ಜನರಿಗೆ ಜೆಡಿಎಸ್‍ನ ಜನಪರ ಆಡಳಿತ ಮನವರಿಕೆ ಮಾಡಿ : ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

HD-Kumaraswamy--01

ಬೆಂಗಳೂರು, ಮಾ.7-ಕೆರೆಕಟ್ಟೆಗಳನ್ನು ನುಂಗಿ ಹಾಕಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್-ಬಿಜೆಪಿಯ ದುರಾಡಳಿತ ಮನವರಿಕೆ ಮಾಡಿಕೊಟ್ಟು ಬೆಂಗಳೂರಿಗೆ ಜೆಡಿಎಸ್ ನೀಡಿರುವ ಕೊಡುಗೆಯನ್ನು ಜನರಿಗೆ ತಿಳಿಸಬೇಕಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಕಾರ್ಯಕರ್ತರಿಗೆ ಕರೆ ನೀಡಿದರು. ನಗರದ ಯಡಿಯೂರು ಗಣೇಶ ದೇವಸ್ಥಾನದಲ್ಲಿ ವಿಕಾಸಪರ್ವದ ಅಂಗವಾಗಿ ಹಮ್ಮಿಕೊಂಡಿರುವ ಪಾದಯಾತ್ರೆಗೂ ಮುನ್ನ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಈ ಚುನಾವಣೆ ಸತ್ವ ಪರೀಕ್ಷೆಯಾಗಿದೆ. ಜೆಡಿಎಸ್ ಬೆಂಗಳೂರಿನ ನಾಗರಿಕರಿಗೆ ನೀಡಿರುವ ಕೊಡುಗೆಗಳನ್ನು ಮನೆ ಮನೆಗೆ ತಲುಪಿಸಿ ಎಂದರು.

ಇಂದು ಹಮ್ಮಿಕೊಳ್ಳಲಾಗಿದ್ದ ಬೃಹತ್ ರೋಡ್‍ಶೋ ನಡೆಸದಂತೆ ತಾಕೀತು ಮಾಡಿದ ಅವರು ರೋಡ್‍ಶೋ ನಡೆಸಿ ಜನರಿಗೆ ತೊಂದರೆ ನೀಡಬೇಡಿ. ಬದಲಿಗೆ ಮನೆ ಮನೆಗೆ ತೆರಳಿ ಮತದಾರರಿಗೆ ಜೆಡಿಎಸ್ ಕೆಲಸಗಳನ್ನು ತಲುಪಿಸಿ. ಜನಸಂದಣಿ ಇರುವ ಪಾರ್ಕ್, ದೇವಸ್ಥಾನ, ಮಾರುಕಟ್ಟೆ ಸಮೀಪ ಜನರನ್ನು ಸಂಪರ್ಕಿಸಿ. ನಮ್ಮ ಅಧಿಕಾರಾವಧಿಯಲ್ಲಿನ ಜನಪರ ಕೆಲಸಗಳನ್ನು ತಿಳಿಸಿ ಎಂದು ಸಲಹೆ ಮಾಡಿದರು. ಮೆಟ್ರೋ ಯೋಜನೆಗೆ ಗುದ್ದಲಿ ಪೂಜೆಯಾಗಿದ್ದು, ನಮ್ಮ ಕಾಲದಲ್ಲಿ. ಆದರೆ ಬೆಂಗಳೂರಿಗೆ ಜೆಡಿಎಸ್ ಏನು ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಏಳು ನಗರಸಭೆಗಳನ್ನು ಸೇರ್ಪಡೆಗೊಳಿಸಿ ಬೃಹತ್‍ಬೆಂಗಳೂರು ಮಹಾನಗರ ಪಾಲಿಕೆ ಮಾಡಿದ್ದೇ ನಮ್ಮ ಅವಧಿಯಲ್ಲಿ.

ಕುಮಾರಸ್ವಾಮಿ ಲೇಔಟ್ ಸೇರಿದಂತೆ ನೂತನ ಬಡಾವಣೆಗಳಿಗೆ ಒಳಚರಂಡಿ ವ್ಯವಸ್ಥೆಯಂತಹ ಮೂಲಭೂತ ವ್ಯವಸ್ಥೆ ಕಲ್ಪಿಸಿದ್ದೆವು. 400 ಕೋಟಿ ರೂ. ವೆಚ್ಚದಲ್ಲಿ ನಗರದಲ್ಲಿ ಟಿಟಿಎಂಸಿ ನಿಲ್ದಾಣಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದೆವು. ಆದರೆ ಮುಂದೆ ಅಧಿಕಾರಕ್ಕೆ ಬಂದ ಬಿಜೆಪಿಯ ಅಶೋಕ ಚಕ್ರವರ್ತಿ 800 ಕೋಟಿಗೆ ಇದರ ವೆಚ್ಚವನ್ನು ಏರಿಸಿದ್ದರು. ಆದರೂ ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಅವರಿಗೆ ನಾಚಿಕೆಯಾಗಬೇಕು. ಭ್ರಷ್ಟಾಚಾರಕ್ಕೆ ವೇದಿಕೆ ರೂಪಿಸಿದವರೇ ಅವರು. ಕೆರೆಕಟ್ಟೆಗಳನ್ನು ನುಂಗಿ ಹಾಕಿದರು. ಚಿಕ್ಕಲ್ಲಸಂದ್ರ ಕೆರೆಯನ್ನು ಯಾರು ನುಂಗಿ ಹಾಕಿದರು ಹೇಳಿ ಎಂದು ಪ್ರಶ್ನಿಸಿದರು.

ಬಿಜೆಪಿಯವರಿಗೆ ಕಸ ತೆಗೆಯುವ ಯೋಗ್ಯತೆ ಇಲ್ಲ. ಸ್ಟೀಲ್‍ಬ್ರಿಡ್ಜ್ ಯೋಜನೆಯಲ್ಲಿ ವಿವಾದ ಮಾಡಿದ್ದರಿಂದ ರದ್ದಾಗಿದೆ. ಈಗ ಆ ಭಾಗದ ಜನರ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರವೇನು? ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದ ಜನರು ಪಕ್ಷದ ಪರವಾಗಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಬೆಂಗಳೂರಿನ ಕೊಳಚೆ ಪ್ರದೇಶಗಳಲ್ಲಿನ 50 ಲಕ್ಷ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವ ಯೋಜನೆ ರೂಪಿಸಿದ್ದು, ನೀಲನಕ್ಷೆಯೂ ಸಿದ್ಧವಾಗಿದೆ. ಏನು ಮಾಡಿದ್ದೇವೆ, ಏನು ಮಾಡುತ್ತೇವೆ ಎಂಬುದು ಜನರಿಗೆ ಗೊತ್ತಾಗುತ್ತದೆ ಎಂದು ಹೇಳಿದರು.  ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಕಬಡ್ಡಿ ಬಾಬು, ಆರ್.ಪ್ರಕಾಶಂ, ಬಸವನಗುಡಿ ಕ್ಷೇತ್ರದ ಅಭ್ಯರ್ಥಿ ಬಾಗೇಗೌಡ, ಪದ್ಮನಾಭನಗರ ಕ್ಷೇತ್ರದ ಅಭ್ಯರ್ಥಿ ವಿ.ಕೆ.ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin