ಕಾವೇರಿ ನೀರು ಹಂಚಿಕೆ ಅಂತಿಮ ತೀರ್ಪು ಕುರಿತು ಚರ್ಚಿಸಲು ಸಂಜೆ ಸರ್ವಪಕ್ಷಗಳ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

All-Party-Meeting
ಬೆಂಗಳೂರು, ಮಾ.8- ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ಅಂತಿಮ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಕುರಿತು ಚರ್ಚಿಸಲು ಇಂದು ಸಂಜೆ ಸರ್ವಪಕ್ಷ ಸಭೆ ಕರೆಯಲಾಗಿದೆ. ಸಂಜೆ 4 ಗಂಟೆಗೆ ವಿಧಾನಸೌಧದ ಮೂರನೆ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ವಿಧಾನಮಂಡಲದ ಉಭಯ ಸದನಗಳ ವಿರೋಧ ಪಕ್ಷದ ನಾಯಕರು, ಕಾವೇರಿ ಜಲಾನಯನ ಪ್ರದೇಶದ ಶಾಸಕರು, ಸಂಸದರು, ಕಾನೂನು ತಜ್ಞರು ಭಾಗವಹಿಸಲಿದ್ದಾರೆ.

ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚಿಸಬಾರದು ಎಂಬ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಸಲಹೆ ಪಡೆಯಲು ಸರ್ಕಾರ ತೀರ್ಮಾನಿಸಿದ್ದು, ಈ ಕುರಿತು ಸರ್ವಪಕ್ಷ ಸಭೆಯಲ್ಲಿ ಚರ್ಚಿಸಲಾಗುತ್ತದೆ.
ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಫೆ.16ರಂದು ನೀಡಿರುವ ತೀರ್ಪಿನ ಬಗ್ಗೆ ಚರ್ಚಿಸಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ ತೆಗೆದುಕೊಂಡು ನಂತರ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಲಾಗುವುದು ಎಂದು ತಿಳಿದು ಬಂದಿದೆ. ಸುಪ್ರೀಂಕೋರ್ಟ್‍ನಿಂದ ರಾಜ್ಯಕ್ಕಾಗಿರುವ ನಷ್ಟವೇನು, ತೀರ್ಪಿನಲ್ಲಿರುವ ಮಾರಕ ಹಾಗೂ ಪೂರಕ ಅಂಶಗಳೇನು ಎಂಬುದರ ಬಗ್ಗೆ ಚರ್ಚಿಸಲಾಗುತ್ತದೆ.

Facebook Comments

Sri Raghav

Admin