ನ್ಯಾಟೊ ಪಡೆಗಳ ಮೇಲೆ ದಾಳಿ ನಡೆಸಲು ತಾಲಿಬಾನ್‍ಗೆ ಪಾಕ್ ಕುಮ್ಮಕ್ಕು

ಈ ಸುದ್ದಿಯನ್ನು ಶೇರ್ ಮಾಡಿ

Taliban--01

ಕಾಬೂಲ್/ಇಸ್ಲಾಮಾಬಾದ್, ಮಾ.20-ಉಗ್ರಗಾಮಿಗಳ ಹಿಂಸಾತ್ಮಕ ದಾಳಿಗಳಿಂದ ನಲುಗುತ್ತಿರುವ ಆಫ್ಘಾನಿಸ್ತಾನದಲ್ಲಿ ಹೊಸ ಭಯೋತ್ಪಾದನೆ ಕುತಂತ್ರಕ್ಕೆ ಪಾಕಿಸ್ತಾನ ಹುನ್ನಾರ ನಡೆಸಿದೆ.  ಆಫ್ಘನ್ ನಗರಗಳು ಹಾಗೂ ನ್ಯಾಟೊ (ನಾರ್ತ್ ಅಂಟ್ಲಾಟಿಕ್ ಟ್ರೀಟಿ ಆರ್ಗನೈಜೇಷನ್) ಪಡೆಗಳ ಮೇಲೆ ತಾಲಿಬಾನ್ ಉಗ್ರರ ನೆರವಿನೊಂದಿಗೆ ಭಯಾನಕ ಆಕ್ರಮಣಗಳನ್ನು ನಡೆಸಲು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‍ಐ ಕುಮ್ಮಕ್ಕು ನೀಡುತ್ತಿದೆ.

ಆಫ್ತನ್ ನ್ಯಾಷನಲ್ ಆರ್ಮಿಯ ಸಿಬ್ಬಂದಿಯನ್ನು ನಿಯೋಜಿಸಿ ನ್ಯಾಟೊ ಪಡೆಗಳ ಮೇಲೆ ಜಂಟಿ ದಾಳಿ ನಡೆಸುವಂತೆ ತಾಲಿಬಾನ್ ಬಂಡುಕೋರರಿಗೆ ಐಎಸ್‍ಐ ಸೂಚನೆ ನೀಡಿದೆ ಎಂದು ಉನ್ನತ ಮೂಲಗಳು ಬಹಿರಂಗಗೊಳಿಸಿವೆ. ಈ ಸಂಬಂಧ ಪಾಕ್‍ನ ಐಎಸ್‍ಐ ಅಧಿಕಾರಿಗಳು ಹಾಗೂ ಆಫ್ತಾನಿಸ್ತಾನದ ತಾಲಿಬಾನ್ ಉಗ್ರಗಾಮಿಗಳ ನಡುವೆ ಇತ್ತೀಚೆಗೆ ಸಭೆ ನಡೆದಿದೆ. ಅಫ್ಘನ್‍ನಲ್ಲಿ ರಕ್ಷಣೆಗೆ ನಿಯೋಜಿತವಾಗಿರುವ ವಿದೇಶಿ ಪಡೆಗಳ ಮೇಲೆ ಜಂಟಿ ದಾಳಿಗಳನ್ನು ನಡೆಸಲು ಕುತಂತ್ರ ರೂಪಿಸಲಾಗಿದೆ. ಅಲ್ಲದೆ, ಪ್ರಮುಖ ನಗರಗಳು ಮತ್ತು ಪಟ್ಟಣಗಳ ಮೇಲೂ ಆಕ್ರಮಣ ನಡೆಸಲು ಹುನ್ನಾರ ನಡೆದಿದೆ ಎಂದು ಮೂಲಗಳು ದೃಢಪಡಿಸಿವೆ.

ಸುಸಜ್ಜಿತ ನ್ಯಾಟೊ ಪಡೆಗಳ ಮೇಲೆ ಯಶಸ್ವಿ ದಾಳಿಗಳನ್ನು ನಡೆಸಲು ಪಾಕಿಸ್ತಾನಿ ಸೇನೆಯು ತಾಲಿಬಾನ್‍ನ ಕೆಲವು ಅಗ್ರ ಕಮಾಂಡರ್‍ಗಳಿಗೆ ತರಬೇತಿಯನ್ನೂ ಸಹ ನೀಡಿದೆ. ಕಾಬೂಲ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ತಾಲಿಬಾನ್ ಉಗ್ರರು ದಾಳಿ ನಡೆಸಲಿದ್ದಾರೆ ಎಂದು ಅಮೆರಿಕ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಆತಂಕಕಾರಿ ಬೆಳವಣಿಗೆ ಕಂಡುಬಂದಿದೆ.

Facebook Comments

Sri Raghav

Admin