ಬಿಳಿ ಪಂಚೆ ಹಾಗೂ ಶಲ್ಯ ತೊಟ್ಟು ಶಾರದಾಂಬೆ ದರ್ಶನ ಪಡೆದ ರಾಹುಲ್

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಮಾ.21-ಸುಪ್ರಸಿದ್ಧ ಶೃಂಗೇರಿ ಶಾರದೆಯ ದರ್ಶನವನ್ನು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಸಾಂಪ್ರದಾಯಿಕ ಧಿರಿಸಾದ ಬಿಳಿ ಪಂಚೆ ಹಾಗೂ ಶಲ್ಯ ತೊಟ್ಟು ಪಡೆದದ್ದು ವಿಶೇಷ.  ಇಂದು ಬೆಳಗ್ಗೆ ಶಾರದಾಂಬೆ ದೇಗುಲಕ್ಕೆ ಭೇಟಿ ನೀಡುವ ಮುನ್ನ ಶ್ರೀ ಶಂಕರ ಅತಿಥಿ ಗೃಹದಲ್ಲಿ ರಾಹುಲ್ ಅವರು ತಾವು ಧರಿಸಿದ್ದ ಜುಬ್ಬಾ-ಪೈಜಾಮ ಬದಲಿಸಿ, ಪಂಚೆ-ಶಲ್ಯ ಧರಿಸಿಕೊಂಡು ಅಣಿಯಾಗುತ್ತಿದ್ದಂತೆ ಇವರೊಂದಿಗಿದ್ದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರೂ ಸಹ ಪಂಚೆ-ಶಲ್ಯ ತೊಟ್ಟು ದೇವಿ ದರ್ಶನಕ್ಕೆ ಸಿದ್ಧರಾಗಿ ದೇವಸ್ಥಾನಕ್ಕೆ ತೆರಳಿ ಶಾರದಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

Rahu--011

ನಂತರ ಇತಿಹಾಸ ಪ್ರಸಿದ್ಧವಾದ ದೇವಾಲಯ ಸುತ್ತಲೂ ಬಿಸಿಲನ್ನೂ ಲೆಕ್ಕಿಸದೆ ಬರಿಗಾಲಿನಲ್ಲೇ ಒಂದು ಸುತ್ತು ಪ್ರದಕ್ಷಿಣೆ ಹಾಕಿದರು. ನಂತರ ನಡೆದುಕೊಂಡೇ ಸ್ವಾಮೀಜಿಯ ಭೇಟಿಗೆ ತೆರಳಿದರು. ನರಸಿಂಹ ವನದಲ್ಲಿರುವ ಶ್ರೀ ಭಾರತೀತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಲು ಸೇತುವೆ ಮೇಲೆ ಹೊರಟು,ಸೇತುವೆ ಮಧ್ಯದಲ್ಲಿ ನಿಂತು ತುಂಗಾ ನದಿಯಲ್ಲಿನ ಮೀನುಗಳಿಗೆ ಆಹಾರ ಹಾಕಿ ಅಲ್ಲಿಂದ ಮುಂದೆ ಸಾಗಿದರು. ಮಠಕ್ಕೆ ಭೇಟಿ ನೀಡಿ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರ ಕೊಠಡಿಯಲ್ಲಿ ಅವರ ಆಶೀರ್ವಾದ ಪಡೆದರು.

ಈ ನಡುವೆ ಮಾತನಾಡಿದ ಅವರು, ಭಾರತ ಜಾತ್ಯತೀತ ರಾಷ್ಟ್ರ. ಆದರೆ ಇಂದು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಪರಸ್ಪರ ದ್ವೇಷ ಭಾವನೆಗಳನ್ನು ಮೂಡಿಸಿ ಸಮಾಜದಲ್ಲಿ ಅಶಾಂತಿ ಮೂಡಿಸುವಂತಹ ಕೆಲಸ ಮಾಡುತ್ತಿದೆ. ದುಡಿಯುವ ಕೈಗಳಿಗೆ ಕೆಲಸ ನೀಡದೆ ಕೇವಲ ಬಂಡವಾಳ ಶಾಹಿ ಪರ ನಿಂತು ದೀನ ದಲಿತರನ್ನು ಮರೆತು ಕೇವಲ ಸುಳ್ಳು ಪ್ರಚಾರದಲ್ಲೇ ನಾಲ್ಕು ವರ್ಷ ಕಳೆದಿದೆ ಎಂದು ಕಿಡಿಕಾರಿದರು. ಈ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ತಮ್ಮ ತಂದೆ ರಾಜೀವ್‍ಗಾಂಧಿ ಹಾಗೂ ಅಜ್ಜಿ ಇಂದಿರಾಗಾಂಧಿ ಅವರು ಶಾರದಾ ಮಠದ ಭಕ್ತರಾಗಿದ್ದು, ಅವರು ಆಗಮಿಸಿದ್ದ ಈ ಪುಣ್ಯಕ್ಷೇತ್ರಕ್ಕೆ ನಾನು ಬಂದಿದ್ದು ಸಂತಸ ತಂದಿದೆ ಎಂದರು.

ಅಜ್ಜಿ ಇಂದಿರಾಗಾಂಧಿ ಅವರಿಗೆ ರಾಜಕೀಯ ಪುನರ್‍ಜನ್ಮ ನೀಡಿದ ಜಿಲ್ಲೆ ಚಿಕ್ಕಮಗಳೂರು ಆಗಿದೆ. ಶಂಕರಾಚಾರ್ಯರು ಸ್ಥಾಪಿಸಿದ ಪುಣ್ಯಕ್ಷೇತ್ರ ಶೃಂಗೇರಿಗೆ ತಾವು ಆಗಮಿಸಿ ತಾಯಿ ಶಾರದಾಂಬೆಯ ದರ್ಶನ ಪಡೆದಿರುವುದು ನೆಮ್ಮದಿ ತಂದಿದೆ ಎಂದರು. ನಕ್ಸಲ್ ಪ್ರದೇಶವಾದ ಕಾರಣ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Facebook Comments

Sri Raghav

Admin