ಪ್ರತ್ಯೇಕ ಲಿಂಗಾಯತ ಧರ್ಮ : ರಾಜ್ಯ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ರೆಡ್ ಸಿಗ್ನಲ್..!?

ಈ ಸುದ್ದಿಯನ್ನು ಶೇರ್ ಮಾಡಿ

Lingayata--011
ನವದೆಹಲಿ,ಮಾ.23- ಕರ್ನಾಟಕದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿರುವ ಲಿಂಗಾಯಿತ ಮತ್ತು ವೀರಶೈವ ಲಿಂಗಾಯಿತ ಹೆಸರಿನಡಿ ಪ್ರತ್ಯೇಕ ಲಿಂಗಾಯಿತ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.  ಕಳೆದ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಸರ್ಕಾರ ಸಚಿವ ಸಂಪುಟದಲ್ಲಿ ತೆಗೆದುಕೊಂಡಿರುವ ತೀರ್ಮಾನದ ಬಗ್ಗೆ ತಮ್ಮ ಸಂಪುಟದ ಸಹೋ ದ್ಯೋಗಿಗಳ ಜೊತೆ ಮಾತುಕತೆ ನಡೆಸಿದ್ದಾರೆ.  ಗೃಹಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವ ಅರುಣ್ ಜೇಟ್ಲಿ , ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹಾಗೂ ಕರ್ನಾಟಕದ ಪರವಾಗಿ ರಾಜ್ಯದ ಪ್ರಭಾವಿ ಸಚಿವರೊಬ್ಬರು ಕೂಡ ಸಭೆಯಲ್ಲಿ ಭಾಗವಹಿಸಿದ್ದರು.

ಕಳೆದ ಸೋಮವಾರ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ತೆಗೆದು ಕೊಂಡಿರುವ ನಿರ್ಧಾರವನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಈ ಹಿಂದೆ ಅಂದರೆ 2013ರಲ್ಲಿ ಅಂದಿನ ಯುಪಿಎ ಸರ್ಕಾರ ಕರ್ನಾಟಕ ಸರ್ಕಾರ ಕಳುಹಿಸಿದ್ದ  ಪ್ರಸ್ತಾವನೆಯನ್ನು ತಿರಸ್ಕರಿಸಿರುವ ನಿದರ್ಶನವೇ ನಮ್ಮ ಮುಂದಿರುವಾಗ ಅದನ್ನು ಹೇಗೆ ಒಪ್ಪಿಕೊಳ್ಳಬೇಕು ಎಂಬ ಪ್ರಶ್ನೆಯನ್ನು ರಾಜ್ಯದ ಸಚಿವರು ಮುಂದಿಟ್ಟಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಾಮ ವಿಲಾಸ್ ಪಾಸ್ವಾನ್, ಕರ್ನಾಟಕ ಸರ್ಕಾರ ಮುಂದಿನ ವಾರ ಕಳುಹಿಸಲಿರುವ ಪ್ರಸ್ತಾವನೆಯನ್ನು ಸಾರಾ ಸಗಟವಾಗಿ ತಿರಸ್ಕರಿಸಬೇಕೆಂದು ಪ್ರಧಾನಿ ಮೇಲೆ ಒತ್ತಡ ಹಾಕಿದ್ದಾರೆ.  ವೀರಶೈವ-ಲಿಂಗಾಯಿತರಿಗೆ ಪ್ರತ್ಯೇಕ ಲಿಂಗಾಯಿತ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡಿದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ನೀಡುವ ಮೀಸಲಾತಿಗೆ ಹೊಡೆತ ಬೀಳುತ್ತದೆ.

ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಮೀಸಲಾತಿ ಪ್ರಮಾಣವನ್ನು ಶೇ.50ಕ್ಕಿಂತ ಹೆಚ್ಚಳ ಮಾಡುವಂತಿಲ್ಲ. ಈಗಿರುವ ನಿಯಮದಂತೆ ದಲಿತರು, ಬುದ್ಧರು, ಸಿಖ್ ಹಾಗೂ ಹಿಂದೂ ಸಮುದಾಯದಲ್ಲಿರುವ ಕೆಲವರಿಗೆ ಉದ್ಯೋಗ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ ನೀಡಲು ಅವಕಾಶವಿದೆ. ಉಳಿದಂತೆ ಹೊಸದಾಗಿ ಧರ್ಮ ಸೃಷ್ಟಿಸಿದ ತಕ್ಷಣ ಅವರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ದಲಿತರಿಗೆ ನೀಡುತ್ತಿರುವ ಮೀಸಲಾತಿಯಲ್ಲಿ ಕಡಿತಗೊಳಿಸಿದರೆ ದೇಶಾದ್ಯಂತ ಜನರು ಕೇಂದ್ರ ಸರ್ಕಾರದ ವಿರುದ್ದ ದಂಗೆ ಏಳಲಿದ್ದಾರೆ. ಈ ಪ್ರಸ್ತಾವನೆ ಯನ್ನು ತಿರಸ್ಕರಿಸುವುದೇ ಸೂಕ್ತ. ಇಲ್ಲದಿದ್ದರೆ ಶೈತ್ಯಗಾರಕ್ಕೆ ಹಾಕುವುದೇ ಲೇಸು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ರಾಜ್ಯದ ಸಚಿವರು ಹೇಳಿದ್ದೇನು: ಸಭೆಯಲ್ಲಿ ಭಾಗವಹಿಸಿದ್ದ ಬೆಂಗಳೂರು ಮೂಲದ ಕೇಂದ್ರದ ಪ್ರಭಾವಿ ಸಚಿವ ರೊಬ್ಬರು 2013ರಲ್ಲಿ ಅಂದು ಕೇಂದ್ರ ಸಚಿವ ವೀರಪ್ಪ ಅವರು ಅಂದಿನ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು. 2013ರಲ್ಲಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಶೀಲಿಸುವಂತೆ ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಮನವಿ ಮಾಡಿದ್ದರು. ಲಿಂಗಾಯಿತರಿಗೆ ಪ್ರತ್ಯೇಕ ಸ್ಥಾನಮಾನ ನೀಡಿದರೆ ಸಮುದಾಯವನ್ನು ವಿಭಜಿಸಿದಂತೆ.  ಎಸ್ಸಿ-ಎಸ್ಟಿ ಸಮುದಾಯಕ್ಕೆ ನೀಡುತ್ತಿರುವ ಮೀಸಲಾತಿಯನ್ನು ಕಡಿತಗೊಳಿಸಿದರೆ ಮಾತ್ರ ಲಿಂಗಾಯಿತರಿಗೆ ಮೀಸಲಾತಿ ನೀಡಲು ಸಾಧ್ಯವಾಗುತ್ತಿದೆ. ಕರ್ನಾಟಕ ಸರ್ಕಾರ ಒಂದೊಮ್ಮೆ ಮುಂದಿನ ವಾರ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‍ದಾಸ್ ನೇತೃತ್ವದ ತಜ್ಞರ ಸಮಿತಿಯನ್ನು ಕಳುಹಿಸಿದರೆ ಯಾವುದೇ ತೀರ್ಮಾನ ಕೈಗೊಳ್ಳದಂತೆ ಸಲಹೆ ಮಾಡಿದ್ದಾರೆ.

ಸಚಿವರ ಮನವಿಯಂತೆ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಸ್ತಾವನೆಯನ್ಯ ಶೈತ್ಯಾಗಾರಕ್ಕೆ ಹಾಕಲು ಮುಂದಾಗಿದ್ದಾರೆ.
ಮುಂದಿನ ವಾರ ಕೇಂದ್ರ ಅಂಗಳಕ್ಕೆ : ಕಳೆದ ಸೋಮವಾರ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನವನ್ನು ರಾಜ್ಯ ಸರ್ಕಾರ ಮುಂದಿನ ವಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಲಿದೆ. ಸಂಜೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಸಂಭವವಿದೆ. ಕೇಂದ್ರ ಸರ್ಕಾರದ ಶಿಫಾರಸ್ಸಿಗೆ ಪೂರಕವಾದ ಟಿಪ್ಪಣಿಗಳನ್ನು ಇಂಗ್ಲಿಷ್‍ಗೆ ಅನುವಾದಿಸಿ ಸಂಬಂಧಪಟ್ಟ ದಾಖಲೆಗಳನ್ನು ಅಳವಡಿಸಿ ಲಿಂಗಾಯಿತ ಮುಖಂಡರು, ಮಠಾಧೀಶರು ಸೇರಿದಂತೆ ಮತ್ತಿತರರು ಶಿಫಾರಸು ಮಾಡಿರುವ ಪತ್ರಗಳನ್ನು ಸಹ ಕೇಂದ್ರಕ್ಕೆ ಕಳುಹಿಸಿಕೊಡಲಿದ್ದಾರೆ.

ಮೊದಲು ರಾಜ್ಯ ಸರ್ಕಾರದ ಪ್ರಸ್ತಾವನೆ ಕೇಂದ್ರದ ಸಂಸದೀಯ ವ್ಯವಹಾರಗಳ ಇಲಾಖೆಗೆ ರವಾನೆಯಾಗುತ್ತದೆ. ಅಲ್ಲಿಂದ ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆ, ಅಲ್ಪಸಂಖ್ಯಾತ ಆಯೋಗ ತದನಂತರ ಕಾನೂನು ಇಲಾಖೆ, ಬಳಿಕ ಕಾನೂನು ಆಯೋಗದ ಪರಿಶೀಲನೆಗೆ ಒಳಪಡಲಿದೆ. ಈ ಎಲ್ಲ ಹಂತದಲ್ಲೂ ವೀರಶೈವ ಲಿಂಗಾಯತರಿಗೆ ಪ್ರತ್ಯೇಕ ಲಿಂಗಾಯಿತ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಯಾವುದೇ ಅಡ್ಡಿಯಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾದರೆ ಅಂತಿಮವಾಗಿ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇದನ್ನು ಅಂಗೀಕರಿಸಿ ರಾಷ್ಟ್ರಪತಿಗಳ ಶಿಫಾರಸಿಗೆ ಕಳುಹಿಸಿಕೊಡುತ್ತಾರೆ.  ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳ ಬೇಕಾದರೆ ಇದಕ್ಕೆ ವರ್ಷಗಟ್ಟಲೇ ಸಮಯ ಬೇಕಾಗುತ್ತದೆ. ಅಂದಹಾಗೆ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯತ್ತಿರುವ ಈ ಸಂದರ್ಭದಲ್ಲಿ ಕಬ್ಬಿಣದ ಕಡಲೆಯಂತಿರುವ ಲಿಂಗಾಯಿತ-ವೀರಶೈವ ವಿವಾದವನ್ನು ಪ್ರಧಾನಿ ನರೇಂದ್ರ ಮೋದಿ ಮೈಮೇಲೆಳೆದುಕೊಳ್ಳುವರೆ ಎಂಬುದು ಎಲ್ಲರ ಮುಂದಿರುವ ಯಕ್ಷ ಪ್ರಶ್ನೆ.

Facebook Comments

Sri Raghav

Admin