ಬಂಡಾಯ ಶಾಸಕರು ಜೆಡಿಎಸ್’ಗೆ ಗುಡ್ ಬೈ, ಕಾಂಗ್ರೆಸ್ ಗೆ ಜೈ ಜೈ

ಈ ಸುದ್ದಿಯನ್ನು ಶೇರ್ ಮಾಡಿ

JDS--Jameer--01

ಬೆಂಗಳೂರು, ಮಾ.24-ತಮ್ಮ ಸ್ಥಾನಕ್ಕೆ ನಿನ್ನೆ ರಾಜೀನಾಮೆ ನೀಡಿದ ರಮೇಶ್ ಬಂಡಿಸಿದ್ದೇಗೌಡ ಹಾಗೂ ಇಂದು ರಾಜೀನಾಮೆ ನೀಡಿದ ಚಲುವರಾಯಸ್ವಾಮಿ ಸೇರಿದಂತೆ ಐವರ ರಾಜೀನಾಮೆಯನ್ನು ಸ್ಪೀಕರ್ ಕೆ.ಬಿ.ಕೋಳಿವಾಡ ಅಂಗೀಕರಿಸಿದ್ದಾರೆ. ಇಂದು ಸ್ಪೀಕರ್ ಕೆ.ಬಿ.ಕೋಳಿವಾಡ ಅವರ ನಿವಾಸಕ್ಕೆ ತೆರಳಿ ರಾಜೀನಾಮೆ ನೀಡಿದ ಚಲುವರಾಯಸ್ವಾಮಿ, ಅಖಂಡ ಶ್ರೀನಿವಾಸಮೂರ್ತಿ, ಭೀಮಾನಾಯಕ್, ಜಮೀರ್ ಅಹಮ್ಮದ್ ಖಾನ್ ಅವರ ರಾಜೀನಾಮೆಯನ್ನು ಸ್ಪೀಕರ್ ಅವರು ಅಂಗೀಕರಿಸಿದರು.

ನಂತರ ಮಾತನಾಡಿದ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು, ಸ್ವಹಸ್ತಾಕ್ಷರದಲ್ಲಿ ಬರೆದು ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಅಂಗೀಕರಿಸಲು ಸಮರ್ಥನೀಯವಾಗಿದೆ. ಹಾಗಾಗಿ ಅವರ ರಾಜೀನಾಮೆ ಅಂಗೀಕರಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು. ಜೆಡಿಎಸ್ ಬಂಡಾಯ ಶಾಸಕರ ವಿರುದ್ಧದ ವಿಚಾರಣೆ ಪೂರ್ಣಗೊಂಡಿಲ್ಲ. ಜೆಡಿಎಸ್ ಪಕ್ಷ ನಿನ್ನೆ ಕೂಡ ಒಂದು ದೂರನ್ನು ನೀಡಿದೆ. ಎಲ್ಲಾ ದೂರುಗಳನ್ನು ಸಮೀಕರಿಸಿ ವಿಚಾರಣೆ ನಡೆಸುತ್ತೇನೆ. ರಾಜೀನಾಮೆ ಅಂಗೀಕಾರವಾದ ಕೂಡಲೇ ಪ್ರಕರಣ ಇತ್ಯರ್ಥವಾಗುತ್ತದೆ ಎಂದೇನೂ ಇಲ್ಲ. ಯಾವಾಗ ವಿಚಾರಣೆ ಮಾಡಬೇಕು, ಯಾವಾಗ ತೀರ್ಪು ನೀಡಬೇಕು ಎಂಬುದು ನನ್ನ ವಿವೇಚನೆಗೆ ಬಿಟ್ಟ ವಿಷಯ ಎಂದು ಹೇಳಿದರು.

ನಾನು ಯಾವುದೇ ಒತ್ತಡಕ್ಕೆ ಮಣಿದಿಲ್ಲ. ನನ್ನ ಮೇಲೆ ಯಾರೂ ಒತ್ತಡ ಹೇರಿಲ್ಲ. ರವಿಬೆಳಗೆರೆ, ಖೇಣಿ ಅವರ ಪ್ರಕರಣದಲ್ಲಿ ಕಾನೂನು ಪ್ರಕಾರವೇ ಕ್ರಮ ಕೈಗೊಂಡಿದ್ದೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಏಳು ಬಂಡಾಯ ಶಾಸಕರ ಪೈಕಿ ಐವರು ನೀಡಿದ ರಾಜೀನಾಮೆ ಅಂಗೀಕಾರವಾಗಿದ್ದು, ಇನ್ನು ಇಕ್ಬಾಲ್ ಅನ್ಸಾರಿ ಹಾಗೂ ಎಚ್.ಸಿ.ಬಾಲಕೃಷ್ಣ ಅವರು ಇಂದು ಮಧ್ಯಾಹ್ನ ರಾಜೀನಾಮೆ ನೀಡಲಿದ್ದಾರೆ ಎಂದು ಚಲುವರಾಯಸ್ವಾಮಿ ಇದೇ ಸಂದರ್ಭದಲ್ಲಿ ತಿಳಿಸಿದರು.

Facebook Comments

Sri Raghav

Admin