ಯಡಿಯೂರಪ್ಪ-ಈಶ್ವರಪ್ಪ ನಡುವೆ ಮತ್ತೆ ಶುರುವಾಗಿದೆ ಡಿಶುಂ ಡಿಶುಂ

ಈ ಸುದ್ದಿಯನ್ನು ಶೇರ್ ಮಾಡಿ

Eshwarappa--01

ಬೆಂಗಳೂರು,ಮಾ.4-ಇನ್ನೇನು ಬಿಜೆಪಿಯಲ್ಲಿ ಎಲ್ಲವೂ ಮುಗಿದು ನಾಯಕರೆಲ್ಲರೂ ಒಗ್ಗಟ್ಟಿನಿಂದ ಚುನಾವಣೆಗೆ ಹೋಗಲಿದ್ದಾರೆ ಎನ್ನುವಾಗಲೇ ಪುನಃ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ. ಶಿವಮೊಗ್ಗನಗರದಿಂದ ಯಡಿಯೂರಪ್ಪ ತಮಗೆ ಟಿಕೆಟ್ ತಪ್ಪಿಸಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎಂಬ ಸುಳಿವು ಅರಿತಿರುವ ಈಶ್ವರಪ್ಪ, ರಾಜ್ಯಾಧ್ಯಕ್ಷರ ವಿರುದ್ದ ಎರಡನೇ ಹಂತದ ನಾಯಕರನ್ನು ಎತ್ತಿಕಟ್ಟುವ ಕೆಲಸಕ್ಕೆ ಮುಂದಾಗಿದ್ದಾರೆ.

ಇದಕ್ಕೆ ಮುನ್ನುಡಿ ಎಂಬಂತೆ ಸಾಗರದಿಂದ ಯಡಿಯೂರಪ್ಪ ತಮ್ಮ ಆಪ್ತ ಮಾಜಿ ಸಚಿವ ಹರತಾಳ್ ಹಾಲಪ್ಪನಿಗೆ ಟಿಕೆಟ್ ನೀಡಲಾಗುವುದು ಎಂದು ಕಳೆದ ವಾರವೇ ಘೋಷಣೆ ಮಾಡಿದ್ದರು.  ಇದನ್ನೇ ಮುಂದಿಟ್ಟುಕೊಂಡಿರುವ ಕೆ.ಎಸ್.ಈಶ್ವರಪ್ಪ , ಯಡಿಯೂರಪ್ಪ ವಿರುದ್ದ ಸಾಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಗೋಪಾಲ್ ಕೃಷ್ಣ ಬೇಳೂರು ಅವರನ್ನು ಎತ್ತಿಕಟ್ಟುತ್ತಿದ್ದಾರೆ. ಇನ್ನು ಹೊನ್ನಾಳಿಯಿಂದ ಬಿಎಸ್‍ವೈ ತಮ್ಮ ಬಲಗೈ ಬಂಟ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರಿಗೆ ಟಿಕೆಟ್ ಘೋಷಿಸಿದ್ದಾರೆ. ಆದರೆ ಈಶ್ವರಪ್ಪ ಈ ಕ್ಷೇತ್ರದಿಂದ ಮಾಜಿ ಸಚಿವ ಡಾ.ಡಿ.ಬಿ.ಗಂಗಪ್ಪಗೆ ಟಿಕೆಟ್ ಕೊಡಿಸಲು ಮುಂದಾಗಿದ್ದಾರೆ.

ಇದೇ ರೀತಿ ತುಮಕೂರಿನಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಾಜಿ ಸಂಸದ ಜೆ.ಎಚ್.ಬಸವರಾಜ್ ಅವರ ಪುತ್ರ ಜ್ಯೋತಿ ಗಣೇಶ್‍ಗೆ ಟಿಕೆಟ್ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.  ಇಲ್ಲಿಯೂ ಈಶ್ವರಪ್ಪ ಮಾಜಿ ಸಂಸದ ಸೊಗಡು ಶಿವಣ್ಣಗೆ ಟಿಕೆಟ್ ನೀಡಬೇಕೆಂದು ವರಿಷ್ಠರ ಮೇಲೆ ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆ.  ಎಲ್ಲೆಲ್ಲಿ ಯಡಿಯೂರಪ್ಪ ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸಲು ಮುಂದಾಗಿದ್ದಾರೋ ಅಂತಹ ಕಡೆ ಈಶ್ವರಪ್ಪ ಪಕ್ಷ ನಿಷ್ಠರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆಯನ್ನು ವರಿಷ್ಠರ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ಯಡಿಯೂರಪ್ಪ ವಿರುದ್ದ ಪಕ್ಷ ನಿಷ್ಠರನ್ನು (ಟಿಕೆಟ್ ವಂಚಿತರಾಗುವವರನ್ನು) ಎತ್ತಿ ಕಟ್ಟಿದರೆ ಕಡೆಪಕ್ಷ ವರಿಷ್ಠರು ತಮಗೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದಲಾದರೂ ಟಿಕೆಟ್ ನೀಡಬಹುದೆಂಬುದು ಈಶ್ವರಪ್ಪನವರ ಲೆಕ್ಕಾಚಾರ.  ಇದಕ್ಕಾಗಿಯೇ ಕಳೆದ ವಾರ ಇದ್ದಕ್ಕಿದ್ದಂತೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮುಖಂಡರ ಸಭೆ ನಡೆಸಲು ಪರೋಕ್ಷವಾಗಿ ಸೂಚನೆ ನೀಡಿದ್ದರು.  ಪುನಃ ಬ್ರಿಗೇಡ್ ಚಟುವಟಿಕೆ ಆರಂಭವಾಗಬಹುದೆಂಬ ಭೀತಿಯಿಂದಾಗಿ ಬ್ರಿಗೇಡ್ ಮುಖಂಡರ ಜೊತೆ ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ಈಶ್ವರಪ್ಪನವರ ಜೊತೆ ಮಾತುಕತೆ ನಡೆಸಿದಾಗ ಟಿಕೆಟ್ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟರು.

ಸಮೀಕ್ಷೆ ಆಧಾರದ ಮೇಲೆ ಟಿಕೆಟ್ ನೀಡಲಾಗುತ್ತದೆ ಎಂದು ವರಿಷ್ಠರು ಪದೇ ಪದೇ ಹೇಳುತ್ತಿದ್ದರೂ ಗಲಿಬಿಲಿಗೊಂಡಿರುವ ಈಶ್ವರಪ್ಪ, ಯಡಿಯೂರಪ್ಪ ವಿರೋಧಿಗಳನ್ನು ಎತ್ತಿಕಟ್ಟುವ ಮೂಲಕ ಪಕ್ಷದಲ್ಲಿ ತಮ್ಮ ಸ್ಥಾನವನ್ನು ಭದ್ರ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.  ಆದರೆ ಯಡಿಯೂರಪ್ಪ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ವರಿಷ್ಠರು ನೀಡಿರುವ ಸೂಚನೆಯನ್ನು ಪಾಲನೆ ಮಾಡುತ್ತಿದ್ದಾರೆ.   ಇದೀಗ ತ್ರಿಪುರ ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದರಿಂದ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕೆಂಬುದು ವರಿಷ್ಠರ ಮಹದಾಸೆ. ಇಂಥ ಸಂದರ್ಭದಲ್ಲಿ ಈಶ್ವರಪ್ಪ ತಮ್ಮ ಹಳೇ ಹೊರಸೆಯನ್ನು ತೆಗೆದರೆ ಕೇಂದ್ರ ನಾಯಕರು ತಲೆಕೆಡಿಸಿಕೊಳ್ಳುವ ವ್ಯವದಾನದಲ್ಲಿಲ್ಲ.  ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಎಂಬ ದೈತ್ಯಗಳಿರುವಾಗ ಈಶ್ವರಪ್ಪನವರ ಬಂಡಾಯಕ್ಕೆ ಮಣಿಯುವ ಪ್ರಶ್ನೆಯಿಲ್ಲ ಎಂಬ ಸಂದೇಶವನ್ನು ತಮ್ಮ ಆಪ್ತರ ಮೂಲಕ ಬಿಎಸ್‍ವೈ ಮುಟ್ಟಿಸಿದ್ದಾರೆ.

Facebook Comments

Sri Raghav

Admin