22ರಿಂದ ಮೆಟ್ರೋ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಈ ಸುದ್ದಿಯನ್ನು ಶೇರ್ ಮಾಡಿ

Namma-Metro--01

ಬೆಂಗಳೂರು, ಮಾ.9 – ಬಿಎಂಆರ್‍ಸಿಎಲ್ ನೌಕರರ ಸಂಘಕ್ಕೆ ಮಾನ್ಯತೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದರೆ ಇದೇ 22ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಗುವುದು ಎಂದು ಸಂಘದ ಕಾರ್ಯದರ್ಶಿ ಸೂರ್ಯನಾರಾಯಣಮೂರ್ತಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಂಆರ್‍ಸಿಎಲ್ ಆಡಳಿತ ಮಂಡಳಿ ನೌಕರರ ಸಂಘದ ಮಾನ್ಯತೆಗೆ ಅವಶ್ಯಕತೆ ಇರುವ ಎಲ್ಲಾ ದಾಖಲೆಗಳನ್ನು ಈಗಾಗಲೇ ಸಲ್ಲಿಸಲಾಗಿದೆ. ಕಾರ್ಮಿಕ ಸಂಘಗಳ ಕಾಯ್ದೆ ಅನ್ವಯ ಮೆಟ್ರೋ ಕಾರ್ಮಿಕರು ಎಂದು ಪರಿಗಣಿಸಲಾಗಿದೆ. ಕಾರ್ಮಿಕ ಸಂಘಗಳ ಕಾಯ್ದೆಗೆ ಅನುಗುಣವಾಗಿ ತಮ್ಮ ಸಂಘವನ್ನು ಈಗಾಗಲೇ ನೋಂದಣಿ ಮಾಡಲಾಗಿದೆ. ಆದರೆ, ನಿಗಮದ ಆಡಳಿತ ಮಂಡಳಿ ಸಂಘಕ್ಕೆ ಮಾನ್ಯತೆ ನೀಡಲು ಅನಗತ್ಯ ತಕರಾರು ಮಾಡುತ್ತಿದೆ ಎಂದು ಆರೋಪಿಸಿದರು.

ನಮ್ಮ ಸಂಘಟನೆಯನ್ನು ಹತ್ತಿಕ್ಕುವ ಉದ್ದೇಶದಿಂದ ಆಡಳಿತ ಮಂಡಳಿ ಸಂಘದ ವಿರೋಧಿ ಮತ್ತು ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ನೌಕರರ ಕುಂದುಕೊರತೆಯನ್ನು ನಿವಾರಿಸಲು ಮುಂದಾಗುತ್ತಿಲ್ಲ ಎಂದರು.ನಿಗಮದ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಮುಷ್ಕರ ನಡೆಸುತ್ತಿದ್ದಾರೆ. ಆದರೆ, ಮುಷ್ಕರವನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಎಸ್ಮಾ ಜಾರಿ ಮಾಡಿದೆ ಎಂದರು. ಮೆಟ್ರೋ ಉದ್ಯಮ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿರುವುದರಿಂದ ರಾಜ್ಯ ಸರ್ಕಾರ ನಮ್ಮ ಮೇಲೆ ಎಸ್ಮಾ ಜಾರಿ ಮಾಡುವ ಅಧಿಕಾರ ಹೊಂದಿಲ್ಲ ಎಂದರು.

ಈ ನಿಟ್ಟಿನಲ್ಲಿ ಹೋರಾಟ ಮಾಡುವುದು ಅವಶ್ಯಕವಾಗಿದೆ. ಈಗಾಗಲೇ ಮೆಟ್ರೋ ಆಡಳಿತ ಮಂಡಳಿಗೆ 14ದಿನಗಳ ಕಾಲಾವಕಾಶ ನೀಡಿ ಸಂಘದಿಂದ ನೋಟಿಸ್ ಜಾರಿ ಮಾಡಲಾಗಿದೆ. ಸಂಘಕ್ಕೆ ಮಾನ್ಯತೆ ನೀಡಬೇಕು. ನಮ್ಮ ಬೇಡಿಕೆಗಳ ಪಟ್ಟಿಯನ್ನು ಒಪ್ಪಿಕೊಳ್ಳಬೇಕು. ಸಂಘದ ಸದಸ್ಯರಿಗೆ ನೀಡುತ್ತಿರುವ ಕಿರುಕುಳವನ್ನು ತಡೆಯಬೇಕೆಂದು ಒತ್ತಾಯಿಸಿದರು. ಈಗಾಗಲೇ ಆಡಳಿತ ಮಂಡಳಿಗೆ ನೋಟಿಸ್ ನೀಡಿರುವ ಕಾರಣ ಸಂಘದ ಸದಸ್ಯರು ಪ್ರತಿಭಟನೆಯ ಬ್ಯಾಡ್ಜ್‍ಗಳನ್ನು ಹಾಕಿಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಬೈಯ್ಯಪ್ಪನಹಳ್ಳಿ ಕಚೇರಿ ಸೇರಿದಂತೆ ಎಲ್ಲಾ ಕೇಂದ್ರ ಕಚೇರಿಗಳ ಮುಂದೆ ಕುಳಿತು ಘೋಷಣೆ ಕೂಗಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin