ದಯಾಮರಣಕ್ಕೆ ಅನುಮತಿ ನೀಡಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಈ ಸುದ್ದಿಯನ್ನು ಶೇರ್ ಮಾಡಿ

Supreme_Court_of_India_-_Retouched
ನವದೆಹಲಿ, ಮಾ.9- ದೀರ್ಘಕಾಲದಿಂದಲೂ ತೀವ್ರ ಚರ್ಚೆ ಮತ್ತು ಪರ-ವಿರೋಧ ಅಭಿಪ್ರಾಯಗಳಿಗೆ ಕಾರಣವಾಗಿದ್ದ ದಯಾಮರಣಕ್ಕೆ ಸುಪ್ರೀಂಕೋರ್ಟ್ ಇಂದು ಅನುಮತಿ ನೀಡಿ ಮಹತ್ವದ ತೀರ್ಪು ಪ್ರಕಟಿಸಿದೆ. ಇದರೊಂದಿಗೆ ಪಾಶ್ಚಾತ್ಯ ದೇಶಗಳಲ್ಲಿ ಜಾರಿಯಲ್ಲಿರುವ ದಯಾಮರಣ ಭಾರತದಲ್ಲೂ ಚಾಲನೆಗೆ ಬರುವ ಕಾಲ ಸನ್ನಿಹಿತವಾಗಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ನ್ಯಾಯಾಧೀಶರ ಸಂವಿಧಾನ ಪೀಠ ಇಂದು ಈ ಮಹತ್ವದ ತೀರ್ಪು ಘೋಷಿಸಿದೆ.

ನಿಷ್ಕ್ರಿಯ ದಯಾಮರಣಕ್ಕಾಗಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ರೋಗಿಗಳು ದಯಾಮರಣಕ್ಕೆ ಮನವಿ ಮಾಡುವುದನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿದೆ. ಈ ಪ್ರಕರಣ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಗೌರವದಿಂದ ನಿಧನರಾಗುವುದು ಮಾನವನ ಮೂಲಭೂತ ಹಕ್ಕು ಎಂದು ಹೇಳಿತು.
ದಯಾಮರಣಕ್ಕೆ ಹಲವು ಮಾರ್ಗಸೂಚಿಗಳನ್ನು ಅನುಸರಿಸುವುದು ಅಗತ್ಯವಿದೆ. ಇವುಗಳನ್ನು ರೂಪಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಮಾರ್ಗಸೂಚಿಗಳನ್ವಯ ಕಾನೂನು ರೂಪಿಸಬೇಕು. ಅದರಲ್ಲಿನ ಸಾಧಕ-ಬಾಧಕಗಳನ್ನು ಪರಿಗಣಿಸಿದ ನಂತರ ದಯಾಮರಣ ಜಾರಿ ಬಗ್ಗೆ ಪರಿಶೀಲಿಸಬಹುದು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ದಯಾಮರಣವನ್ನು ಯಾರು ಕಾರ್ಯಗತಗೊಳಿಸಬೇಕು, ಇದರಲ್ಲಿ ವೈದ್ಯರ ಪಾತ್ರವೇನು ಎಂಬಿತ್ಯಾದಿ ವಿಷಯಗಳ ಬಗ್ಗೆ ಮಾರ್ಗಸೂಚಿಗಳು ಮತ್ತು ನಿರ್ದೇಶನಗಳನ್ನು ರೂಪಿಸಬೇಕಿದೆ. ಆನಂತರ ಈ ಸಂಬಂಧ ಮಸೂದೆಯೊಂದನ್ನು ಜಾರಿಗೊಳಿಸಬೇಕಿದೆ ಎಂದು ಐವರು ನ್ಯಾಯಾಧೀಶರ ಸಂವಿಧಾನ ಪೀಠ ಹೇಳಿದೆ.
ಇದೊಂದು ಗಂಭೀರ ವಿಷಯ. ಹಲವು ಷರತ್ತುಗಳೊಂದಿಗೆ ಇದನ್ನು ಕಾರ್ಯಗತಗೊಳಿಸಬೇಕು. ಇದು ದುರುಪಯೋಗವಾಗದಂತೆ ಕಾನೂನು ಕ್ರಮ ಕೈಗೊಳ್ಳಬೇಕು.

ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ಮತ್ತು ದಯಾಮರಣಕ್ಕೆ ಅರ್ಹರಾಗಿರುವ ವ್ಯಕ್ತಿಗಳು ಲಿಖಿತ ರೂಪದಲ್ಲಿ ಮನವಿ ಸಲ್ಲಿಸಬೇಕು. ಆಸ್ಪತ್ರೆಗಳಲ್ಲಿ ಜೀವ ರಕ್ಷಕ ವ್ಯವಸ್ಥೆಯಲ್ಲಿರುವ ಮತ್ತು ಮರಣ ಶಯ್ಯೆಯಲ್ಲಿರುವ ಮಂದಿಗೆ ಇದನ್ನು ಜಾರಿಗೊಳಿಸುವ ಸಂಬಂಧ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.

Facebook Comments

Sri Raghav

Admin