ಏಕಕಾಲಕ್ಕೆ 2 ಜೀವಂತ ಹೃದಯಗಳನ್ನು ಸಾಗಿಸಿ ಬೆಂಗಳೂರು ವೈದ್ಯರ ಮಹತ್ವದ ಸಾಧನೆ (Video)

ಈ ಸುದ್ದಿಯನ್ನು ಶೇರ್ ಮಾಡಿ

Bangalore-Heart
ಬೆಂಗಳೂರು, ಮಾ.13-ಉತ್ತಮ ಗುಣಮಟ್ಟದ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿರುವ ಉದ್ಯಾನನಗರಿ ಬೆಂಗಳೂರು ಇಂದು ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ನಾರಾಯಣ ಹೃದಯಾಲಯದಲ್ಲಿ ತೀವ್ರ ಹೃದ್ರೋಗ ಸಮಸ್ಯೆಗಳಿಂದ ನರಳುತ್ತಿರುವ ಇಬ್ಬರ ಶಸ್ತ್ರಚಿಕಿತ್ಸೆಗಾಗಿ ಇನ್ನೆರಡು ಆಸ್ಪತ್ರೆಗಳಿಂದ ಎರಡು ಜೀವಂತ ಹೃದಯವನ್ನು ಅತ್ಯಂತ ಕ್ಷಿಪ್ರವಾಗಿ ಸಾಗಿಸುವಲ್ಲಿ ವೈದ್ಯಕೀಯ ಸಿಬ್ಬಂದಿ ಸಫಲರಾಗಿದ್ದಾರೆ.

ನಗರದ ಹೊಸೂರು ರಸ್ತೆಯಲ್ಲಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ನಾರಾಯಣ ಹೃದಯಾಲಯದಲ್ಲಿ 10 ವರ್ಷ ಸಿರಿ ಎಂಬ ಬಾಲಕಿ ಹಾಗೂ ರಶ್ಮಿ ಪ್ರಸಾದ್ (40) ಎಂಬ ಮಹಿಳೆ ತೀವ್ರ ಹೃದಯ ಸಮಸ್ಯೆಯಿಂದ ಜೀವನ್ಮರಣದ ಹೋರಾಟ ನಡೆಸುತ್ತಿದ್ದರು. ಇವರಿಬ್ಬರಿಗೆ ಹೃದಯ ಕಸಿ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿತ್ತು.
ನಗರದ ಕೆಂಗೇರಿ ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ಮತ್ತು ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿನ ಮರಣಶಯ್ಯೆಯಲ್ಲಿರುವ ದಾನಿಗಳ ಎರಡು ಜೀವಂತ ಹೃದಯಗಳನ್ನು ಗ್ರೀನ್ ಕಾರಿಡಾರ್ (ಹಸಿರು ಪಥ-ನಿರ್ವಿಘ್ನ ಸಂಚಾರ ಮಾರ್ಗ) ಮೂಲಕ ಇಂದು ಬೆಳಗ್ಗೆ ನಾರಾಯಣ ಹೃದಯಾಲಯಕ್ಕೆ ಅತ್ಯಂತ ಕ್ಷಿಪ್ರವಾಗಿ ರವಾನಿಸುವಲ್ಲಿ ಸಮರ್ಪಣಾ ಮನೋಭಾವದ ಸಿಬ್ಬಂದಿ ಸಫಲಾಗಿದ್ದಾರೆ.

ಈ ಕಾರ್ಯಕ್ಕಾಗಿ ನಾರಾಯಣ ಹೃದಯಾಲಯದ ಎರಡು ಅತ್ಯಾಧುನಿಕ ವ್ಯವಸ್ಥೆಯ ವಿಶೇಷ ಆ್ಯಂಬ್ಯುಲೆನ್ಸ್ ವಾಹನಗಳು ಮತ್ತು ನುರಿತ ವೈದ್ಯಕೀಯ ಸಿಬ್ಬಂದಿಯನ್ನು ಬಳಸಲಾಯಿತು.  ಸುರಕ್ಷಿತ ವ್ಯವಸ್ಥೆಯೊಂದಿಗೆ ಕೊಲಂಬಿಯಾ ಆಸ್ಪತ್ರೆಯಿಂದ ಒಯ್ಯಲಾದ ಒಂದು ಹೃದಯ 29 ನಿಮಿಷಗಳಲ್ಲಿ ನಾರಾಯಣ ಹೃದಯಾಲಯವನ್ನು ತಲುಪಿದರೆ, ಬಿಜಿಎಸ್‍ನಿಂದ ಇನ್ನೊಂದು ಲೈವ್ ಹಾರ್ಟ್ 26 ನಿಮಿಷಗಳಲ್ಲಿ ಸೇರಿತು.

ಎರಡು ಆಂಬ್ಯುಲೆನ್ಸ್‍ಗಳ ಮೂಲಕ ಜೀವಂತ ಹೃದಯಗಳನ್ನು ಸಾಗಿಸಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಅಂಬ್ಯುಲೆನ್ಸ್‍ನಲ್ಲಿರುವ ವೈದ್ಯರೊಂದಿಗೆ ಆಸ್ಪತ್ರೆ ಸಂಪರ್ಕ ಸಾಧಿಸಲು ವ್ಯಾಟ್ಸಾಪ್ ಸಂವಹನ ಬಳಸಲಾಯಿತು. ಗ್ರೀನ್ ಕಾರಿಡಾರ್ ಮೂಲಕ ಯಾವುದೇ ಅಡೆತಡೆ ಇಲ್ಲದೇ ಎರಡು ಲಬ್-ಡಬ್ ಹೃದಯಗಳನ್ನು ಸುರಕ್ಷಿತವಾಗಿ ನಾರಾಯಣ ಹೃದಯಾಲಯಕ್ಕೆ ತಲುಪಿಸುವಲ್ಲಿ ವೈದ್ಯಕೀಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಸಾವಿನಲ್ಲೂ ಸಾರ್ಥಕ ಕೊಡುಗೆ  : 
ಬಾಲಕನ ಹೃದಯ ಬಾಲಕಿಗೆ :

ಅಪಘಾತದಿಂದ ತೀವ್ರ ಗಾಯಗೊಂಡು ಬ್ರೈನ್ ಡೆಡ್(ಮರಣಶಯ್ಯೆ) ಆಗಿರುವ 10 ವರ್ಷದ ಮಾಗಡಿ ಬಾಲಕ ಈಗ ಮತ್ತೊಂದು ಬಾಲಕಿ ಜೀವಕ್ಕೆ ಆಧಾರವಾಗಿದ್ದಾನೆ. ಮಾರ್ಚ್ 9ರಂದು ತನ್ನ ಚಿಕ್ಕಪ್ಪನ ಜೊತೆ ದ್ವಿಚಕ್ರ ವಾಹನದಲ್ಲಿ ಬಾಲಕ ತೆರಳುತ್ತಿದ್ದ. ಆಗ ನೆಲಮಂಗಲ ಬಳಿ ಅಪಘಾತ ಸಂಭವಿಸಿ ತೀವ್ರ ಗಾಯಗೊಂಡ ಬಾಲಕನನ್ನು ತಕ್ಷಣ ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನಗಳ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ನಂತರ ಆತನನ್ನು ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾವಿನ ಅಂಚಿನಲ್ಲಿರುವ ಬಾಲಕನ ಹೃದಯವನ್ನು ಸಂಬಂಧಪಟ್ಟವರ ಅಭಿಲಾಷೆಯಂತೆ ದಾನ ಮಾಡಲಾಗಿದೆ. ದುರಂತದ ಸಂಗತಿ ಎಂದರೆ ಬಾಲಕನ ತಂದೆ 9 ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಬಾಲಕ ಈಗ ಸಿರಿ ಎಂಬ ಬಾಲಕಿಗೆ ಜೀವ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ.

ನರ್ಸ್ ಹೃದಯ ಮಹಿಳೆಗೆ :
ಕೊಲಂಬಿಯಾದ ಮಾಜಿ ನರ್ಸ್ ಹೃದಯವನ್ನು ನಾರಾಯಣ ಹೃದಯಾಲಯದ ರಶ್ಮಿ ಪ್ರಸಾದ್ ಎಂಬ 40 ವರ್ಷದ ಮಹಿಳೆಗೆ ಕಸಿ ಮಾಡಲಾಗಿದೆ. ಮಾರ್ಚ್ 10ರಂದು ನರ್ಸ್ ದ್ವಿಚಕ್ರ ವಾಹನದಲ್ಲಿ ಮಧುರೈ ದೇವಸ್ಥಾನಕ್ಕೆ ಹೋಗುತ್ತಿದ್ದರು. ಚಿಕ್ಕಬಾಣಾವರ-ಹೆಸರುಘಟ್ಟ ಮುಖ್ಯ ರಸ್ತೆಯ ಉಬ್ಬಿನಲ್ಲಿ ವಾಹನದ ಹಿಂಬದಿ ಸೀಟಿನಿಂದ ಕೆಳಗೆ ಬಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ಆನಂತರ ಸಪ್ತಗಿರಿ ಆಸ್ಪತ್ರೆಗೆ ಬಳಿಕ ಕೊಲಂಬಿಯಾ ಏಷ್ಯಾ ಹಾಸ್ಪಿಟಲ್‍ಗೆ ಸ್ಥಳಾಂತರಿಸಲಾಗಿತ್ತು.

ಇವರು ಬದುಕುಳಿಯುವುದಿಲ್ಲ ಎಂಬುದನ್ನು ತಿಳಿದು ಆಕೆಯ ಪತಿ ಅಂಗಾಂಗ ದಾನಕ್ಕೆ ಮುಂದಾದರು. ಈ ದಂಪತಿಗೆ ಮಕ್ಕಳಿಲ್ಲ. ಬದುಕಿದ್ದಾಗ ರೋಗಿಗಳ ಜೀವ ಉಳಿಸುವ ನರ್ಸ್ ಸಾವಿನಲ್ಲೂ ಮತ್ತೊಂದು ಜೀವಕ್ಕೆ ಆಧಾರವಾಗುವ ಸಾರ್ಥಕ ಕಾರ್ಯ ಮಾಡಿದ್ದಾರೆ. ಈ ಹಿಂದೆಯೂ ಬೆಂಗಳೂರಿನ ದಾನಿಯೊಬ್ಬರ ಹೃದಯವನ್ನು ಚೆನ್ನೈಗೆ ಇದೇ ರೀತಿ ಲೈವ್ ಟ್ರಾನ್ಸ್‍ಪೋರ್ಟ್ ಮಾಡಲಾಗಿತ್ತು, ಅದಾದ ಬಳಿಕ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಿಂದ ದಾನಿಯ ಜೀವಂತ ಹೃದಯವನ್ನು ಎಂ.ಎಸ್. ರಾಮಯ್ಯ ಹಾಸ್ಪಿಟಲ್‍ಗೆ ರವಾನಿಸಲಾಗಿತ್ತು.

Facebook Comments

Sri Raghav

Admin