ಬೆಳ್ಳಂಬೆಳಿಗ್ಗೆ ಭ್ರಷ್ಟರ ಬಾಗಿಲು ಬಡಿದ ಎಸಿಬಿ ಅಧಿಕಾರಿಗಳು, ರಾಜ್ಯದ ಹಲವೆಡೆ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Acb-Attakc--01
ಬೆಂಗಳೂರು, ಮಾ.20- ಬೆಳ್ಳಂಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ತುಮಕೂರು, ದಾವಣಗೆರೆ, ಕಲಬುರಗಿ, ಬೆಳಗಾವಿ, ಚಿಕ್ಕಮಗಳೂರು, ಬೀದರ್ ಸೇರಿದಂತೆ ವಿವಿಧ ಕಡೆ ಹಲವು ಅಧಿಕಾರಿಗಳ ಕಚೇರಿ ಮತ್ತು ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಬೆಳಗಾವಿ ಸ್ಮಾರ್ಟ್ ಸಿಟಿ ಎಂಜಿನಿಯರ್ ಕಿರಣ್ ಸುಬ್ಬರಾವ್, ಕಾರಂಜ ನೀರಾವರಿ ಯೋಜನೆ ಎಇಇ ವಿಜಯ್‍ಕುಮಾರ್, ಸಾರಿಗೆ ಇಲಾಖೆ ಉಪ ಮುಖ್ಯ ಭದ್ರತಾ ಅಧಿಕಾರಿ ಶ್ರೀಪತಿ ದೊಡ್ಡಲಿಂಗಣ್ಣ, ಚಿಕ್ಕಮಗಳೂರಿನ ಉಪ ತಹಸೀಲ್ದಾರ್ ಕೀರ್ತಿ ಜೈನ್, ದಾವಣಗೆರೆ ದೂಡಾ ಜಂಟಿ ನಿರ್ದೇಶಕ ಗೋಪಾಲಕೃಷ್ಣ, ತುಮಕೂರು ಉಪವಿಭಾಗಾಧಿಕಾರಿ ತಿಪ್ಪೆಸ್ವಾಮಿ ಮುಂತಾದ ಅಧಿಕಾರಿಗಳ ಮನೆ ಹಾಗೂ ನಿವಾಸಗಳ ಮೇಲೆ ದಾಳಿ ನಡೆಸಿ ಆದಾಯಕ್ಕೂ ಮೀರಿದ ಆಸ್ತಿ, ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

ದಾವಣಗೆರೆ ಎಸಿಬಿ ಎಸ್‍ಪಿ ವಂಶಿಕೃಷ್ಣ, ವಾಸುದೇವರಾವ್, ಮಂಜುನಾಥ್ ಪಂಡಿತ್ ನೇತೃತ್ವದಲ್ಲಿ ದೂಡಾ ಜಂಟಿ ನಿರ್ದೇಶಕ ಗೋಪಾಲ್‍ಕೃಷ್ಣ ಅವರ ದಾವಣಗೆರೆಯ ನಿಟ್ಟುವಳ್ಳಿ ಸಿದ್ದರಾಮೇಶ್ವರ ಬಡಾವಣೆ ದೂಡಾ ಕಚೇರಿ, ದಾವಣಗೆರೆ ಮಹಾನಗರ ಪಾಲಿಕೆ ಕಚೇರಿ ಮುಂತಾದ ಕಡೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ಸಿದ್ದರಾಮೇಶ್ವರ ಬಡಾವಣೆಯ ಮೂರು ಅಂತಸ್ತಿನ ಮನೆ, ದಾವಣಗೆರೆಯಲ್ಲಿನ ನಿವೇಶನ, ಕೋಲ್ಕುಂಟೆಯ ಎಂಟು ಎಕರೆ ಜಮೀನು, ಒಂದು ಕಾರು, ಎರಡು ಎಕರೆ ಜಮೀನು ಮುಂತಾದವುಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಚಿತ್ರದುರ್ಗ ಎಸಿಬಿ ಡಿವೈಎಸ್‍ಪಿ ಮಂಜುನಾಥ್, ಶಿವಮೊಗ್ಗ ಡಿವೈಎಸ್‍ಪಿ ಚಂದ್ರಪ್ಪ ನೇತೃತ್ವದಲ್ಲಿ ದಾಳಿ ನಡೆಸಿದ ತಂಡ ತುಮಕೂರು ಉಪವಿಭಾಗಾಧಿಕಾರಿ ತಿಪ್ಪೆಸ್ವಾಮಿ ಅವರ ಚಿತ್ರದುರ್ಗದಲ್ಲಿನ ಎರಡು ಮನೆ, ಬೆಳ್ಳಘಟ್ಟ ಗ್ರಾಮದ ನಿವಾಸ, ದೊಡ್ಡಸಿದ್ದವ್ವನಹಳ್ಳಿ ಗ್ರಾಮದಲ್ಲಿನ ಅವರ ಮಾವ ರಂಗಪ್ಪ ನಿವಾಸ, ತುಮಕೂರು-ಶಿರಾ ರಸ್ತೆಯ ಎಸಿ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ಎಸಿಬಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಅಲ್ಲದೆ, ನಿವೇಶನಗಳು, ನಗದು, ವಿವಿಧ ಕಡೆ ಅಪಾರ ಪ್ರಮಾಣದ ಆಸ್ತಿ ಖರೀದಿ ಮಾಡಿರುವುದು, ವಿವಿಧ ಬ್ಯಾಂಕ್ ಖಾತೆಗಳನ್ನು ಹೊಂದಿರುವ ಬಗ್ಗೆ ದಾಖಲೆ, ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಕಲಬುರಗಿ ಎಸಿಬಿ ಎಸ್‍ಪಿ ಅಮರನಾಥ್ ರೆಡ್ಡಿ ನೇತೃತ್ವದ ತಂಡ ಬೆಳಗಾವಿ ಸ್ಮಾರ್ಟ್‍ಸಿಟಿ ಎಂಜಿನಿಯರ್ ಕಿರಣ್ ಸುಬ್ಬರಾವ್ ಅವರ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

ಬೀದರ್ ಎಸಿಬಿ ಅಧಿಕಾರಿಗಳ ತಂಡ, ಹುಮ್ನಾಬಾದ್ ತಾಲೂಕಿನ ಕಾರಂಜ ನೀರಾವರಿ ಯೋಜನೆಯ ಎಇಇ ವಿಜಯ್‍ಕುಮಾರ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಭಗವತಿನಗರದಲ್ಲಿರುವ ವಿಜಯ್‍ಕುಮಾರ್ ನಿವಾಸ, ಬಸವ ಕಲ್ಯಾಣ ತಾಲೂಕಿನ ಮಂಚನಾಳ ಗ್ರಾಮದ ನಿವಾಸದ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಅಲ್ಲದೆ, ಸಾರಿಗೆ ಇಲಾಖೆಯ ಉಪ ಮುಖ್ಯ ಭದ್ರತಾ ಅಧಿಕಾರಿ ಶ್ರೀಪತಿ ದೊಡ್ಡಲಿಂಗಣ್ಣನವರ ನಿವಾಸದ ಮೇಲೆಯೂ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡಲಾಗಿದೆ. ಚಿಕ್ಕಮಗಳೂರಿನ ಉಪತಹಸೀಲ್ದಾರ್ ಕೀರ್ತಿಜೈನ್ ಅವರ ನಿವಾಸ, ಕಚೇರಿ ಹಾಗೂ ಸಂಬಂಧಿಕರ ಮನೆ ಮೇಲೆ ಪಶ್ಚಿಮ ವಲಯದ ಎಸ್‍ಪಿ ಶೃತಿ ಹಾಗೂ ಚಿಕ್ಕಮಗಳೂರಿನ ಎಸಿಬಿ ಡಿವೈಎಸ್‍ಪಿ ನಾಗೇಶ್‍ಶೆಟ್ಟಿ ಅವರ ನೇತೃತ್ವದ ತಂಡ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡಿದೆ.

Facebook Comments

Sri Raghav

Admin