಾಗುವುದು ಎಂದು ಸಾ.ರಾ.ಗೋವಿಂದು ವಿವರಿಸಿದರು.

Facebook Comments

Sri Raghav

Admin