ನಾನು ಕಿಕ್‍ಬ್ಯಾಕ್ ಪಡೆದಿಲ್ಲ, ಫೈಲ್ ಕೊಡ್ತೀನಿ ಚೆಕ್ ಮಾಡ್ಕೊಳಿ : ಬಿಎಸ್ವೈಗೆ ಪಾಟೀಲ್ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa--02

ವಿಜಯಪುರ, ಮಾ.25- ಭದ್ರಾಮೇಲ್ದಂಡೆ ಯೋಜನೆಯ ವಿಶ್ವೇಶ್ವರಯ್ಯ ಜಲನಿಗಮ ಕಾಮಗಾರಿಯಲ್ಲಿ ಕಿಕ್‍ಬ್ಯಾಕ್ ಪಡೆದಿಲ್ಲ. ಈ ಯೋಜನೆಯ ಫೈಲನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಕಳುಹಿಸಿಕೊಡುವೆ. ಆದರೆ, ಕೂಲಂಕಷವಾಗಿ ನೋಡಿಕೊಳ್ಳಲಿ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಿರುಗೇಟು ನೀಡಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ಹಿರಿಯರು. ಆದರೂ, ಭದ್ರಾಮೇಲ್ದಂಡೆ ಯೋಜನೆಯ ವಿಶ್ವೇಶ್ವರಯ್ಯ ಜಲನಿಗಮ ಕಾಮಗಾರಿಯಲ್ಲಿ ಕಿಕ್‍ಬ್ಯಾಕ್ ಪಡೆಯಲಾಗಿದೆ ಎಂದು ಮೂರ್ಖತನದ ಮಾತನಾಡಿದ್ದಾರೆ. ಈ ಯೋಜನೆಯ ಫೈಲನ್ನೇ ಅವರಿಗೆ ಕಳುಹಿಸಿವೆ. ತಜ್ಞರಿಂದ ಆ ಫೈಲನ್ನು ಪರಿಶೀಲಿಸಲಿ ಎಂದು ಹೇಳಿದರು. ಈ ಯೋಜನೆಯ ಕಾಮಗಾರಿ ಗುತ್ತಿಗೆ ಪಡೆದವರು ಸರಿಯಾಗಿ ದಾಖಲಾತಿ ನೀಡಿಲ್ಲ. ಹಾಗಾಗಿ ಅವರ ಇಎಂಡಿ ಮುಟ್ಟುಗೋಲು ಹಾಕಿಕೊಂಡು ಕಪ್ಪುಪಟ್ಟಿಗೆ ಸೇರಿಸಿದ್ದೇವೆ ಎಂದರು.

ವೀರಶೈವ ಸಮಾವೇಶ:
ವಿಜಯಪುರದಲ್ಲಿ ನಡೆಯಲಿರುವ ವೀರಶೈವ ಸಮಾವೇಶಕ್ಕೆ ನನ್ನನ್ನು ಕರೆದರೆ ನಾನು ಭಾಗಿಯಾಗುತ್ತೇನೆ ಎಂದು ಇದೇ ವೇಳೆ ಎಂ.ಬಿ.ಪಾಟೀಲ್ ತಿಳಿಸಿದರು. ಈ ಹಿಂದೆ ಎಂ.ಚಿದಾನಂದಮೂರ್ತಿ ಅವರು ವೀರಶೈವರ ಧರ್ಮಗ್ರಂಥದ ಬಗ್ಗೆ ವಿರುದ್ಧವಾಗಿ ಮಾತನಾಡಿದ್ದರು. ಇದೀಗ ವೀರಶೈವರ ಪರವಾಗಿ ಮಾತನಾಡುತ್ತಿದ್ದಾರೆ. ಇದು ಯಾವ ಲೆಕ್ಕಾಚಾರ ಸ್ವಾಮಿ ಎಂದ ಅವರು, ವೀರಶೈವ ಮಹಾಸಭಾ ಇತಿಹಾಸ ಸೇರಲಿದೆ ಎಂದು ಭವಿಷ್ಯ ನುಡಿದರು.

ಐಟಿ ರೇಡ್ ಮೂಲಕ ಹತ್ತಿಕ್ಕುವ ಯತ್ನ:
ಐಟಿ ರೇಡ್ ಮೂಲಕ ನಮ್ಮ ಕಾಂಗ್ರೆಸ್ ನಾಯಕರನ್ನು ಹತ್ತಿಕ್ಕಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಎಂ.ಬಿ.ಪಾಟೀಲ್ ಉತ್ತರಿಸಿದರು. ಈಗಾಗಲೇ ಸಚಿವ ಡಿ.ಕೆ.ಶಿವಕುಮಾರ್ ಮನೆ ಮೇಳೆ ದಾಳಿ ಮಾಡಿದ್ದಾಯ್ತು, ಇನ್ನು ನನ್ನ ಮೇಲೆ ಐಟಿ ದಾಳಿ ಚೂ ಬಿಡಲಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ನಾಯಕರ ಮೇಲೆ ಐಟಿ ದಾಳಿ ಮಾಡುವಂತೆಯೇ ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಶೋಭಾಕರಂದ್ಲಾಜೆ ಅವರ ಮೇಲೂ ರೇಡ್ ಮಾಡಿಸಲಿ ಎಂದು ಸವಾಲು ಹಾಕಿದರು. ಚುನಾವಣೆ ಸಂದರ್ಭದಲ್ಲಿ ಪಕ್ಷಾಂತರ ಸರ್ವೆ ಸಾಮಾನ್ಯ. ನಮ್ಮ ಪಕ್ಷಕ್ಕೆ ಬಿಜೆಪಿಯಿಂದ ಬರಲು ಅನೇಕರು ಅರ್ಜಿ ಹಾಕಿದ್ದಾರೆ ಎಂದು ಪಾಟೀಲ್ ತಿಳಿಸಿದರು.

Facebook Comments

Sri Raghav

Admin