ಸಿದ್ದರಾಮಯ್ಯ ದೇಶದಲ್ಲೇ ನಂ.1 ಸಿಎಂ ಎಂದು ಬಣ್ಣಿಸಿದ ಎಚ್.ಸಿ.ಮಹದೇವಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Cm-Mahadevappa--01

ತಿ.ನರಸೀಪುರ, ಮಾ.13- ರಾಜ್ಯದ ಅಭಿವೃದ್ದಿಯಲ್ಲಿ ಹೆಸರು ಮಾಡಿರುವ ಮುಖ್ಯಮಂತ್ರಿಗಳ ಸಾಲಿನಲ್ಲಿ ಸಿದ್ದರಾಮಯ್ಯ ಅವರು ದೇಶದಲ್ಲೇ ನಂ.1 ಸ್ಥಾನದಲ್ಲಿದ್ದಾರೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬಣ್ಣಿಸಿದರು. ಪಟ್ಟಣದ ಎಪಿಎಂಸಿ ಆವರಣದಲ್ಲಿ ಮುಖ್ಯಮಂತ್ರಿಗಳ ಅನಿಲಭಾಗ್ಯ ಯೋಜನೆ, ಯುವ ಚೈತನ್ಯ ಯೋಜನೆ ಹಾಗೂ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡಿಕೆ ಸೇರಿದಂತೆ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಮತ್ತು ಹಲವು ಸೌಲಭ್ಯಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ನಂತರದಲ್ಲಿ ಮೈಸೂರು ಜಿಲ್ಲೆ ಅಭಿವೃದ್ದಿಯಾಗಿರುವುದು ಸಿದ್ದರಾಮಯ್ಯನವರ ಕಾಲದಲ್ಲಿಯೇ. ಹಲವಾರು ಕೋಟಿ ರೂ.ಗಳ ವೆಚ್ಚದಲ್ಲಿ ಮೈಸೂರು ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಶ್ರಮಿಸಿರುವ ಅವರಿಗೆ ಯುವ ಸಂಸದರೊಬ್ಬರು ಸಿದ್ದರಾವಣ ಎಂದಿರುವುದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ. ಇದರಿಂದ ಅವರಿಗೆ ರಾಜಕೀಯ ಲಾಭವೂ ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ವಿರುದ್ದ ಪರೋಕ್ಷವಾಗಿ ಕಿಡಿಕಾರಿದರು.

ವರುಣಾ, ತಿನರಸೀಪುರ ಕ್ಷೇತ್ರಗಳ ಸಮಗ್ರ ಅಭಿವೃದ್ದಿಗೆ ಮುಖ್ಯಮಂತ್ರಿಗಳು ಕೊಟ್ಯಾಂತರ ರೂ. ಅನುದಾನ ನೀಡಿದ್ದು, 25 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಮಹಿಳಾ ಕಾಲೇಜು, 82 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದ ನಾಲೆಗಳ ಆಧುನೀಕರಣ, ರಸ್ತೆಗಳನ್ನು ಅಭಿವೃದ್ದಿಪಡಿಸಲಾಗಿದ್ದು, ತಾಲ್ಲೂಕಿನ 3 ಸಾವಿರ ಜನರಿಗೆ ಸಿಎಂ ಅನಿಲ ಭಾಗ್ಯ ಯೋಜನೆಯಡಿ ಉಚಿತ ಗ್ಯಾಸ್ ಸ್ಟೌ, ರೆಗ್ಯುಲೇಟರ್ ಹಾಗೂ 2 ಉಚಿತ ಸಿಲಿಂಡರ್ ವಿತರಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಯು.ಟಿ.ಖಾದರ್ ಮಾತನಾಡಿ, ಅನಿಲ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿರುವ ಕೀರ್ತಿ ಭಾರತ ದೇಶದಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಪಕ್ಷಕ್ಕೆ ಸಲ್ಲಲಿದೆ. ನಮ್ಮ ಸರ್ಕಾರ ಸರ್ವರಿಗೂ ಸಮಾನತೆಯಾಗಿ ಕಾಣುವ ಮೂಲಕ ಜನ ಸಾಮಾನ್ಯರಿಗೆ ಸ್ಪಂದಿಸಿ ಕೆಲಸ ಮಾಡುತ್ತಿದೆ. ಹಸಿವು ಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ಅನ್ನಭಾಗ್ಯದಂತಹ ಬೃಹತ್ ಯೋಜನೆ ಜಾರಿಗೊಳಿಸಿ, 1.20 ಲಕ್ಷ ವಾರ್ಷಿಕ ಆದಾಯ ಮೀತಿ ಇದ್ದವರು ಸಹ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದೇವೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಸಚಿವರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನೂತನ ಡಯಾಲಿಸಿಸ್ ಕೇಂದ್ರ ಹಾಗೂ ಐಸಿಯು ವಾರ್ಡ್‍ಗಳನ್ನು ಉದ್ಘಾಟಿಸಿದರು. ತಿ.ನರಸೀಪುರ ಹಾಗೂ ವರುಣಾ ವಿಧಾನ ಸಭಾ ಕ್ಷೇತ್ರದ ವಸತಿ ಜಾಗೃತಿ ಸಮಿತಿ ಅಧ್ಯಕ್ಷರಾದ ಸುನೀಲ್‍ಬೋಸ್, ಯತೀಂದ್ರ ಸಿದ್ದರಾಮಯ್ಯ, ಜಿ.ಪಂ ಸದಸ್ಯ ಮಂಜುನಾಥ್, ತಾ.ಪಂ ಉಪಾಧ್ಯಕ್ಷೆ, ಸುಂದ್ರಮ್ಮ, ಪುರಸಭೆ ಅಧ್ಯಕ್ಷ ಸಿ.ಉಮೇಶ್, ತಾ.ಪಂ ಸದಸ್ಯರಾದ ಕುಮುದಾ, ಗಣೇಶ್ ,ಪುರಸಭೆ ಸದಸ್ಯರಾದ ಮರಯ್ಯ, ಮಹದೇವು, ನಾಗರಾಜು, ಆಹಾರ ಇಲಾಖೆ ನಿರ್ದೇಶಕ ಕಾ.ರಾಮೇಶ್ವರಪ್ಪಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin