ಹೆಬ್ಬಾಳ ಮೇಲ್ಸೇತುವೆ ಬಳಿ ಕೆಂಪೇಗೌಡರ ಪ್ರತಿಮೆ ಅನಾವರಣ
ಬೆಂಗಳೂರು, ಮಾ.26- ಹೆಬ್ಬಾಳದ ಮೇಲ್ಸೇತುವೆ ಬಳಿಯ ಉದ್ಯಾನವನದಲ್ಲಿ ನೂತನವಾಗಿ ನಿರ್ಮಿಸಿರುವ ನಾಡಪ್ರಭು ಕೆಂಪೇ ಗೌಡರ ಪ್ರತಿಮೆಯನ್ನು ಬೆಂಗಳೂರು ನಗರ ಅಭಿವೃದ್ದಿ ಸಚಿವ ಕೆ.ಜೆ.ಜಾರ್ಜ್ ಅನಾವರಣಗೊಳಿಸಿದರು. ಇಂದು ಬೆಳಗ್ಗೆ ಪ್ರತಿಮೆ ಅನಾವರಣಕ್ಕೆ ಸಚಿವ ಜಾರ್ಜ್ ಆಗಮಿಸುತ್ತಿದ್ದಂತೆ ಕೆಲವರು ವಿರೋಧ ವ್ಯಕ್ತಪಡಿಸಿ ಸ್ವಚ್ಛವಿಲ್ಲದ ಜಾಗದಲ್ಲಿ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಉದ್ಯಾನವನದಲ್ಲೂ ಸ್ವಚ್ಛತೆ ಕಾಪಾಡುತ್ತಿಲ್ಲ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಸ್ಥಳ ಉತ್ತಮವಾಗಿದೆ. ಪಾರ್ಕನ್ನು ಅಭಿವೃದ್ದಿ ಪಡಿಸಲಾಗುವುದು. ಆದರೆ ನೀತಿ ಸಂಹಿತೆ ಜಾರಿಯಾದರೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದ ಅವರು, ಕೂಡಲೇ ಸ್ಥಳವನ್ನು ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೆಂಪೇಗೌಡರು ಬರೀ ಒಕ್ಕಲಿಗರಷ್ಟೇ ಸೀಮಿತರಲ್ಲ. ಇಡೀ ಬೆಂಗಳೂರಿಗೆ ಬೇಕಾದಂತಹವರು. ನಾಡಪ್ರಭುಗಳ ಮೇಲೆ ನಮಗೂ ಅಭಿಮಾನವಿದೆ. ಹಾಗಾಗಿ ಕೆಂಪೇ ಗೌಡ ಜಯಂತಿ, ಅವರ ಹೆಸರಿನಲ್ಲಿ ಪ್ರಶಸ್ತಿ, ಕೆಂಪೇಗೌಡ ಅಭಿವೃದ್ದಿ ಪ್ರಾಧಿಕಾರ ಹಾಗೂ ವಿವಿಗೆ ಹೆಸರನ್ನು ಇಡಲಾಗಿದೆ. ನಮ್ಮ ಸರ್ಕಾರ ಕೆಂಪೇಗೌಡರ ಹೆಸರಿನಲ್ಲಿ ಹಲವಾರು ಕಾರ್ಯಗಳನ್ನು ಮಾಡಿದೆ. ಮಾಗಡಿಯಲ್ಲಿ 5 ಎಕರೆ ಜಾಗವನ್ನು ವಿಶ್ವವಿದ್ಯಾನಿಲಯಕ್ಕಾಗಿ ನೀಡ ಲಾಗಿದೆ ಎಂದು ವಿವರಿಸಿದರು. ಕೆಂಪೇಗೌಡರ ಪ್ರತಿಮೆ ನಿರ್ಮಿಸಿದ ಶಿಲ್ಪಿ ಶಿವಕುಮಾರ್ಗೆ ಅಭಿನಂದಿಸಿದ ಸಚಿವರು, ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣ ಗೊಂಡಿದೆ. ಒಂದು ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳಿಸ ಲಾಗುವುದು ಎಂದು ಹೇಳಿದರು. ಸಚಿವ ಕೃಷ್ಣಭೈರೇಗೌಡ ಮಾತನಾಡಿ, ಉದ್ಯಾನವನದ ಜಾಗವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಪಾರ್ಕ್ ಅಭಿವೃದ್ಧಿಗೊಳಿಸಲಾಗುವುದು. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು.
ನಾಳೆಯಿಂದಲೇ ಅಭಿವೃದ್ದಿ ಕಾರ್ಯಗಳು ಆರಂಭಗೊಳ್ಳಲಿವೆ. ಹೆಬ್ಬಾಳ ಮೇಲ್ಸೇತುವೆ ಬೆಂಗಳೂರಿನ ಹೆಬ್ಬಾಗಿಲು ಇದ್ದಹಾಗೆ. ಇಂತಹ ಮಹಾದ್ವಾರದಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣಗೊಂಡಿದೆ ಎಂದು ಹೇಳಿದರು.
ಇಲ್ಲಿನ ಸಂಚಾರ ದಟ್ಟಣೆ ತಪ್ಪಿಸಲು ಕಾಮಗಾರಿ ನಡೆಸಲಾಗುತ್ತಿದೆ. ಹೆಚ್ಚುವರಿಯಾಗಿ ಮೇಲ್ಸೇತುವೆ ಅಗಲೀಕರಣ ಕೈಗೊಳ್ಳುತ್ತಿರು ವುದರಿಂದ ಆ ಕಾಮಗಾರಿಯ ವಸ್ತು ಗಳನ್ನು ಪಾರ್ಕ್ನಲ್ಲಿ ಇಡಲಾಗಿದೆ. ಹೀಗಾಗಿ ಪಾರ್ಕ್ನಲ್ಲಿ ಸ್ವಚ್ಛತೆ ಇಲ್ಲವೆಂದವೆನಿ ಸುತ್ತಿದೆ. ಶೀಘ್ರದಲ್ಲೇ ಎಲ್ಲವೂ ಸರಿಯಾಗಲಿದೆ. 3.5 ಕೋಟಿ ರೂ. ವೆಚ್ಚದಲ್ಲಿ ಪಾರ್ಕ್ ಅಭಿವೃದ್ಧಿ ಪಡಿಸುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು.ತಾಮ್ರ ಮತ್ತು ಹಿತ್ತಾಳೆ ಮಿಶ್ರಿತ ಕೆಂಪೇಗೌಡರ ಪ್ರತಿಮೆಯನ್ನು ಆರ್ಸಿಸಿ ಸ್ಲ್ಯಾಬ್ನ ಆರ್ಸಿಸಿ ಡೆಸ್ಕ್ಲ್ಯಾಬ್ ಸ್ಟೋನ್ ಮೇಲೆ ಪ್ರತಿಷ್ಠಾಪಿಸಲಾಗಿದ್ದು, ಪ್ರತಿಮೆ 11.50 ಮೀ.ಉದ್ದ, 9.10 ಮೀ. ಅಗಲ, 8.53 ಮೀ. ಎತ್ತರವಾಗಿದ್ದು, ಸುಮಾರು 53 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದರು.