ಚಿಕ್ಕನಾಯಕನಹಳ್ಳಿಯಲ್ಲಿ ಜೆಡಿಎಸ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಬೀಳುವುದೇ..?

ಈ ಸುದ್ದಿಯನ್ನು ಶೇರ್ ಮಾಡಿ

Chikkanayakanahalli

– ಸಿ.ಎಸ್.ಕುಮಾರ್, ಚೇಳೂರು/ಲೋಕೇಶ್

ತುಮಕೂರು ಜಿಲ್ಲೆಯ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾದ ಚಿಕ್ಕನಾಯಕನಹಳ್ಳಿಯಲ್ಲಿ ಜೆಡಿಎಸ್ ಹೊರತುಪಡಿಸಿ ಬಿಜೆಪಿ ಮತ್ತು ಕಾಂಗ್ರೆಸ್‍ನಲ್ಲಿ ಟಿಕೆಟ್‍ಗಾಗಿ ಪೈಪೋಟಿ ಏರ್ಪಟ್ಟಿದೆ. ಜೆಡಿಎಸ್ ಭದ್ರಕೋಟೆಯಾಗಿರುವ ಚಿಕ್ಕನಾಯಕನಹಳ್ಳಿಯಲ್ಲಿ ಮತದಾರರು ಹಾಲಿ ಶಾಸಕ ಸುರೇಶ್‍ಬಾಬು ಅವರನ್ನು ನಾಲ್ಕನೆ ಅವಧಿಗೆ ಗೆಲ್ಲಿಸುವರೇ ಅಥವಾ ರಾಷ್ಟ್ರೀಯ ಪಕ್ಷಗಳಿಗೆ ಮನ್ನಣೆ ಹಾಕುವರೇ ಕಾದು ನೋಡಬೇಕಿದೆ.

ಜೆಡಿಎಸ್ ತಯಾರಿ:
ಹೇಳಿ ಕೇಳಿ ಚಿಕ್ಕನಾಯಕನಹಳ್ಳಿ ಶಾಂತಿ-ಸೌಹಾರ್ದತೆ ಬೀಡು. ಮೂರನೆ ಬಾರಿ ಶಾಸಕರಾಗಿರುವ ಸುರೇಶ್‍ಬಾಬು ಈಗ ನಾಲ್ಕನೆ ಬಾರಿ ಶಾಸಕರಾಗಲು ತಯಾರಿ ಮಾಡಿಕೊಂಡಿದ್ದಾರೆ. ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪರಮಾಪ್ತರಾಗಿರುವ ಬಾಬು ಅವರಿಗೆ ಎದುರಾಗಿ ಜೆಡಿಎಸ್‍ನಿಂದ ಟಿಕೆಟ್ ಕೇಳುವ ಧೈರ್ಯ ಯಾರಿಗೂ ಇಲ್ಲ. ಹೀಗಾಗಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವತ್ತ ಸುರೇಶ್‍ಬಾಬು ಗಮನ ಹರಿಸಿದ್ದಾರೆ.

ಬಿಜೆಪಿಯಲ್ಲಿ ಬಿಗ್ ಫೈಟ್:

ಲಿಂಗಾಯತ ಸಮುದಾಯದವರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಮಾಧುಸ್ವಾಮಿ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇನ್ನು ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಕ್ಷೇತ್ರದಲ್ಲಿ ಶಾಸಕರಾಗಿದ್ದ ಕೆ.ಎಸ್.ಕಿರಣ್ ಕುಮಾರ್‍ಗೆ ಕ್ಷೇತ್ರ ಪುನರ್‍ವಿಂಗಡಣೆ ನಂತರ ಕಳ್ಳಂಬೆಳ್ಳ ಇಲ್ಲದಂತಾಯಿತು. ಮೂಲ ಹುಳಿಯಾರು ನಿವಾಸಿ ಕಿರಣ್ ಕುಮಾರ್ ಈ ಬಾರಿ ಚಿಕ್ಕನಾಯಕನಹಳ್ಳಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಸರಳ-ಸಜ್ಜನಿಕೆ ರಾಜಕಾರಣಿಯಾಗಿರುವ ಕಿರಣ್‍ಕುಮಾರ್ ಅವರಿಗೆ ಹಲವು ಬಿಜೆಪಿ ಮುಖಂಡರ ಬೆಂಬಲವಿದೆ ಎನ್ನಲಾಗಿದೆ. ಹೀಗಾಗಿ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕರೂ ಅಚ್ಚರಿ ಪಡುವಂತಿಲ್ಲ.  ಮಾಧುಸ್ವಾಮಿ ಮತ್ತು ಕಿರಣ್‍ಕುಮಾರ್ ನಡುವೆ ಬಿಜೆಪಿ ಟಿಕೆಟ್‍ಗೆ ಬಿಗ್‍ಫೈಟ್ ನಡೆಯುತ್ತಿರುವ ಬೆನ್ನಲ್ಲೇ ಹಿಂದುಳಿದ ವರ್ಗಗಳ ನಾಯಕಿ ಹಾಗೂ ಕೇಂದ್ರ ರೈಲ್ವೆ ಮಂಡಳಿ ನಿರ್ದೇಶಕಿಯಾಗಿರುವ ಮಂಜುಳಾ ಎಂಬುವವರು ಮಹಿಳಾ ಕೋಟಾದಡಿ ಟಿಕೆಟ್ ನೀಡುವಂತೆ ದೆಹಲಿ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ.

ಕೈ ಭರ್ಜರಿ ತಯಾರಿ:
ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಅವರು ಮೂಲತಃ ತಾಲೂಕಿನ ಕಾಯಿ ತಿಮ್ಮನಹಳ್ಳಿ ನಿವಾಸಿ. ಹೀಗಾಗಿ ಈ ಕ್ಷೇತ್ರದಲ್ಲಿ ತಮ್ಮ ಪುತ್ರ ಸಂತೋಷ್ ಜಯಚಂದ್ರ ಅವರಿಗೆ ಟಿಕೆಟ್ ಕೊಡಿಸುವ ಇರಾದೆ ಹೊಂದಿದ್ದಾರೆ. ಕಳೆದ ಬಾರಿಯೂ ಟಿಕೆಟ್‍ಗಾಗಿ ಕಸರತ್ತು ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಈ ಬಾರಿ ಟಿಕೆಟ್ ಪಡೆಯಲು ಜಯಚಂದ್ರ ಲಾಬಿ ನಡೆಸುತ್ತಿದ್ದಾರೆ. ಅದರೆ, ಸಾಸಲು ಸತೀಶ್ ಅವರಿಗೆ ಸಂಸದ ಎಸ್.ಪಿ.ಮುದ್ದ ಹನುಮೇಗೌಡರು ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿದ್ದು, ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಇವರಿಬ್ಬರ ನಡುವಿನ ಕದನದ ನಡುವೆ ತುಮಕೂರು ತಾಪಂನಲ್ಲಿ ಕಾರ್ಯನಿರ್ವಹಣಾಧಿಕಾರಿಯಾಗಿರುವ ಡಾ.ನಾಗಣ್ಣ ಅವರಿಗೆ ಕೈ ಟಿಕೆಟ್ ನೀಡಬೇಕು ಎಂಬ ಒತ್ತಡ ಹೆಚ್ಚಾಗಿದೆ.

ಸುಮಾರು ವರ್ಷಗಳಿಂದ ಇಲ್ಲಿ ಸಮಾಜ ಸೇವೆ, ಧಾರ್ಮಿಕ ಆಚರಣೆಗಳು, ಮದುವೆ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ನಾಗಣ್ಣ ಅವರಿಗೆ ಟಿಕೆಟ್ ನೀಡಬೇಕೆಂದು ಅಲ್ಪಸಂಖ್ಯಾತ ಸಮುದಾಯದವರು ಒತ್ತಡ ತರುತ್ತಿದ್ದಾರೆ. ಪ್ರಸ್ತುತ ಸರ್ಕಾರಿ ಸೇವೆಯಲ್ಲಿರುವ ನಾಗಣ್ಣ ಅವರು ಕೈ ಟಿಕೆಟ್ ನೀಡುವ ಭರವಸೆ ನೀಡಿದರೆ ಕರ್ತವ್ಯಕ್ಕೆ ಸ್ವಯಂ ನಿವೃತ್ತಿ ಘೋಷಿಸಲು ತೀರ್ಮಾನಿಸಿದ್ದಾರೆ ಎಂದು ಗುಸು ಗುಸು ಕೇಳಿಬರುತ್ತಿದೆ. ಇಲ್ಲಿ ಲಿಂಗಾಯತರು ಸಮುದಾಯದ ಮತಗಳು ಹಾಗೂ ಕುರುಬರ ಮತಗಳು ನಿರ್ಣಯಕವಾಗಿರುತ್ತವೆ. ತುಮಕೂರು ನಗರದಿಂದ ಸುಮಾರು 67 ಕಿಮೀ ದೂರ ಇರುವ ಕ್ಷೇತ್ರವೇ ಚಿಕ್ಕನಾಯಕನಹಳ್ಳಿ.

ಒಟ್ಟು ಮತದಾರರು  :
ಲಿಂಗಾಯತರು -40000 / ಎಸ್‍ಸಿ/ಎಸ್‍ಟಿ -38000
ಕುರುಬರು -32000 / ಒಕ್ಕಲಿಗರು -30000
ಗೊಲ್ಲರು -20000 / ಉಪ್ಪಾರರು -18000
ಮುಸ್ಲಿಮರು-12000 / ಬಲಿಜಗ -8000 / ಇತರೆ -15490

Facebook Comments

Sri Raghav

Admin