ರಾಜ್ಯಸಭೆ ಚುನಾವಣೆ : ಜೆಡಿಎಸ್ ನಿಂದ ಬಿ.ಎಂ.ಫಾರೂಕ್ ನಾಮಪತ್ರ ಸಲ್ಲಿಕೆ

ಈ ಸುದ್ದಿಯನ್ನು ಶೇರ್ ಮಾಡಿ

JDS-Nomi

ಬೆಂಗಳೂರು, ಮಾ.9- ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಜೆಡಿಎಸ್ ರಾಷ್ಟ್ರೀಯ ಮಹಾ ಪ್ರಧಾನಕಾರ್ಯದರ್ಶಿ ಬಿ.ಎಂ.ಫಾರೂಕ್ ಇಂದು ನಾಮಪತ್ರ ಸಲ್ಲಿಸಿದರು. ಚುನಾವಣಾ ಅಧಿಕಾರಿಯೂ ಆಗಿರುವ ವಿಧಾನಸಭೆ ಕಾರ್ಯದರ್ಶಿ ಮೂರ್ತಿ ಅವರಿಗೆ ಫಾರೂಕ್ ತಮ್ಮ ನಾಮಪತ್ರ ಸಲ್ಲಿಸಿದರು.  ಕಳೆದ ಬಾರಿಯೂ ಜೆಡಿಎಸ್ ಅಭ್ಯರ್ಥಿಯಾಗಿ ಫಾರೂಕ್ ಸ್ಪರ್ಧಿಸಿ ಪರಾಭವಗೊಂಡಿದ್ದರು. ಮತ್ತೆ ಜೆಡಿಎಸ್ ಅಭ್ಯರ್ಥಿಯಾಗಿ ಈ ಬಾರಿ ರಾಜ್ಯಸಭೆ ಚುನಾವಣಾ ಕಣಕ್ಕಿಳಿದಿದ್ದಾರೆ. ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕೂ ಸ್ಥಾನಗಳಿಗೆ ಮಾ.23ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಸೋಮವಾರ ಕಡೆಯ ದಿನವಾಗಿದೆ. ಆದರೂ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ತಮ್ಮ ಅಭ್ಯರ್ಥಿಗಳು ಯಾರೆಂಬುದನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.

ವಿಧಾನಸಭೆಯಲ್ಲಿ ರಾಜಕೀಯ ಪಕ್ಷಗಳು ಹೊಂದಿರುವ ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್ 2 ಹಾಗೂ ಬಿಜೆಪಿ 1 ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದಾಗಿದೆ. ಆದರೆ, ಜೆಡಿಎಸ್ ಒಂದು ಸ್ಥಾನ ಹಾಗೂ ಕಾಂಗ್ರೆಸ್ 3ನೆ ಸ್ಥಾನ ಪಡೆಯಲು ಕಷ್ಟಪಡಬೇಕಾಗಿದೆ. ಫಾರೂಕ್ ಅವರು ಇಂದು ಮಧ್ಯಾಹ್ನ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ.ರೇವಣ್ಣ ಸೇರಿದಂತೆ ಜೆಡಿಎಸ್‍ನ ಹಲವು ಶಾಸಕರು ಉಪಸ್ಥಿತರಿದ್ದರು.

ವಿಧಾನಸಭೆ ಸಚಿವಾಲಯದ ಮಾಹಿತಿ ಪ್ರಕಾರ ಒಟ್ಟು 224 ಶಾಸಕರಲ್ಲಿ ಕಾಂಗ್ರೆಸ್ -122, ಬಿಜೆಪಿ-43, ಜೆಡಿಎಸ್-37, ಬಿಎಸ್‍ಆರ್ ಕಾಂಗ್ರೆಸ್-3, ಕೆಜೆಪಿ-2, ಕೆಎಂಪಿ-1, ಪಕ್ಷೇತ್ರ-8, ಸಭಾಧ್ಯಕ್ಷರು-1 ಸೇರಿದಂತೆ ಒಟ್ಟು 217 ಶಾಸಕರಿದ್ದಾರೆ. ಏಳು ಸ್ಥಾನಗಳು ಖಾಲಿ ಉಳಿಸಿವೆ. ಕಳೆದ ಬಾರಿ ರಾಜ್ಯಸಭೆ ಚುನಾವಣೆಯಲ್ಲಿ ವ್ಹಿಫ್ ಉಲ್ಲಂಘಿಸಿದ ಆರೋಪದ ಮೇಲೆ ಜೆಡಿಎಸ್‍ನ 7 ಮಂದಿ ಶಾಸಕರು ಈಗಾಗಲೇ ಅಮಾನತುಗೊಂಡಿದ್ದಾರೆ.
ಬಿಎಸ್‍ಆರ್ ಕಾಂಗ್ರೆಸ್‍ನ ಪಿ.ರಾಜೀವ್, ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಈಗಾಗಲೇ ಬಿಜೆಪಿ ಸೇರಿದ್ದಾರೆ. ಕೆಎಂಪಿಯ ಅಶೋಖ್‍ಖೇಣಿ ಕಾಂಗ್ರೆಸ್‍ಗೆ ಸೇರ್ಪಡೆಗೊಂಡಿರುವುದರಿಂದ ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷಗಳ ಬಲಾಬಲಗಳು ಏರಿಳಿತ ಉಂಟಾಗಲಿವೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin