ಐಪಿಎಸ್ ಅಸೋಸಿಯೇಷನ್ ಅಧ್ಯಕ್ಷ ಆರ್.ಪಿ.ಶರ್ಮಾ ವರ್ಗಾವಣೆಗೆ ಬಿಜೆಪಿ ವರಿಷ್ಠರೊಬ್ಬರಿಂದ ಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

R-P-Sharma--01

ಬೆಂಗಳೂರು, ಮಾ.13- ಐಪಿಎಸ್ ಅಸೋಸಿಯೇಷನ್ ಅಧ್ಯಕ್ಷ ಆರ್.ಪಿ.ಶರ್ಮಾ ಅವರ ವರ್ಗಾವಣೆ ಸಂಬಂಧ ಬಿಜೆಪಿ ಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ವರಿಷ್ಠರೊಬ್ಬರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಬಿಜೆಪಿಯ ಉನ್ನತ ನಾಯಕರೊಂದಿಗೆ ಶರ್ಮಾ ಅವರ ಸಂಬಂಧ ಇರುವುದು ಈ ಪತ್ರದಿಂದ ತಿಳಿದು ಬಂದಿದೆ. ರಾಜ್ಯದ ಜನಪ್ರತಿನಿಧಿ ಅಲ್ಲದವರು ಬಿಜೆಪಿ ಪಕ್ಷದ ವರಿಷ್ಠರು ಮತ್ತು ಪಕ್ಷದ ರಾಜ್ಯದ ಉಸ್ತುವಾರಿ ವಹಿಸಿರುವವರು ಐಪಿಎಸ್ ಅಸೋಸಿಯೇಷನ್ ಅಧ್ಯಕ್ಷ ಆರ್.ಪಿ.ಶರ್ಮಾ ಅವರ ವರ್ಗಾವಣೆ ಕೋರಿ ಪತ್ರ ಬರೆದಿರುವುದರ ಹಿಂದೆ ಏನಿದೆ ಎಂಬ ಬಗ್ಗೆ ತೀವ್ರ ಚರ್ಚೆ ನಡೆದಿದೆ. ನಾನ್ ಎಕ್ಸಿಕ್ಯೂಟಿವ್ ಹುದ್ದೆಯಲ್ಲಿದ್ದ ಅವರನ್ನು ಎಕ್ಸಿಕ್ಯೂಟಿವ್ ಹುದ್ದೆಗೆ ಹಾಕಬೇಕೆಂದು ಬಿಜೆಪಿ ನಾಯಕರು ಶಿಫಾರಸು ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.

ಶರ್ಮಾ ಅವರು ಚುನಾವಣಾ ಸಂದರ್ಭದಲ್ಲಿ ಈ ರೀತಿ ರಾಜಕೀಯ ಆಕ್ಷೇಪಗಳಂತೆ ಪತ್ರ ಬರೆದಿರುವುದರ ಹಿಂದಿನ ಕಾರಣವೇನು ? ಅವರ ನಡೆ ಏನು ? ಇದರ ಹಿಂದೆ ಯಾವ ಕೈವಾಡವಿದೆ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ, ಗೃಹ ಸಚಿವ ರಾಮಲಿಂಗಾರೆಡ್ಡಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ರಾಜು ಮುಂತಾದವರು ಸಭೆ ನಡೆಸಿ ಚರ್ಚಿಸಿದ್ದಾರೆ.

ಹದ್ದುಮೀರಿ ವರ್ತಿಸುವ ಅಧಿಕಾರಿಗಳನ್ನು ಹದ್ಬಸ್ತಿನಲ್ಲಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದಾರೆ. ಇಂದೂ ಕೂಡ ಗೃಹ ಸಚಿವರು, ಮುಖ್ಯಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರೊಂದಿಗೆ ಮುಖ್ಯಮಂತ್ರಿಗಳು ಮಹತ್ವದ ಸಭೆ ನಡೆಸಿ ಆರ್.ಪಿ.ಶರ್ಮಾ ಅವರು ಬರೆದಿರುವ ಪತ್ರ, ಅದರ ಹಿನ್ನೆಲೆ, ಯಾರ ಕೈವಾಡವಿದೆ ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಶರ್ಮಾ ಅವರು ಅಧಿಕಾರಿಗಳಿಗೆ ನೀಡಿರುವ ಕಿರುಕುಳ, ಅವರ ಮೇಲಿರುವ ಆರೋಪಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ. ಐಪಿಎಸ್ ಅಧಿಕಾರಿಗಳ ಸಂಘದ ಪದಾಧಿಕಾರಿಗಳ ಸಹಮತಿ ಇಲ್ಲದೆ ಪತ್ರ ಬರೆದು ಸಂಘಕ್ಕೂ, ಸರ್ಕಾರಕ್ಕೂ ಮುಜುಗರ ಉಂಟು ಮಾಡಲಾಗಿದೆ ಎಂಬ ಆಕ್ಷೇಪ ಅಧಿಕಾರಿಗಳ ವಲಯದಿಂದ ಕೇಳಿ ಬಂದಿದೆ. ಚುನಾವಣಾ ಸಂದರ್ಭದಲ್ಲಿ ಶರ್ಮಾ ಅವರ ಈ ನಡೆಯ ಹಿಂದಿನ ನಿಗೂಢತೆ ಏನೆಂಬುದರ ಬಗ್ಗೆಯೂ ಕೂಡ ಪರಿಶೀಲನೆ ನಡೆಸಿ ಸರ್ಕಾರ ಯಾವ ರೀತಿ ಕ್ರಮ ಕೈಗೊಳ್ಳಬೇಕು, ಪ್ರತಿಪಕ್ಷಗಳಿಗೆ ಅಸ್ತ್ರವಾಗಿರುವ ಈ ವಿಷಯವನ್ನು ಯಾವ ರೀತಿ ನಿರ್ವಹಿಸಬೇಕು ಎಂಬುದರ ಬಗ್ಗೆಯೂ ಮಹತ್ವದ ಚರ್ಚೆ ನಡೆದಿದೆ.

Facebook Comments

Sri Raghav

Admin