ಸುನಾಮಿ ಕಿಟ್ಟಿ ಸೇರಿ ನಾಲ್ವರು ಅಂದರ್ ಆಗಿದ್ದೇಕೆ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Tsunai-Kitti--01

ಬೆಂಗಳೂರು, ಮಾ.3- ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸುನಾಮಿ ಕಿಟ್ಟಿ ಸೇರಿದಂತೆ ನಾಲ್ವರನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಿಟ್ಟಿ ಅಲಿಯಾಸ್ ಸುನಾಮಿ ಕಿಟ್ಟಿ, ಅರ್ಜುನ್ ಅಲಿಯಾಸ್ ಮುತ್ತಪ್ಪ, ಯೋಗೇಶ್ ಮತ್ತು ಸಂತೋಷ್‍ನನ್ನು ಬಂಧಿಸಿರುವ ಪೊಲೀಸರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ 8 ಮಂದಿಗಾಗಿ ಶೋಧ ಮುಂದುವರಿಸಿದ್ದಾರೆ. ಸುನಾಮಿ ಕಿಟ್ಟಿ ಸೇರಿ 11 ಮಂದಿಯೊಂದಿಗೆ ಬಾರ್ ಅಂಡ್ ರೆಸ್ಟೋರೆಂಟ್‍ನ ಸಪ್ಲೈಯರ್ ಹಾಗೂ ಮತ್ತೊಬ್ಬ ಯುವಕನನ್ನು ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಞಾನಭಾರತಿ ಠಾಣೆ ಪೊಲೀಸರು ಇವರನ್ನು ಬಂಧಿಸಿದ್ದಾರೆ.

ಘಟನೆ ಹಿನ್ನೆಲೆ:
ಸುನಾಮಿ ಕಿಟ್ಟಿಯ ಸ್ನೇಹಿತ ಸುನಿಲ್ ಪತ್ನಿ ಜತೆ ತೌಶಿತ್ ಎಂಬಾತ ಕುಟೀರ ಪಾರ್ಕ್ ಲ್ಯಾಂಡ್ ಎಂಬ ಬಾರ್ ಅಂಡ್ ರೆಸ್ಟೋರೆಂಟ್‍ಗೆ ಊಟಕ್ಕೆಂದು ಫೆ.25ರಂದು ಸಂಜೆ ಹೋಗಿದ್ದಾಗ ಬಾರ್ ಸಪ್ಲೈಯರ್ ಗಿರೀಶ್ ಊಟ ಸಪ್ಲೈ ಮಾಡಿದ್ದನು. ಈ ವೇಳೆ ಇವರಿಬ್ಬರು ಅರ್ಧಂಬರ್ಧ ಊಟ ಮಾಡಿ ಬಿಲ್ ಕೊಡದೆ ಹೊರಟು ಹೋಗಿದ್ದರು. ತದನಂತರ ಗಿರೀಶ್‍ಗೆ ಮೊಬೈಲ್ ಕರೆ ಮಾಡಿ ತಾನು ಮಹಿಳೆ ಜತೆ ಊಟಕ್ಕೆ ಬಂದಿದ್ದ ವಿಚಾರ ಯಾರಿಗೂ ಹೇಳಬೇಡ. ಸ್ವಲ್ಪ ತೊಂದರೆಯಾಗಿದೆ. ನಿನಗೆ ಆಮೇಲೆ ಬಂದು ಬಿಲ್ ಕೊಡುತ್ತೇನೆ ಎಂದು ಹೇಳಿದ್ದಾನೆ.

ಸ್ನೇಹಿತನ ಪತ್ನಿ ಜತೆ ಹೋಗಿದ್ದ ವ್ಯಕ್ತಿಯ ವಿವರ ತಿಳಿದುಕೊಳ್ಳುವ ಸಲುವಾಗಿ ಸುನಾಮಿ ಕಿಟ್ಟಿ ತನ್ನ ಸಹಚರರೊಂದಿಗೆ ಸೇರಿಕೊಂಡು ಈ ಬಾರ್‍ನಲ್ಲಿ ಸಪ್ಲೈಯರ್ ಆಗಿದ್ದ ಗಿರೀಶ್ ಎಂಬಾತನನ್ನು ಫೆ.28ರಂದು ಮಧ್ಯಾಹ್ನ 3.45ರ ಸಮಯದಲ್ಲಿ ಅಪಹರಿಸಿ ಹೊರಮಾವು ಬಳಿಯ ತೋಟದ ಮನೆಗೆ ಕರೆದೊಯ್ದು ಅಲ್ಲಿ ತನ್ನ ಸ್ನೇಹಿತನ ಪತ್ನಿ ಜತೆ ಸಂಬಂಧ ಇಟ್ಟುಕೊಂಡಿದ್ದೀಯ ಎಂದು ಹೇಳಿ ಹಲ್ಲೆ ನಡೆಸಿದ್ದಾರೆ. ತಾನು ಆ ರೀತಿ ನಡೆದುಕೊಂಡಿಲ್ಲ. ನಾನು ಬಾರ್ ಸಪ್ಲೈಯರ್ ಅಷ್ಟೇ ಎಂದು ಹೇಳಿದರೂ ಕೇಳದೆ ಮೊಬೈಲ್‍ನಲ್ಲಿದ್ದ ಮಹಿಳೆಯ ಫೆÇೀಟೋ ತೋರಿಸಿ ಇವರು ನಿನಗೆ ಗೊತ್ತ ಎಂದು ಕೇಳಿದ್ದಾರೆ. ಈ ಮಹಿಳೆ ನಮ್ಮ ರೆಸ್ಟೋರೆಂಟ್‍ಗೆ ಊಟ ಮಾಡಲು ತೌಶಿತ್ ಎಂಬಾತನೊಂದಿಗೆ ಬರುತ್ತಿದ್ದರು ಎಂದು ಹೇಳಿದ್ದಾನೆ.

ಈ ಸಂದರ್ಭದಲ್ಲಿ ತೌಶಿತ್‍ನನ್ನು ಕರೆಸುವಂತೆ ಸುನಾಮಿ ಕಿಟ್ಟಿ ಕಡೆಯವರು ಬೆದರಿಕೆ ಹಾಕಿದ್ದಾರೆ. ತದನಂತರ ತೌಶಿತ್‍ಗೆ ದೂರವಾಣಿ ಕರೆ ಮಾಡಿ ಬಾರ್‍ಗೆ ಬಂದಿದ್ದಾಗ ಊಟ ಮಾಡಿದ ಬಾಕಿ ಬಿಲ್ ಹಣ ಕೊಡುವಂತೆ ಹೇಳಿದ್ದಾನೆ. ಅಂದು ರಾತ್ರಿ 10 ಗಂಟೆಗೆ ಗೊರಗುಂಟೆಪಾಳ್ಯ ಸಿಗ್ನಲ್ ಬಳಿ ಬಂದರೆ ಹಣ ಕೊಡುತ್ತೇನೆ ಎಂದು ತೌಶಿತ್ ಹೇಳಿದಾಗ ಅದರಂತೆ ಸುನಾಮಿ ಕಿಟ್ಟಿ ಹಾಗೂ ಈತನ ಜತೆಯಲ್ಲಿದ್ದವರು ಗಿರೀಶ್‍ನನ್ನು ಅದೇ ಕಾರಿನಲ್ಲಿ ಕರೆದುಕೊಂಡು ಹೋಗಿ ಪಿಸ್ತೂಲೊಂದನ್ನು ತೋರಿಸಿ ನಾವು ಹೇಳಿದಂತೆ ಕೇಳಬೇಕೆಂದು ಬೆದರಿಸಿದ್ದಾರೆ.

ಗೊರಗುಂಟೆಪಾಳ್ಯ ಸಿಗ್ನಲ್ ಬಳಿ ಹೋಗುತ್ತಿದ್ದಂತೆ ಅಲ್ಲೇ ಕಾಯುತ್ತ ನಿಂತಿದ್ದ ತೌಶಿತ್‍ನನ್ನು ಇವರೆಲ್ಲ ಸೇರಿ ಹಿಡಿದುಕೊಂಡು ಹಲ್ಲೆ ನಡೆಸಿ ಕಾರಿನಲ್ಲಿ ಅಪಹರಿಸಿ ಹೊರಮಾವು ಬಳಿ ಇರುವ ತೋಟದ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ತೌಶಿತ್‍ಗೆ ಹಿಗ್ಗಾಮುಗ್ಗ ಥಳಿಸಿ ಚಾಕುವಿನಿಂದ ಕೈ ಹಾಗೂ ಎದೆಗೆ ಇರಿದು ಗಾಯಗೊಳಿಸಿದ್ದರು.  ಅಲ್ಲದೆ, ತೌಶಿತ್ ಮೊಬೈಲ್‍ನಲ್ಲಿದ್ದ ಮೆಸೇಜ್‍ಗಳನ್ನು ನೋಡಿ ಪಿಸ್ತೂಲನ್ನು ಆತನ ತಲೆಗೆ ಇಟ್ಟು ಈ ಮಹಿಳೆಗೂ ನಿನಗೂ ಏನು ಸಂಬಂಧ ಎಂದು ಹೇಳದಿದ್ದರೆ ಕೊಲೆ ಮಾಡುವುದಾಗಿ ಸುನಾಮಿ ಕಿಟ್ಟಿಯ ಸ್ನೇಹಿತ ಸುನಿಲ್ ಬೆದರಿಸಿದ್ದಾನೆ.  ಈ ವೇಳೆ ತೌಶಿತ್, ನಾನು ಹಾಗೂ ಈ ಮಹಿಳೆ ಸ್ನೇಹಿತರಷ್ಟೆ. ಆಕೆಗೆ ಮದುವೆಯಾಗಿರುವ ವಿಚಾರ ನನಗೆ ಗೊತ್ತಿರಲಿಲ್ಲ. ತಾವಿಬ್ಬರೂ ಸ್ನೇಹಿತರಂತಿದ್ದೇವೆ ಎಂದು ಹೇಳಿದ್ದಾನೆ.

ಈ ಸಂದರ್ಭದಲ್ಲಿ ಗಿರೀಶ್ ಬಳಿ ಇದ್ದ 10 ಸಾವಿರ ಹಣ ಕಿತ್ತುಕೊಂಡು ಇಲ್ಲಿ ನಡೆದ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಕೇವಲ 100ರೂ. ಮಾತ್ರ ಕೊಟ್ಟು ಈತನನ್ನು ಬಿಟ್ಟಿದ್ದಾರೆ. ಗಿರೀಶ್ ಬಾರ್ ಹುಡುಗರಿಗೆ ಕರೆ ಮಾಡಿ ಹೊರಮಾವು ಬಳಿ ಕರೆಸಿಕೊಂಡು ವಾಪಸಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತದನಂತರ ಜ್ಞಾನಭಾರತಿ ಠಾಣೆಗೆ ಬಂದು ತನಗೆ ಜೀವಬೆದರಿಕೆ ಇದ್ದು, ಸುನಾಮಿ ಕಿಟ್ಟಿ ಹಾಗೂ ಇನ್ನಿತರರ ವಿರುದ್ಧ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡಿದ್ದ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸುನಾಮಿ ಕಿಟ್ಟಿ ಸೇರಿ ನಾಲ್ವರನ್ನು ಬಂಧಿಸಿದ್ದು, ಇನ್ನುಳಿದವರಿಗಾಗಿ ತನಿಖೆ ಮುಂದುವರಿಸಿದ್ದಾರೆ. ತೌಶಿತ್‍ನನ್ನು ಅಪಹರಿಸಿ ಫಾರಂಹೌಸ್‍ಗೆ ಕರೆದೊಯ್ದು ಬೆದರಿಸಿ ಬಿಟ್ಟು ಕಳುಹಿಸಿರುವುದಾಗಿ ಆರೋಪಿಗಳು ಹೇಳಿದ್ದಾರೆ. ತೌಶಿತ್ ತಮಗಿನ್ನೂ ಸಿಕ್ಕಿಲ್ಲ. ಈತ ಯಾರು, ಯಾವ ವೃತ್ತಿ ಮಾಡುತ್ತಿದ್ದಾರೆ ಎಂಬಿತ್ಯಾದಿ ಮಾಹಿತಿಗಳನ್ನು ಕಲೆ ಹಾಕುತ್ತಿದ್ದೇವೆ. ಆರೋಪಿಗಳು ತೌಶಿತ್ ಮೊಬೈಲ್ ಕಿತ್ತುಕೊಂಡಿದ್ದರಿಂದ ಆತ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಜ್ಞಾನಭಾರತಿ ಠಾಣೆ ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.

Facebook Comments

Sri Raghav

Admin