‘ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನವಿಲ್ಲ, ಮೋದಿ ಮತ್ತೆ ಪಿಎಂ ಆಗಬೇಕು ಬಿಎಸ್ವೈ ಸಿಎಂ ಆಗಬೇಕು’

ಈ ಸುದ್ದಿಯನ್ನು ಶೇರ್ ಮಾಡಿ

Sankeshwar--01

ಹುಬ್ಬಳ್ಳಿ,ಮಾ.13- ರಾಜ್ಯಸಭೆಗೆ ಬಿಜೆಪಿಯಿಂದ ಟಿಕೆಟ್ ಸಿಗದಿದ್ದಕ್ಕೆ ನನಗೆ ಯಾವ ಅಸಮಾಧಾನವಿಲ್ಲ . ನಾನೆಂದೂ ಬಿಜೆಪಿ ಟಿಕೆಟ್ ಬಯಸಿಯೂ ಇರಲಿಲ್ಲ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು, ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬುದು ನಮ್ಮ ಧ್ಯೇಯೋದ್ದೇಶವಾಗಿದೆ. ಬಿಜೆಪಿಯಲ್ಲೇ ಮುಂದುವರೆಯುತ್ತೇನೆ ಎಂದು ಹೇಳುವ ಮೂಲಕ ವಿಆರ್‍ಎಲ್ ಸಮೂಹ ಸಂಸ್ಥೆಯ ಮುಖ್ಯಸ್ಥ ವಿಜಯ್ ಸಂಕೇಶ್ವರ್ ಎಲ್ಲ ಗೊಂದಲಗಳಿಗೆ ತೆರೆ ಎಳೆದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು 12 ವರ್ಷಗಳಿಂದ ಆರ್‍ಎಸ್‍ಎಸ್ ಕಾರ್ಯಕರ್ತನಾಗಿದ್ದೇನೆ. ನಾನೆಂದೂ ಬಿಜೆಪಿಯಿಂದ ಟಿಕೆಟ್ ಕೇಳಿಲ್ಲ. ಮೂರು ಬಾರಿ ಅವರೇ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ಕೊಟ್ಟಿದ್ದರು. ಆದರೆ ನಾನೇ ಪತ್ರಿಕೆ ಮಾಡುವುದಾಗಿ ಹಿಂದೆ ಸರಿದಿದ್ದೆ. ಬಿಎಸ್‍ವೈ ಅವರು ಪ್ರಸ್ತುತ ರಾಜ್ಯಸಭೆಗೆ ನನ್ನ ಹೆಸರು ಸೂಚಿಸಿರುವುದಾಗಿ ಹೇಳಿದ್ದರು. ಶೆಟ್ಟರ್ ಕೂಡ ತಿಳಿಸಿದ್ದರು. ಆದರೆ ಬಿಜೆಪಿ ವರಿಷ್ಠರು ರಾಜೀವ್ ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.

ರಾಜೀವ್ ಚಂದ್ರಶೇಖರ್ ಅವರು ಕೂಡ ಬಿಜೆಪಿಯ ಸೇವಕರಾಗಿದ್ದಾರೆ. ರಾಷ್ಟ್ರದ ಹಿತದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ ಮಾಡಲಾಗಿದೆ. ನನಗೆ ಟಿಕೆಟ್ ಸಿಗದಿದ್ದಕ್ಕೆ ಯಾವುದೇ ಅಸಮಾಧಾನವಿಲ್ಲ. ನಾನು ಬಿಜೆಪಿಯಲ್ಲಿ ಮುಂದುವರೆಯುತ್ತೇನೆ ಎಂದು ಸ್ಪಷ್ಟಪಡಿಸಿದರು. ದೇಶವನ್ನು , ಹಿಂದೂಗಳನ್ನು ಉಳಿಸಲು ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು. ನಮ್ಮ ದೇಶಕ್ಕೆ ಮೋದಿ ಅವರು ಅದ್ಭುತ ನಾಯಕರಾಗಿ ಹೊರಹೊಮ್ಮಿದ್ದಾರೆ. ಅವರು ಕೇವಲ ಭಾರತದ ಪ್ರಧಾನಿಯಾಗಿಲ್ಲ. ಇಡೀ ವಿಶ್ವದ ನಾಯಕರಾಗಿದ್ದಾರೆ ಎಂದು ಬಣ್ಣಿಸಿದರು.

ಕಳೆದ 56 ವರ್ಷಗಳಿಂದ ಸಂಘ ಪರಿವಾರ ಬಿಜೆಪಿಯಲ್ಲಿರುವೆ. ನಾನು ಹಿಂದೂ ಆಗಿರುವ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಹೋಗುತ್ತೇನೆ. ಎಂದೂ ದೇವರಲ್ಲಿ ನಾನು ಏನನ್ನೂ ಕೇಳಿಲ್ಲ. ಪಕ್ಷದಿಂದಲೂ ಏನನ್ನೂ ಕೇಳಿಲ್ಲ. ನನ್ನ ಇತಿಮಿತಿಯಲ್ಲಿ ಕೆಲಸ ಮಾಡುತ್ತೇನೆ. ವಾಜಪೇಯಿ ಅವರು ಕರೆದು ರಾಜಕೀಯದಲ್ಲಿ ಸ್ಥಾನಮಾನ ಕೊಟ್ಟಿದ್ದರು. ಆದರೆ ನಾನು ನಿರಾಕರಿಸಿದ್ದೆ. ಕಳೆದ ಬಾರಿ ಕೂಡ ನನಗೆ ಎಂಎಲ್‍ಸಿ ಟಿಕೆಟ್ ಕೊಟ್ಟಾಗ ನಾನು ಬೇಡ ಎಂದಿದ್ದೆ ಎಂದರು.

ರಾಜೀವ್ ಚಂದ್ರಶೇಖರ್ ಒಳ್ಳೆಯ ರಾಜಕಾರಣಿ. ನನಗಿಂತ ವಯಸ್ಸಿನಲ್ಲಿ ಚಿಕ್ಕವರು. ಅವರು ಕನ್ನಡಿಗರಲ್ಲ ಎಂದಿರುವುದು ನನಗೆ ಬೇಸರ ತಂದಿದೆ. ಅವರು ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಕನ್ನಡ ವಾಹಿನಿ ಮತ್ತು ಕನ್ನಡ ಪತ್ರಿಕೆಯನ್ನು ನಡೆಸುತ್ತಿದ್ದಾರೆ. ದೇಶ ಮತ್ತು ರಾಜ್ಯವನ್ನು ಕಾಂಗ್ರೆಸ್ ಮುಕ್ತ ಮಾಡುವ ಉದ್ದೇಶದಿಂದ ನಾವೆಲ್ಲ ಒಟ್ಟಿಗೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಬಿಜೆಪಿಯವರು ಜೈಲಿಗೆ ಹೋಗಿ ಬಂದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿ ಬಾರಿ ಹೇಳುತ್ತಾರೆ. ಇಂದಿರಾಗಾಂಧಿ ಕೂಡ ಜೈಲಿಗೆ ಹೋಗಿಬಂದವರು. ಇದನ್ನು ಕಾಂಗ್ರೆಸ್‍ನವರು ಮರೆಯಬಾರದು. ನಾನು ಮೂರು ದಶಕಗಳಿಂದ ಬಿಎಸ್‍ವೈ ಅವರನ್ನು ಬಲ್ಲೆ. ಅವರು ಕ್ರಿಮಿನಲ್ ಅಲ್ಲ ಎಂದರು.

ಮಹದಾಯಿ ಮತ್ತು ಕಳಸಾಬಂಡೂರಿ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ದೇಶದ ಮತ್ತು ರಾಜ್ಯದ ಸಂಸ್ಕøತಿ ಬಗ್ಗೆ ಸೋನಿಯಾ ಗಾಂಧಿ ಅವರಿಗೆ ಗೊತ್ತಿಲ್ಲ. ಹೀಗಾಗಿ ಗೋವಾ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ರಾಜ್ಯಕ್ಕೆ ನೀರು ಬಿಡದಂತೆ ಹೇಳಿದ್ದರು. ಅವರ ತಪ್ಪಿನಿಂದ ಇಂದು ಈ ಸಮಸ್ಯೆ ದೊಡ್ಡದಾಗಿದೆ. ಮುಂದಿನ ದಿನಗಳಲ್ಲಿ ಮಹದಾಯಿ ಸಮಸ್ಯೆ ಬಗೆಹರಿಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಲಿಂಗಾಯತ ಧರ್ಮ ಕುರಿತ ವರದಿ ರಾಜಕೀಯ ಉದ್ದೇಶದ ವರದಿ ಎಂದು ಆರೋಪಿಸಿದ ಅವರು, ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಟಕವಾಡುತ್ತಿದ್ದಾರೆ. ಈ ಎಲ್ಲದರ ಸೂತ್ರಧಾರ ಅವರೇ. ಲಿಂಗಾಯತ ಮತ್ತು ವೀರಶೈವ ಎರಡೂ ಒಂದೇ. ಜಾತಿ ಒಡೆಯುವ ಕೆಲಸ ಬೇಡ ಎಂದು ಹೇಳಿದರು.
ನಾನು ಯಾವತ್ತೂ ಪಕ್ಷದಿಂದ ಏನನ್ನೂ ಬಯಸಿಲ್ಲ. ಪಕ್ಷ ನನಗೆ ಟಿಕೆಟ್ ಕೊಟ್ಟರೆ ಚುನಾವಣೆಗೆ ನಿಲ್ಲುವೆ.ಹಿರಿಯ ಮುಖಂಡರು ಯಾವುದೇ ನಿರ್ಧಾರವನ್ನು ಕೈಗೊಂಡರೆ ಅದಕ್ಕೆ ನಾನು ಬದ್ಧ ಎಂದು ಹೇಳಿದರು.

Facebook Comments

Sri Raghav

Admin