ಎಪಿಎಂಸಿ ಶುಲ್ಕವನ್ನು ಶೇ.1.5ರಿಂದ ಶೇ.0.5ಕ್ಕೆ ಇಳಿಸಲು ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

APMC

ಬೆಂಗಳೂರು, ಮಾ.20- ಕೃಷಿ ಉತ್ಪನ್ನ ಮಾರುಕಟ್ಟೆ ಶುಲ್ಕವನ್ನು ಶೇ.1.5ರಿಂದ ಶೇ.0.5ಕ್ಕೆ ಇಳಿಸಬೇಕು. ಫಾರಂ ನಂ.35ಬಿ ಸಂಪೂರ್ಣವಾಗಿ ರದ್ದುಗೊಳಿಸುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಇಂದು ನಡೆದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಮಸ್ಯೆ ಮತ್ತು ಸವಾಲುಗಳು ಎಂಬ ವಿಚಾರ ಸಂಕಿರಣದಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಯಿತು. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಸಂಚಾಲಕ ರಮೇಶ್ ಚಂದ್ರ ಲಾಹೋಟಿ ಮಾತನಾಡಿ, ಕೃಷಿ ಉತ್ಪನ್ನ ಮಾರುಕಟ್ಟೆ ಶುಲ್ಕ 500ಕೋಟಿ ಸಂಗ್ರಹವಾಗಿದ್ದು, ಇದನ್ನು ಶೇ.0.5ಕ್ಕೆ ಇಳಿಸಿದ್ದೇ ಆದರೆ ಇನ್ನೂ ಹೆಚ್ಚಿನ ಶುಲ್ಕ ಸಂಗ್ರಹವಾಗುತ್ತದೆ ಹಾಗೂ ಸೋರಿಕೆಯೂ ತಪ್ಪಲಿದೆ ಎಂದರು.

ಎಲ್ಲ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಬೀದಿದೀಪ, ರಸ್ತೆ ಸಂಪರ್ಕ, ವಿದ್ಯುತ್ ಪೂರೈಕೆ ಮೊದಲಾದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಎಪಿಎಂಸಿ ಶುಲ್ಕ ಪಾವತಿ ವಿಳಂಬಕ್ಕೆ ವಿಧಿಸುವ ದಂಡವನ್ನು ಸ್ಥಗಿತಗೊಳಿಸಬೇಕು,ಎಪಿಎಂಸಿ ವರ್ತಕರ ಲೆಕ್ಕ ಪರಿಶೀಲನೆಯನ್ನು ಆಯಾ ಎಪಿಎಂಸಿ ಕಾರ್ಯದರ್ಶಿ 6 ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟರು. ಪ್ರತೀ ವರ್ಷ ಶೇ.5ರ ಬಾಡಿಗೆ ಹೆಚ್ಚಳಕ್ಕೆ ವರ್ತಕರು ಬದ್ಧರಾಗಿದ್ದು ಜಾಲ್ತಿಯಲ್ಲಿರುವ ಬ್ಯಾಂಕ್ ಗ್ಯಾರಂಟಿಯನ್ನು ರದ್ದು ಪಡಿಸಿ ಎಪಿಎಂಸಿ ಕಾರ್ಯದರ್ಶಿಗೆ ಪೇ ಆರ್ಡರ್ ನೀಡಲು ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆ ಸೇರಿದಂತೆ ಹಲವು ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಕೋರಿದರು.

ರಾಜ್ಯದ 23 ಜಿಲ್ಲೆಗಳಿಂದ ಎಪಿಎಂಸಿ ವರ್ತಕರು ಆಗಮಿಸಿ ತಮ್ಮ ತಮ್ಮ ಜಿಲ್ಲೆಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು. ಸಹಕಾರ ಇಲಾಖೆ ಕಾರ್ಯದರ್ಶಿ ಈ.ಎಂ.ಲತಾ, ಕೃಷಿ ಮಾರಾಟ ಇಲಾಖೆ ಮತ್ತು ಕೃಷಿ ಮಾರುಕಟ್ಟೆ ಮಂಡಳಿ ನಿರ್ದೇಶಕ ಎಂ.ಬಿ. ರಾಜೇಶ್‍ಗೌಡ, ಎಫ್‍ಕೆಸಿಸಿಐ ಅಧ್ಯಕ್ಷ ಕೆ.ರವಿ, ಉಪಾಧ್ಯಕ್ಷ ಜನಾರ್ಧನ, ಹಿರಿಯ ಉಪಾಧ್ಯಕ್ಷ ಸುಧಾಕರ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಎಂ.ಕೆ.ದಿನೇಶ್, ಎಪಿಎಂಸಿ ಆಂತರಿಕ ವ್ಯಾಪಾರ,ಆಹಾರ ಸಂಸ್ಕರಣ ಸಮಿತಿ ಅಧ್ಯಕ್ಷ ಭರತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin