ಟಿಕೆಟ್ ವಿಷಯದಲ್ಲಿ ಯಾರೂ ಮೂಗು ತೂರಿಸಬಾರದು : ಕಾಂಗ್ರೆಸ್ ನಾಯಕರಿಗೆ ರಾಹುಲ್ ಕ್ಲಾಸ್

ಈ ಸುದ್ದಿಯನ್ನು ಶೇರ್ ಮಾಡಿ

Rahul--01

ನವದೆಹಲಿ , ಮಾ.17- ವಿಧಾನಸಭೆಯ ಚುನಾವಣೆಗೆ ಟಿಕೆಟ್ ನೀಡುವ ವಿಷಯದಲ್ಲಿ ಕಾಂಗ್ರೆಸ್ ಸಮಿತಿ ನೀಡಿದ ಶಿಫಾರಸೇ ಅಂತಿಮ. ಯಾವುದೇ ನಾಯಕರು ಈ ವಿಷಯದಲ್ಲಿ ಮೂಗು ತೂರಿಸಬಾರದು ಎಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಖಡಕ್ ಸೂಚನೆ ನೀಡಿದ್ದು, ರಾಜ್ಯ ಕಾಂಗ್ರೆಸ್ ನಾಯಕರಿಗೆ ಒಂದೂವರೆ ಗಂಟೆ ಕ್ಲಾಸ್ ತೆಗೆದುಕೊಂಡಿದ್ದಾರೆ. ತಮ್ಮ ಪುತ್ರನಿಗೆ ಕಾರ್ಕಳ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲು ಶಿಫಾರಸು ಮಾಡಲಿಲ್ಲ ಎಂಬ ಹಿನ್ನೆಲೆಯಲ್ಲಿ ಮೊನ್ನೆ ಖಾರವಾಗಿ ಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ತಡರಾತ್ರಿ ರಾಹುಲ್‍ಗಾಂಧಿ ರಾಜ್ಯ ಕಾಂಗ್ರೆಸ್‍ನ ಪ್ರಮುಖ ನಾಯಕರ ಜತೆ ಮಹತ್ವದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಎಲ್ಲಾ ನಾಯಕರನ್ನು ತರಾಟೆಗೆ ತೆಗೆದುಕೊಂಡ ರಾಹುಲ್‍ಗಾಂಧಿ ಅವರು, ಚುನಾವಣೆ ಸಂದರ್ಭದಲ್ಲಿ ಗೊಂದಲ ಸೃಷ್ಟಿಸುವುದರಿಂದ ಆಗಬಹುದಾದ ಡ್ಯಾಮೇಜ್ ಬಗ್ಗೆ ಅರಿವಿದೆಯೇ ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ಅಸಮಾಧಾನಗಳು ಏನೇ ಇದ್ದರೂ ಅದನ್ನು ಪಕ್ಷದ ವೇದಿಕೆಯಲ್ಲಿ ಅಥವಾ ಸಂಬಂಧಪಟ್ಟ ನಾಯಕರ ಬಳಿ ಹೇಳಿಕೊಳ್ಳಬೇಕೇ ಹೊರತು ಬಹಿರಂಗವಾಗಿ ಪಕ್ಷವನ್ನು ಟೀಕೆ ಮಾಡುವುದರಿಂದ ಇಡೀ ವ್ಯವಸ್ಥೆಯನ್ನೇ ಹಾಳು ಮಾಡಿದಂತಾಗುತ್ತದೆ. ಅತ್ಯಂತ ಸೂಕ್ಷ್ಮತೆಯನ್ನು ಅರಿಯಬೇಕು ಎಂದು ತರಾಟೆಗೆ ತೆಗೆದುಕೊಂಡರು.

ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಹಿರಿಯ ನಾಯಕರನ್ನು ಕಡೆಗಣಿಸುವುದು ಸರಿಯಲ್ಲ. ರಾಜ್ಯ ನಾಯಕರು ಕ್ರೂಢೀಕೃತ ಅಭಿಪ್ರಾಯಗಳನ್ನು ಹೈಕಮಾಂಡ್‍ಗೆ ಶಿಫಾರಸು ಮಾಡಬೇಕು. ಸ್ವ ಹಿತಕ್ಕಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ. ಅಂತಹ ಪರಿಸ್ಥಿತಿಯನ್ನು ನಿರ್ಮಿಸಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಒಂದು ಎಂಎಲ್‍ಎ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಪಕ್ಷಕ್ಕೆ ಹಾನಿ ಮಾಡುವಂತಹ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. ಒಂದು ಚುನಾವಣೆಯ ನಂತರ ಎಲ್ಲ ಅವಕಾಶಗಳು ಮುಗಿದು ಹೋಗುವುದಿಲ್ಲ. ಪಕ್ಷಕ್ಕಾಗಿ ಕೆಲಸ ಮಾಡಿದವರನ್ನು ಹೈಕಮಾಂಡ್ ಗುರುತಿಸಿರುತ್ತದೆ. ಸೂಕ್ತ ಸಮಯ, ಸಂದರ್ಭದಲ್ಲಿ ಅವಕಾಶಗಳು ಹುಡುಕಿ ಕೊಂಡುಬರುತ್ತವೆ. ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕಾಗಿ ದುಡಿದವರಿಗೆ ಅವಕಾಶ ನೀಡಿದ್ದೇವೆ. ಯಾವುದೇ ಲಾಬಿಗೆ ಮಣಿಯದೆ ಪಕ್ಷ ಸೇವೆಯನ್ನು ಪರಿಗಣಿಸಿರುವುದನ್ನು ಎಲ್ಲರೂ ಗಮನಿಸಬೇಕೆಂದು ರಾಹುಲ್‍ಗಾಂಧಿ ತಿಳಿಸಿದ್ದಾರೆ.

ಅಂತಿಮವಾಗಿ ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡುವುದು ಹೈಕಮಾಂಡ್‍ಗೆ ಬಿಟ್ಟ ವಿಷಯ. ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಸ್ಕ್ರೀನಿಂಗ್ ಕಮಿಟಿ ತೀರ್ಮಾನ ಮಾಡುತ್ತದೆ. ರಾಜ್ಯ ನಾಯಕರು ಟಿಕೆಟ್ ವಿಷಯದಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಪಕ್ಷ ಸಂಘಟನೆ, ಗೊಂದಲ ಮುಕ್ತ ವಾತಾವರಣದಲ್ಲಿ ಚುನಾವಣೆ ನಡೆಯುವಂತೆ ಕೆಲಸ ಮಾಡಿ ಎಂದು ತಾಕೀತು ಮಾಡಿದ್ದಾರೆ.

Facebook Comments

Sri Raghav

Admin