‘ಸೋಲಿನ ಭೀತಿಯಿಂದ ಮತದಾರರ ಪಟ್ಟಿಗೆ ಬಾಂಗ್ಲಾ ವಲಸಿಗರನ್ನು ಸೇರಿಸುತ್ತಿದೆ ಕಾಂಗ್ರೆಸ್’

ಈ ಸುದ್ದಿಯನ್ನು ಶೇರ್ ಮಾಡಿ

Congres-Arvind
ಬೆಂಗಳೂರು, ಮಾ.11- ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸೋಲುವ ಭೀತಿ ಎದುರಿಸುತ್ತಿರುವ ಕಾಂಗ್ರೆಸ್ ಬಾಂಗ್ಲಾದೇಶದಿಂದ ಬಂದಿರುವ ವಲಸಿಗರನ್ನು ಮತದಾರರ ಪಟ್ಟಿಗೆ ಸೇರಿಸಲು ಮುಂದಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ಶಾಸಕ ಅರವಿಂದ ಲಿಂಬಾವಳಿ ಆರೋಪಿಸಿದ್ದಾರೆ. ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೆಂಗಳೂರು ರಕ್ಷಿಸಿ ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ತಮ್ಮ ಮಾತಿನುದ್ದಕ್ಕೂ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿದರು. ಮಹದೇವಪುರದಲ್ಲಿ ಗೆಲ್ಲಲು ಸಾಧ್ಯವೇ ಇಲ್ಲ ಎಂಬುದು ಕಾಂಗ್ರೆಸ್ ನಾಯಕರಿಗೆ ಬಹು ದಿನಗಳ ಹಿಂದೆಯೇ ಮನವರಿಕೆಯಾಗಿದೆ. ಅದಕ್ಕಾಗಿ ವಾಮಮಾರ್ಗ ಅನುಸರಿಸುತ್ತಿದ್ದಾರೆ. ಬಾಂಗ್ಲಾದಿಂದ ಬಂದಿರುವ ವಲಸಿಗರಿಗೆ ಮತದಾನದ ಹಕ್ಕು ನೀಡಲು ಮುಂದಾಗಿದೆ. ಚುನಾವಣಾ ಆಯೋಗ ಇದನ್ನು ಪರಿಗಣಿಸಬೇಕೆಂದು ಒತ್ತಾಯಿಸಿದರು.

ವಿದೇಶಿಗರಿಂದ ಗೆಲ್ಲಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸಿತ್ತು. ಆದರೆ, ನಮ್ಮ ಕಾರ್ಯಕರ್ತರ ಪರಿಶ್ರಮದಿಂದಾಗಿ ವಲಸಿಗರನ್ನು ಪತ್ತೆಹಚ್ಚಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ರಿಟೀಷರಂತೆ ಸಮಾಜದಲ್ಲಿ ಧರ್ಮ ಹಾಗೂ ಜಾತಿಗಳನ್ನು ಒಡೆದು ಆಳುವುದರಲ್ಲಿ ನಿಸ್ಸೀಮರು. ಸಮಾಜವಾದಿ ಜಾತ್ಯತೀತೆಯಲ್ಲಿ ಪ್ರತಿಪಾದಿಸುತ್ತೇನೆ ಎನ್ನುತ್ತಲೇ ಸಮಾಜವನ್ನು ವಿಭಜಿಸುವ ಕರಗತ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಲಿಂಗಾಯಿತ ಸಮುದಾಯಕ್ಕೆ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡುವುದಾಗಿ ಹೇಳಿ ಆ ಸಮುದಾಯದಲ್ಲಿ ಬೆಂಕಿ ಇಟ್ಟವರೇ ಸಿದ್ದರಾಮಯ್ಯ. ಕೇಂದ್ರ ಸರ್ಕಾರ ಸಂವಿಧಾನದಲ್ಲಿ ಪ್ರತ್ಯೇಕ ಧರ್ಮ ರಚನೆ ಮಾಡಲು ಅವಕಾಶವಿಲ್ಲ ಎಂಬುದು ಗೊತ್ತಿದ್ದರೂ ರಾಜಕೀಯ ಲಾಭಕ್ಕಾಗಿ ವರದಿಯನ್ನು ಪಡೆದುಕೊಂಡಿದ್ದಾರೆ. ಆದರೆ ಇದು ಅವರಿಗೆ ತಿರುಗುಬಾಣವಾಗಲಿದೆ ಎಂದು ಎಚ್ಚರಿಸಿದರು.

ಮಹದೇವಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ಅಡ್ಡಗಾಲು ಹಾಕುತ್ತಿದೆ. ಬಿಜೆಪಿ ಅವಧಿಯಲ್ಲಿ ಮಂಜೂರಾಗಿದ್ದ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಯಿತು. ಉಳಿದಂತೆ ಕಾಂಗ್ರೆಸ್ ಅವಧಿಯಲ್ಲಿ ಈ ಕ್ಷೇತ್ರಕ್ಕೆ ನಯಾ ಪೈಸೆಯನ್ನು ಬಿಡುಗಡೆಯಾಗಿಲ್ಲ ಎಂದು ಅಸಮಾಧಾನವ್ಯಕ್ತಪಡಿಸಿದರು.

ಈವರೆಗೂ ವೀರಶೈವರು ಮತ್ತು ಲಿಂಗಾಯಿತರು ಅಣ್ಣತಮ್ಮಂದಿರಂತೆ ಇದ್ದರು. ಸಾವಿರಾರು ವರ್ಷಗಳಿಂದ ಅವರು ನೆಮ್ಮದಿಯ ಬದುಕು ನಡೆಸುತ್ತಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ತಕ್ಷಣ ಎರಡು ಸಮುದಾಯಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿದರು. ಸಮಾಜವನ್ನು ಹೊಡೆದು ಆಳುತ್ತಿರುವ ಸಿದ್ದರಾಮಯ್ಯ ನಮಗೆ ಬೇಕೆ ಎಂದು ಸಾರ್ವಜನಿಕರನ್ನು ಪ್ರಶ್ನಿಸಿದರು.  ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಬಿಎಂಪಿಗೆ 1750 ಕೋಟಿ ತೆರಿಗೆ ಕಟ್ಟಲಾಗಿದೆ. ಆದರೆ, ಕ್ಷೇತ್ರಕ್ಕೆ ನಯಾ ಪೈಸೆಯೂ ಅನುದಾನವನ್ನು ಬಿಡುಗಡೆ ಮಾಡಲಾಗಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯಗಳು ಕುಂಟಿತಗೊಂಡಿವೆ. ಸಿಗ್ನಲ್ ಪ್ರೀ ಕಾರಿಡಾರ್ ಕಾಮಗಾರಿಗೂ ಅಡ್ಡಿಪಡಿಸಲಾಗಿದೆ ಎಂದು ಲಿಂಬಾವಳಿ ಆಪಾದಿಸಿದರು.

ಮಿಟ್ಟಿಗಾನಹಳ್ಳಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸ ಸುರಿಯುತ್ತಿರುವುದು ಇನ್ನೂ ನಿಂತಿಲ್ಲ. ಇದರಿಂದ ಕ್ಷೇತ್ರದಲ್ಲಿ ಸರಿಯಾಗಿ ಕಸ ನಿರ್ವಹಣೆಯಾಗುತ್ತಿಲ್ಲ. ಹಸಿರು ನ್ಯಾಯಾಧೀಕರಣ ಆದೇಶಿಸಿದ್ದರೂ ಕೆರೆಗಳನ್ನು ಅಭಿವೃದ್ಧಿಪಡಿಸಿಲ್ಲ. ಪ್ರಾಥಿಮ ಆರೋಗ್ಯ ಕೇಂದ್ರಗಳು, ಮೀಸಲಿಟ್ಟ ಒತ್ತುವರಿ ಭೂಮಿ ತೆರವು ಮಾಡದೇ ಇರುವುದು, ಅಂಡರ್‍ಬ್ರಿಡ್ಜ್ ನಿರ್ಮಾಣ, ಹೊಸ ಮಾರುಕಟ್ಟೆ ನಿರ್ಮಾಣ ಮಾಡಲು ಅವಕಾಶ ನೀಡಿಲ್ಲ ಎಂದು ದೂರುದರು.

ಮಾಜಿ ಡಿಸಿಎಂ ಆರ್.ಅಶೋಕ್ ಮಾತನಾಡಿ, ಬೆಂಗಳೂರಿನಲ್ಲಿ ಕೈಗೊಂಡಿರುವ ಕಾಮಗಾರಿಗಳು ಪೂರ್ಣಗೊಳ್ಳದಿದ್ದರೂ ದುಡ್ಡು ಹೊಡೆಯುವ ಆಸೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲು ಮುಂದಾಗಿದ್ದಾರೆ. ಜನತೆ ಇಂತಹ ಗಿಮಿಕ್ ನಂಬುವುದಿಲ್ಲ ಎಂದು ಹೇಳಿದರು.  ಕಾಂಗ್ರೆಸ್ ಸರ್ಕಾರ ಬಿಬಿಎಂಪಿಯನ್ನೇ ಅಡವಿಟ್ಟರೂ ಅಚ್ಚರಿಯಿಲ್ಲ. ಪಾಲಿಕೆ ದಿವಾಳಿಯಾಗಿದ್ದರೂ ನೆಪಮಾತ್ರಕ್ಕೆ ಯೋಜನೆಗಳನ್ನು ಘೋಷಿಸಲಾಗುತ್ತಿದೆ. ನಗರದ ಜನತೆ ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಂಸದ ಪಿ.ಸಿ.ಮೋಹನ್, ಪಾಲಿಕೆ ಸದಸ್ಯರಾದ ಎನ್.ಮುನಿಸ್ವಾಮಿ, ಪುಷ್ಪಮಂಜುನಾಥ್, ಆಶಾ ಸುರೇಶ್, ಶ್ವೇತಾ ವಿಜಯ್‍ಕುಮಾರ್, ಪಕ್ಷದ ಸಹ ವಕ್ತಾರ ಎ.ಎಚ್.ಆನಂದ್, ಮುಖಂಡರಾದ ಅಶೋಕ್‍ರೆಡ್ಡಿ, ಅನಂತರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin